Eknath Shinde and Uddhav Thackeray , Supreme Court
Eknath Shinde and Uddhav Thackeray , Supreme Court 
ಸುದ್ದಿಗಳು

ಮಹಾರಾಷ್ಟ್ರ ಸ್ಪೀಕರ್‌ ನಮ್ಮ ಆದೇಶ ಮಣಿಸಲಾಗದು: ಬಂಡಾಯ ಶಾಸಕರ ಅನರ್ಹತೆ ಕುರಿತು ತುರ್ತು ನಿರ್ಧರಿಸಲು ಸುಪ್ರೀಂ ಆದೇಶ

Bar & Bench

ಶಿವಸೇನೆಯ ಏಕನಾಥ್‌ ಶಿಂಧೆ ಬಣದ ಶಾಸಕರ ಅನರ್ಹತೆ ಕುರಿತಾದ ಅರ್ಜಿಯ ವಿಚಾರಣೆ ನಡೆಸಲು ತಡ ಮಾಡುತ್ತಿರುವ ಮಹಾರಾಷ್ಟ್ರ ಸ್ಪೀಕರ್‌ ವಿರುದ್ಧ ಶುಕ್ರವಾರ ಸುಪ್ರೀಂ ಕೋರ್ಟ್‌ ಗರಂ ಆಗಿದೆ [ಸುನೀಲ್‌ ಪ್ರಭು ವರ್ಸಸ್‌ ಸ್ಪೀಕರ್‌, ಮಹಾರಾಷ್ಟ್ರ ವಿಧಾನಸಭೆ].

ಮಹಾರಾಷ್ಟ್ರದ ಶಿಂಧೆ ಬಣದ ಶಾಸಕರ ಅನರ್ಹತೆ ಪ್ರಕರಣವನ್ನು ತುರ್ತಾಗಿ ನಿರ್ಧರಿಸುವಂತೆ ಕೋರಿ ಶಿವಸೇನೆಯ ಉದ್ಧವ್‌ ಠಾಕ್ರೆ ಬಣದ ಶಾಸಕ ಸುನೀಲ್‌ ಪ್ರಭು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್‌ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ನಡೆಸಿತು. ಈ ವೇಳೆ ನ್ಯಾಯಾಲಯವು ಇಡೀ ಪ್ರಕ್ರಿಯೆ ನಿಷ್ಫಲಗೊಳ್ಳುವವರೆಗೆ ವಿಚಾರಣೆಯನ್ನು ಎಳೆಯಲಾಗದು. ಮುಂದಿನ ಚುನಾವಣೆಗೂ ಮುನ್ನವೇ ನಿರ್ಧಾರವನ್ನು ಕೈಗೊಳ್ಳಬೇಕು ಎಂದು ಸ್ಪೀಕರ್‌ ಅವರಿಗೆ ತಾಕೀತು ಮಾಡಿತು.

ಮುಂದುವರೆದು, ಬರುವ ಸೋಮವಾರದ ವೇಳೆಗೆ ವಿಚಾರಣಾ ಪ್ರಕ್ರಿಯೆ ಮುಗಿಯುವ ಕಾಲಾನುಕ್ರಮ ಬಿಡುಗಡೆ ಮಾಡದಿದ್ದಲ್ಲಿ ತಾವೇ ಕಾಲಾನುಕ್ರಮ ನಿಗದಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ ಸರ್ವೋಚ್ಚ ನ್ಯಾಯಾಲಯವು, ಈ ಸಂಬಂಧ ಸ್ಪೀಕರ್‌ಗೆ ಸಲಹೆ ಮಾಡುವಂತೆ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಮತ್ತು ಮಹಾರಾಷ್ಟ್ರ ಅಡ್ವೊಕೇಟ್‌ ಜನರಲ್‌ ಡಾ. ಬಿರೇಂದ್ರ ಸರಾಫ್‌ಗೆ ತಿಳಿಸಿದೆ.

