ಸುದ್ದಿಗಳು

ಬಿ ಎಲ್‌ ಸಂತೋಷ್‌ ಅವಹೇಳನ: ಎಫ್‌ಐಆರ್‌ ರದ್ದತಿ ಕೋರಿ ಹೈಕೋರ್ಟ್‌ ಕದತಟ್ಟಿದ ಮಹೇಶ್‌ ತಿಮರೋಡಿ

ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ಪೊಲೀಸರು ಮತ್ತು ಪ್ರಕರಣದ ದೂರದಾರ ರಾಜೀವ್‌ ಕುಲಾಲ್‌ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿದಿಯಾಗಬೇಕಿದೆ.

Bar & Bench

ಬಿಜೆಪಿ ರಾಷ್ಟ್ರಿಯ ಪ್ರಧಾನ ಕಾರ್ಯದರ್ಶಿ ಬಿ ಎಲ್‌ ಸಂತೋಷ್‌ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಬ್ರಹ್ಮಾವರ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಹೇಶ್‌ ಶೆಟ್ಟಿ ತಿಮರೋಡಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಬ್ರಹ್ಮಾವರ ಠಾಣಾ ಪೊಲೀಸರು ಮತ್ತು ಪ್ರಕರಣದ ದೂರದಾರ ರಾಜೀವ್‌ ಕುಲಾಲ್‌ ಅವರನ್ನು ಪ್ರತಿವಾದಿಗಳನ್ನಾಗಿಸಲಾಗಿದ್ದು, ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿದಿಯಾಗಬೇಕಿದೆ.

ದೂರುದಾರ ರಾಜೀವ್‌ ಕುಲಾಲ್‌ ಮತ್ತು ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಆತನ ವಿರುದ್ಧ ಯಾವುದೇ ಅವಹೇಳಕಾರಿ ಹೇಳಿಕೆ ನೀಡಿಲ್ಲ.  ಮೂರನೇ ವ್ಯಕ್ತಿ ಬಿ ಎಲ್‌ ಸಂತೋಷ್‌ ಪರವಾಗಿ ಕುಲಾಲ್‌ ದೂರು ದಾಖಲಿಸಿದ್ದಾರೆ. ಆತ ದಾಖಲಿಸಿದ ದೂರು ಆಧರಿಸಿ 2025ರ ಆಗಸ್ಟ್‌ 21ರಂದು ತಮ್ಮನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಅರ್ಜಿಯಲ್ಲಿ ತಿಮರೋಡಿ ಆಕ್ಷೇಪಿಸಿದ್ದಾರೆ.

ದೂರು ದಾಖಲಾದ ಕೂಡಲೇ ಪೊಲೀಸರು ಅತಿವೇಗದಲ್ಲಿ ತಮ್ಮ ಪತ್ನಿಗೆ ಮೊದಲ ನೋಟಿಸ್‌ ನೀಡಿದ್ದಾರೆ. ನಂತರ ಎರಡನೇ ನೋಟಿಸ್‌ ನೀಡಿದ್ದಾರೆ. ಈ ಎರಡೂ ನೋಟಿಸ್‌ ನೀಡುವಾಗ ನಿಗದಿತ ನಿಯಮಗಳನ್ನು ಪಾಲಿಸಿಲ್ಲ. ಇನ್ನೂ ತಮ್ಮನ್ನು ಬಂಧಿಸಲು ಸೂಕ್ತ ಕಾರಣ ನೀಡಿಲ್ಲ. ಬಂಧನ ಮಾಹಿತಿ ಕುರಿತು ತಮ್ಮ ಕುಟುಂಬದವರಿಗೆ ಬಂಧನ ಮೆಮೊ ಸಹ ನೀಡಿಲ್ಲ. ಇದರಿಂದ ಬಂಧನ ಪ್ರಕ್ರಿಯೆ ದೋಷಪೂರಿತವಾಗಿದೆ. ಆದ್ದರಿಂದ, ಎಫ್‌ಐಆರ್‌ ರದ್ದುಪಡಿಸಬೇಕು ಎಂದು ತಿಮರೋಡಿ ಅರ್ಜಿಯಲ್ಲಿ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಬಿಜೆಪಿ ಮಂಡಲ ಅಧ್ಯಕ್ಷ ರಾಜೀವ್‌ ಕುಲಾಲ್‌ ಬ್ರಹ್ಮಾವರ  ಪೊಲೀಸ್‌ ಠಾಣೆಗೆ ಆಗಸ್ಟ್‌ 18ರಂದು ದೂರು ನೀಡಿದ್ದರು. ಅವರು ತಮ್ಮ ದೂರಿನಲ್ಲಿ, ಆಗಸ್ಟ್‌ 16ರಂದು ಫೇಸ್‌ಬುಕ್‌ನಲ್ಲಿ ವಿಡಿಯೋ ಒಂದು ಪ್ರಸಾರವಾಗಿತ್ತು. ಅದನ್ನು ವೀಕ್ಷಿಸಿದಾಗ, ಮಹೇಶ್‌ ತಿಮರೋಡಿ ಮಾತನಾಡಿದ್ದು, "ಸೌಜನ್ಯಳ ಅತ್ಯಾಚಾರಿಯನ್ನು ಬಚಾವ್‌ ಮಾಡುವುದಕ್ಕಾಗಿ ರಾಜಕೀಯ ಎಳೆದು ತಂದು ನಾಟಕ ಮಾಡಿದಂತಹ ಪಾಪಿ ಈ ಬಿ ಎಲ್‌ ಸಂತೋಷ್‌. ಡೀಲ್‌ ಮಾಸ್ಟರ್‌. ಕೆಟ್ಟ ಕುಲ ನೀನು. ನಿನ್ನಿಂದ ಆರ್‌ಎಸ್‌ಎಸ್‌ಗೆ ಮುಖಭಂಗ ಆಗುತ್ತದೆ. ನಿನ್ನ ಹತ್ತಿರ ಹಿಂದುತ್ವದ ರಕ್ತ ಇದ್ದರೆ ನಿನಗೆ ಬೆಂಗಳೂರಿನಲ್ಲಿ ಪುತ್ತೂರಿನಲ್ಲಿ ಹೆಣ್ಣು ಮಕ್ಕಳು ಬೇಕು. ನಿನಗೆ ಹಿಂದುತ್ವದ ಪಾಠ ನಾವು ಕಲಿಸುತ್ತೇವೆ. ಅಧರ್ಮದ ಕೆಲಸಕ್ಕೆ ಕೈ ಹಾಕಿದರೆ ಇವರ ಯೋಗ್ಯತೆ ಬೆಂಕಿ ಪಾಲಾಗಿದೆ. ಧರ್ಮಸ್ಥಳ ಇಂದು ವಿರೇಂದ್ರ ಹೆಗ್ಗಡೆ ಪಾಲಾಗಿದೆ. ಯಾರು ಮಾಡಿದ್ದು, ಇವನೇ ಮಾಡಿದ್ದು. ಮಾನಗೆಟ್ಟವ. ಅರೆ..ಯೋಗ್ಯತೆ ಇಲ್ಲದವ. ನಾಲಾಯಕ್‌ ಎಂದು ಹೇಳಿದ್ದಾರೆ” ಎಂದು ಹೇಳಿದ್ದಾರೆ.

ಆ ಮೂಲಕ ಬಿಜೆಪಿ ಪಕ್ಷದಲ್ಲಿ ಉನ್ನತ ಪದಾಧಿಕಾರಿಯಾಗಿರುವ ಬಿ ಎಲ್‌ ಸಂತೋಷ್‌ ವಿರುದ್ಧ ತೇಜೋವಧೆ ಹೇಳಿಕೆ ನೀಡಿದ್ದಾರೆ. ಹಿಂದೂ ಧರ್ಮದ ನಾಯಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವಹೇಳನ ಮಾಡಿ ಬೇರೆ ಬೇರೆ ಧರ್ಮಗಳ ಹಾಗೂ ಸಮುದಾದ ನಡುವೆ ದ್ವೇಷ ಭಾವನೆಯನ್ನು ಉಂಟು ಮಾಡುವ ರೀತಿಯಲ್ಲಿ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಕೋರಲಾಗಿದೆ.

ಈ ದೂರು ಆಧರಿಸಿ ಬ್ರಹ್ಮಾವರ ಠಾಣಾ ಪೊಲೀಸರು, ಸಮಾಜದಲ್ಲಿ ಶಾಂತಿ ಸೌಹಾರ್ದತೆ ಕದಡಲು ಯತ್ನಿಸಿದ, ಉದ್ದೇಶಪೂರ್ವಕವಾಗಿ ಅವಮಾನಿಸಿದ ಮತ್ತು ಸುಳ್ಳು ಸುದ್ದಿ ಹಬ್ಬಿಸಿ ವಿವಿಧ ಸಮುದಾಯ ಹಾಗೂ ಧರ್ಮಗಳ ನಡುವೆ ದ್ವೇಷ ಭಾವನೆ ಉಂಟುಮಾಡಿದ ಆರೋಪದ ಮೇಲೆ ಬಿಎನ್‌ಎಸ್‌ಎಸ್‌ ಸೆಕ್ಷನ್‌ 196(1), 352 ಮತ್ತು 353(2) ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಈ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಮಹೇಶ್‌ ತಿಮರೋಡಿ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದಾರೆ.