Supreme Court
Supreme Court 
ಸುದ್ದಿಗಳು

ಮುಸ್ಲಿಂ ಸಹಪಾಠಿಗಳ ಕಪಾಳಮೋಕ್ಷಕ್ಕೆ ಶಿಕ್ಷಕಿ ಸೂಚನೆ: ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಾತ್ಮ ಗಾಂಧಿ ಮರಿಮೊಮ್ಮಗ

Bar & Bench

ಮುಸ್ಲಿಂ ಸಹಪಾಠಿಗಳಿಗೆ ಕಪಾಳಮೋಕ್ಷ ಮಾಡುವಂತೆ ಉತ್ತರ ಪ್ರದೇಶದ ಶಿಕ್ಷಕಿ ವಿದ್ಯಾರ್ಥಿಗಳಿಗೆ ಸೂಚಿಸಿದ ಘಟನೆಯನ್ನು ಮಹಾತ್ಮ ಗಾಂಧಿಯವರ ಮರಿ ಮೊಮ್ಮಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವಿವಾದ ಸೃಷ್ಟಿಯಾಗಿತ್ತು. ಪ್ರಕರಣವನ್ನು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಪಂಕಜ್ ಮಿತ್ತಲ್‌ ಅವರಿರುವ  ಪೀಠ ಬುಧವಾರ ವಿಚಾರಣೆ ನಡೆಸಲಿದೆ.

ಮಹಾತ್ಮಾ ಗಾಂಧಿಯವರ ಮರಿ ಮೊಮ್ಮಗ ತುಷಾರ್ ಗಾಂಧಿ ಅವರು ವಕೀಲ ಶದಾನ್ ಫರಾಸತ್ ಅವರ ಮೂಲಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಖುಬ್ಬಾಪುರ ಗ್ರಾಮದ ಖಾಸಗಿ ಶಾಲೆಗೆ ಪ್ರಸ್ತುತ ಬೀಗಮುದ್ರೆ ಹಾಕಲಾಗಿದೆ. ಶಿಕ್ಷಕಿ ತೃಪ್ತಾ ತ್ಯಾಗಿ, ಬಾಲಕನ ಧರ್ಮವನ್ನು ಉಲ್ಲೇಖಿಸಿ  ಅವಹೇಳನಕಾರಿಯಾಗಿ ಮಾತನಾಡಿದ್ದು, ಆತನಿಗೆ ಬಲವಾಗಿ ಹೊಡೆಯುವಂತೆ ಸಹಪಾಠಿಗಳಿಗೆ ಸೂಚಿಸಿದ್ದರು.

ಆಕೆಯ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಉತ್ತರ ಪ್ರದೇಶ ಪೊಲೀಸರಿಗೆ ಸೂಚಿಸಿರುವ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸಂಬಂಧಪಟ್ಟ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರಿಂದ ಪ್ರತಿಕ್ರಿಯೆ ಕೇಳಿದೆ.

ವರದಿಗಳ ಪ್ರಕಾರ ಐಪಿಸಿ ಸೆಕ್ಷನ್‌ 323 (ಘಾಸಿ ಉಂಟು ಮಾಡುವುದು), 504 (ಶಾಂತಿ ಭಂಗ ಉಂಟು ಮಾಡಲೆಂದು ಉದ್ದೇಶಪೂರ್ವಕ ಅಪಮಾನ ಎಸಗುವುದು) ಅಡಿಯಲ್ಲಿ ಶಿಕ್ಷಕಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆಯಾದರೂ ಆಕೆಯನ್ನು ಇದುವರೆಗೆ ಬಂಧಿಸಿಲ್ಲ.

ಈ ಮಧ್ಯೆ ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಕಿ ತಾನು ತಪ್ಪು ಮಾಡಿದ್ದೇನೆ. ಆದರೆ ಘಟನೆಯಲ್ಲಿ ಯಾವುದೇ ಕೋಮು ಎಳೆ ಇಲ್ಲ ಎಂದು ಪ್ರತಿಪಾದಿಸಿದ್ದಾರೆ.