“ಸುಪ್ರೀಂ ಕೋರ್ಟ್‌ ಆದೇಶವನ್ನು ಮಣಿಸಲಾಗದು ಎನ್ನುವುದನ್ನು ಯಾರಾದರೂ ಸ್ಪೀಕರ್‌ಗೆ ಸಲಹೆ ನೀಡಬೇಕು. ಯಾವ ಕಾಲಾನುಕ್ರಮವನ್ನು ಅವರು ನಿಗದಿ ಮಾಡುತ್ತಿದ್ದಾರೆ? ಕಾಲಾನುಕ್ರಮ ನಿಗದಿ ಮಾಡುವುದಾಗಿ ಹೇಳಿ ವಿಚಾರಣೆ ತಡ ಮಾಡಲಾಗದು… ಈ ನೆಲೆಯಲ್ಲಿ ಅರ್ಜಿದಾರರ ಆತಂಕ ಸರಿಯಾಗಿದೆ” ಎಂದು ಸಿಜೆಐ ಹೇಳಿದ್ದಾರೆ.

ಶಾಸಕ ಸುನೀಲ್‌ ಪ್ರಭು ಪ್ರತಿನಿಧಿಸಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಸ್ಪೀಕರ್‌ ಪ್ರಕ್ರಿಯೆ ನಿರ್ಧರಿಸಲು ಅಳವಡಿಸಿಕೊಂಡಿರುವ ನಿಯಮದ ಬಗ್ಗೆ ಆಕ್ಷೇಪಿಸಿದರು.

ಆಗ ಪೀಠವು “ಪ್ರಕರಣದ ಕುರಿತು ಗಂಭೀರವಾಗಿದ್ದೇನೆ ಎಂಬ ಭಾವನೆಯನ್ನು ಸ್ಪೀಕರ್‌ ಮೂಡಿಸಬೇಕು. ಸಂವಿಧಾನಕ್ಕೆ ವಿರುದ್ಧವಾದ ನಿರ್ಧಾರ ಬಂದಾಗ ಈ ನ್ಯಾಯಾಲಯ ರಿಟ್ ಅನ್ನು ಚಲಾಯಿಸಬೇಕಾಗುತ್ತದೆ” ಎಂದಿತು.

ದಿನಂಪ್ರತಿ ಪ್ರಕ್ರಿಯೆ ನಡೆಸಿ ಪ್ರಕರಣವನ್ನು ಇತ್ಯರ್ಥಪಡಸುವಂತೆ ಸ್ಪೀಕರ್‌ಗೆ ಸೂಚಿಸಿರುವ ನ್ಯಾಯಾಲಯವು ಸ್ಪೀಕರ್ ಅವರು ಚುನಾವಣಾ ನ್ಯಾಯಾಧಿಕರಣ ಸಹ ಆಗಿದ್ದು, ಅದು ಸರ್ವೋಚ್ಚ ನ್ಯಾಯಾಲಯಕ್ಕೆ ಉತ್ತರಾದಾಯಿಯಾಗಿದೆ ಎಂದರು.

ಸ್ಪೀಕರ್‌ ಅವರಿಂದ ಉಲ್ಲೇಖಿಸಲಾದ ಪ್ರಕ್ರಿಯೆಯು ಏನು ನಡೆಯುತ್ತಿದೆ ಎಂಬುದನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂಬ ಭಾವನೆಯನ್ನು ಮೂಡಿಸುವಂತಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಅನರ್ಹತಾ ಅರ್ಜಿಗಳನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಪ್ರಕ್ರಿಯಾತ್ಮಕ ನಿರ್ದೇಶನಗಳು ಹಾಗೂ ಕಾಲಾನುಕ್ರಮ ಬಿಡುಗಡೆ ಮಾಡುವಂತೆ ಸರ್ವೋಚ್ಚ ನ್ಯಾಯಾಲಯವು ಕಳೆದ ತಿಂಗಳು ಸ್ಪೀಕರ್‌ಗೆ ನಿರ್ದೇಶಿಸಿತ್ತು. ಇದರ ಹೊರತಾಗಿಯೂ ಯಾವುದೇ ನಿರ್ಧಾರ ಕೈಗೊಳ್ಳದಿದ್ದರೆ ಸ್ಪೀಕರ್‌ ಎರಡು ತಿಂಗಳಲ್ಲಿ ನಿರ್ಧಾರ ಪ್ರಕಟಿಸಬೇಕು ಎಂದು ಹೇಳಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.