<div class="paragraphs"><p>Justice M Nagaprasanna and Karnataka HC's Dharwad Bench</p></div>

Justice M Nagaprasanna and Karnataka HC's Dharwad Bench

 
ಸುದ್ದಿಗಳು

ಕೌಟುಂಬಿಕ ದೌರ್ಜನ್ಯ ನಿಯಂತ್ರಣ ಕಾಯಿದೆ ಅಡಿ ನಿಗದಿಯಾದ ಜೀವನಾಂಶವನ್ನು ಸೆಕ್ಷನ್ 127ರ ಅಡಿ ಹೆಚ್ಚಿಸಲಾಗದು: ಹೈಕೋರ್ಟ್

Bar & Bench

ಪತಿ ತೊರೆದಿರುವ ಮಹಿಳೆಗೆ ಕೌಟುಂಬಿಕ ದೌರ್ಜನ್ಯ (Domestic Violence) ನಿಯಂತ್ರಣ ಕಾಯಿದೆ 2005ರ ಅಡಿ ನಿಗದಿಪಡಿಸಿರುವ ಜೀವನಾಂಶವನ್ನು ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್ 127ರ ಅಡಿ ಹೆಚ್ಚಳ ಮಾಡಲಾಗದು ಎಂದು ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಈಚೆಗೆ ಆದೇಶಿಸಿದೆ.

ಪತಿ ಶಿವಾನಂದ್ ಸಲ್ಲಿಸಿದ್ದ ಕ್ರಿಮಿನಲ್ ಮನವಿ ಆಲಿಸಿದ್ದ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಈ ಆದೇಶ ಮಾಡಿದೆ. ನಿಯಮದಂತೆ ಸಿಆರ್‌ಪಿಸಿ ಸೆಕ್ಷನ್ 125ರಡಿ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿ, ನ್ಯಾಯಾಲಯದಿಂದ ಆ ಕುರಿತಂತೆ ಆದೇಶ ಪಡೆಯಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಪತ್ನಿ ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯಡಿ ಜೀವನಾಂಶ ಪಡೆಯುತ್ತಿದ್ದಾರೆ. ಆ ಜೀವನಾಂಶವನ್ನು ಹೆಚ್ಚಳಕ್ಕೆ ಅದೇ ಕಾಯಿದೆಯಡಿ ಅರ್ಜಿ ಸಲ್ಲಿಸಬೇಕೇ ಹೊರತು, ಬೇರೆ ಕಾಯಿದೆಯಡಿ ಅಲ್ಲ ಎಂದು ನ್ಯಾಯಾಲಯ ಹೇಳಿದೆ.

ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಕೌಟುಂಬಿಕ ದೌರ್ಜನ್ಯ ಕಾಯಿದೆ ಅಡಿ ಸೆಕ್ಷನ್ 12ರಡಿ ಪತ್ನಿಗೆ ನಿಗದಿಪಡಿಸಿದ್ದ ಜೀವನಾಂಶವನ್ನು 1 ಸಾವಿರದಿಂದ 5 ಸಾವಿರಕ್ಕೆ ಹೆಚ್ಚಳ ಮಾಡಿತ್ತು. ಅದನ್ನು ಸೆಷನ್ಸ್ ನ್ಯಾಯಾಧೀಶರು ಎತ್ತಿಹಿಡಿದಿದ್ದರು. ಇದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯವು ಅರ್ಜಿದಾರರು ಸಿಆರ್‌ಪಿಸಿ ಸೆಕ್ಷನ್ 125ರಡಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಬಹುದು, ಅಂತೆಯೇ ಆ ಜೀವನಾಂಶದಲ್ಲಿನ ಬದಲಾವಣೆಗೆ/ಹೆಚ್ಚಳಕ್ಕೆ ಅದೇ ಕಾಯಿದೆಯ ಸೆಕ್ಷನ್ 127ರಡಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೆಕ್ಷನ್‌ 127ರ ಅಡಿ ಜೀವನಾಂಶದಲ್ಲಿ ಬದಲಾವಣೆ ಮಾಡಲು ಅದಕ್ಕಿಂತ ಮೊದಲು ಸೆಕ್ಷನ್‌ 125ರ ಅಡಿ ಜೀವನಾಂಶ ಕೋರಿರಬೇಕಾಗುತ್ತದೆ ಎಂದಿತು. ಪ್ರಸ್ತುತ ಪ್ರಕರಣದಲ್ಲಿ ಜೀವನಾಂಶವನ್ನು ಕೌಟುಂಬಿಕ ದೌರ್ಜನ್ಯ ನಿಯಂತ್ರಣ ಕಾಯಿದೆಯಡಿ ನಿಗದಿಪಡಿಸಲಾಗಿದ್ದ ಅದರ ಬದಲಾವಣೆಯನ್ನು ಸಿಆರ್‌ಪಿಸಿ ಸೆಕ್ಷನ್‌ 127ರ ಅಡಿ ಮಾಡಲಾಗುದು ಎನ್ನುವುದನ್ನು ಸ್ಪಷ್ಟಪಡಿಸಿತು.

ಅದರೆ, ಈ ಪ್ರಕರಣದಲ್ಲಿ ಕೌಟುಂಬಿಕ ದೌರ್ಜನ್ಯ ಕಾಯಿದೆಯಡಿ ಜೀವನಾಂಶ ನಿಗದಿಪಡಿಸಲಾಗಿದೆ. ಸಿಆರ್‌ಪಿಸಿಯಲ್ಲಿ ಜೀವನಾಂಶ ನಿಗದಿಯಾಗಿದ್ದರೆ ಮಾತ್ರ ಅದೇ ಕಾಯಿದೆಯ ಬೇರೆ ಸೆಕ್ಷನ್ ನಲ್ಲಿ ಹೆಚ್ಚಳಕ್ಕೆ ಅವಕಾಶವಿದೆ. ಈ ವಿಚಾರದಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ಹೊರಡಿಸುವ ಆದೇಶ ಕಾನೂನು ಬಾಹಿರವಾಗಿದೆ, ಹಾಗಾಗಿ ರದ್ದುಪಡಿಸಲಾಗುತ್ತಿದೆ ಎಂದು ಪೀಠವು ಹೇಳಿದೆ.

Shivanand versus Basavva.pdf
Preview