Delhi High Court 
ಸುದ್ದಿಗಳು

ವಯಸ್ಕ ಹುಡುಗಿ ತನ್ನ ಇಚ್ಛೆಯಂತೆ ಎಲ್ಲಿ ಬೇಕಾದರೂ, ಯಾರೊಂದಿಗಾದರೂ ನೆಲೆಸಬಹುದು: ದೆಹಲಿ ಹೈಕೋರ್ಟ್

ಪರ್ವೀನ್ ಎನ್ನುವವರು ಸಹೋದರಿ ಸುಲೇಖಾ 2020ರ ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದಾಳೆ ಎಂದು ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆ ವೇಳೆ ಅಭಿಪ್ರಾಯಪಟ್ಟ ದೆಹಲಿ ಹೈಕೋರ್ಟ್.

Bar & Bench

ವಯಸ್ಕ ಹುಡುಗಿ ತಾನು ಇಚ್ಛಿಸಿದಂತೆ ಎಲ್ಲಿ ಬೇಕಾದರೂ ಮತ್ತು ಯಾರ ಜೊತೆ ಬೇಕಾದರೂ ನೆಲೆಸಬಹುದು ಎಂದು ಮಂಗಳವಾರ ದೆಹಲಿ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ವಿಪಿನ್‌ ಸಾಂಘಿ ಮತ್ತು ರಜ್ನೀಶ್‌ ಭಟ್ನಾಗರ್‌ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ (ಪರ್ವೀನ್‌ ವರ್ಸಸ್‌ ಸ್ಟೇಟ್‌).

ನಾಪತ್ತೆಯಾಗಿದ್ದ ಬಾಲಕಿಯ ಕುಟುಂಬ ಸದಸ್ಯರು ಈ ಸಂಬಂಧ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಅರ್ಜಿ ವಿಚಾರಣೆಯನ್ನು ಪೀಠ ನಡೆಸಿತು. ತನ್ನ ಸಹೋದರಿ ಸುಲೇಖಾ 2020ರ ಸೆಪ್ಟೆಂಬರ್‌ನಿಂದ ನಾಪತ್ತೆಯಾಗಿದ್ದಾಳೆ ಎಂದು ಪರ್ವೀನ್‌ ಮನವಿ ಸಲ್ಲಿಸಿದ್ದರು. ಪ್ರಕರಣದಲ್ಲಿ ಬಬ್ಲೂ ಕೈವಾಡವಿರುವ ಕುರಿತು ಪರ್ವೀನ್‌ ಶಂಕೆ ವ್ಯಕ್ತಪಡಿಸಿದ್ದರು.

ನೋಟಿಸ್‌ ಜಾರಿಗೊಳಿಸಿದ ಬಳಿಕ ದೆಹಲಿ ಪೊಲೀಸರು ಸುಲೇಖಾ ಅವರನ್ನು ಪತ್ತೆಹಚ್ಚಿದ್ದರು. ಬಳಿಕ ಸುಲೇಖಾ ಅವರನ್ನು ವಿಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ತನ್ನ ಇಚ್ಛೆಯಂತೆ ಬಬ್ಲೂ ಜೊತೆ ಹೋಗಿ ಆತನನ್ನು ಮದುವೆಯಾಗಿರುವುದಾಗಿ ಸುಲೇಖಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಹುಡುಗಿಯ ಹೇಳಿಕೆಯನ್ನು ಕ್ರಿಮಿನಲ್‌ ಅಪರಾಧ ಸಂಹಿತೆಯ ಸೆಕ್ಷನ್‌ 164ರ ಅಡಿ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಸ್ಥಿತಿಗತಿ ವರದಿ ಸಲ್ಲಿಸಿದ್ದಾರೆ. ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಆರೋಪಿಸಲಾದ ದಿನದಿಂದಲೇ ಆಕೆ ವಯಸ್ಕ ಹಂತ ದಾಟಿದ್ದಳು ಎಂದು ಪೊಲೀಸರು ವಿವರಿಸಿದ್ದಾರೆ.

ಇದನ್ನು ಆಲಿಸಿದ ಪೀಠವು “ಬಾಲಕಿಯು ವಯಸ್ಕ ಹಂತ ತಲುಪಿರುವುದರಿಂದ ಆಕೆಯ ಇಚ್ಛೆಯಂತೆ ಯಾರ ಜೊತೆಗೆ ಬೇಕಾದರೂ ಎಲ್ಲಿ ಬೇಕಾದರೂ ವಾಸಿಸಬಹುದು. ಆದ್ದರಿಂದ ಸುಲೇಖಾಳನ್ನು ಮೂರನೇ ಪ್ರತಿವಾದಿಯಾದ ಬಬ್ಲೂ ಜೊತೆ ನೆಲೆಸಲು ಬಿಡಬೇಕು ಎಂದು ನಾವು ಆದೇಶಿಸುತ್ತೇವೆ” ಎಂದು ಹೇಳಿದೆ.

ಅಗತ್ಯಬಿದ್ದರೆ ಪೊಲೀಸರ ಸಹಾಯವನ್ನು ಸುಲೇಖಾ ಮತ್ತು ಬಬ್ಲೂ ಪಡೆದುಕೊಳ್ಳಬಹುದು ಎಂದಿರುವ ಪೀಠವು, “ಸುಲೇಖಾ ಅಥವಾ ಬಬ್ಲೂಗೆ ಬೆದರಿಕೆ ಹಾಕುವ ಮೂಲಕ ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳದಂತೆ ಅರ್ಜಿದಾರರು ಮತ್ತು ಸುಲೇಖಾಳ ಪೋಷಕರನ್ನು ಪೊಲೀಸರು ಸಮಾಲೋಚನೆಗೆ ಒಳಪಡಿಸಬೇಕು. ಸುಲೇಖಾ ಮತ್ತು ಬಬ್ಲೂ ನೆಲೆಸಿರುವ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿ ಗಸ್ತಿನಲ್ಲಿರುವ ಪೊಲೀಸ್‌ ಕಾನ್‌ಸ್ಟೆಬಲ್‌ ಸಂಪರ್ಕ ಸಂಖ್ಯೆಯನ್ನು ದಂಪತಿಗೆ ನೀಡಬೇಕು. ಇದರಿಂದ ಅಗತ್ಯಬಿದ್ದರೆ ಸುಲೇಖಾ ಮತ್ತು ಬಬ್ಲೂ ಪೊಲೀಸರ ಜೊತೆ ಸಂಪರ್ಕ ಸಾಧಿಸಲು ಅನುಕೂಲವಾಗುತ್ತದೆ” ಎಂದು ಹೇಳಿದೆ.

ಮೇಲಿನ ಕಾರಣದ ಹಿನ್ನೆಲೆಯಲ್ಲಿ ಮನವಿಯನ್ನು ವಿಲೇವಾರಿ ಮಾಡಲಾಗಿದೆ. ವಕೀಲ ಶರದ್‌ ಮಲ್ಹೋತ್ರಾ ಅರ್ಜಿದಾರರ ಪರ, ವಕೀಲ ರಾಹುಲ್‌ ಮೆಹ್ರಾ ಅವರು ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದರು.