Allahabad High Court (Lucknow Bench), Adipurush movie  
ಸುದ್ದಿಗಳು

[ಆದಿಪುರುಷ್ ಪ್ರಕರಣ] ಕುರಾನ್ ತಪ್ಪಾಗಿ ಬಿಂಬಿಸಿ ನೋಡಿ, ಏನಾಗುತ್ತದೆ ಎಂದು ತಿಳಿಯುತ್ತದೆ: ಅಲಾಹಾಬಾದ್ ಹೈಕೋರ್ಟ್ ಕಿಡಿ

ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ ಎಂದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸಿಬಿಎಫ್‌ಸಿ ವೈಯಕ್ತಿಕ ಅಫಿಡವಿಟ್ ಸಲ್ಲಿಸಬೇಕು ಎಂಬುದಾಗಿ ತಾಕೀತು ಮಾಡಿದರು.

Bar & Bench

ಆದಿಪುರುಷ್‌ ಚಿತ್ರ ಪ್ರದರ್ಶನದ ವಿರುದ್ಧ ಸಲ್ಲಿಸಲಾಗಿದ್ದ ಮನವಿಗೆ ಪ್ರತಿಕ್ರಿಯೆಯಾಗಿ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ಬುಧವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಸಿ) ಗೆ ಸೂಚಿಸಿದೆ.

ಧಾರ್ಮಿಕ ಗ್ರಂಥಗಳನ್ನು ಆಧರಿಸಿದ ಚಲನಚಿತ್ರಗಳ ತಯಾರಿಕೆಯಿಂದ ದೂರ ಉಳಿಯುವಂತೆ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಮತ್ತು ಶ್ರೀ ಪ್ರಕಾಶ್ ಸಿಂಗ್ ಅವರಿದ್ದ ಪೀಠ ಇದೇ ವೇಳೆ ಚಿತ್ರ ನಿರ್ಮಾಣಕಾರರಿಗೆ ಆಗ್ರಹಿಸಿತು.

“ನೀವು ಕುರಾನ್ ಅಥವಾ ಬೈಬಲ್ ಗ್ರಂಥಗಳನ್ನೂ ಸಹ ಮುಟ್ಟಬಾರದು. ನೀವು ಯಾವುದೇ ಧರ್ಮವನ್ನು ಮುಟ್ಟಬಾರದು ಎಂದು ನಾನು ಸ್ಪಷ್ಟಪಡಿಸುತ್ತೇನೆ. ದಯವಿಟ್ಟು ತಪ್ಪಾಗಿ ಧರ್ಮಗಳನ್ನು ಬಿಂಬಿಸಬೇಡಿ. ನ್ಯಾಯಾಲಯಕ್ಕೆ ಯಾವುದೇ ಧರ್ಮವಿಲ್ಲ” ಎಂದು ನ್ಯಾಯಾಲಯ ನುಡಿಯಿತು.

“ಕುರಾನ್‌ ಅನ್ನು ತಪ್ಪಾಗಿ ಬಿಂಬಿಸಿ ಸಣ್ಣ ಸಾಕ್ಷ್ಯಚಿತ್ರ ನಿರ್ಮಿಸಿ ನೋಡಿ, ಆಗ ಏನಾಗುತ್ತದೆ ಎಂಬುದು ನಿಮಗೆ ತಿಳಿಯುತ್ತದೆ” ಎಂದು ನ್ಯಾಯಾಲಯ ಮೌಖಿಕವಾಗಿ ಅಭಿಪ್ರಾಯ ವ್ಯಕ್ತಪಡಿಸಿತು.

ಇದೇ ವೇಳೆ ನ್ಯಾಯಾಲಯ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸಿಬಿಎಫ್‌ಸಿ ವೈಯಕ್ತಿಕ ಅಫಿಡವಿಟ್‌ ಸಲ್ಲಿಸಬೇಕು ಎಂಬುದಾಗಿ ತಾಕೀತು ಮಾಡಿತು.

ನಿನ್ನೆ ನಡೆದ ವಿಚಾರಣೆ ವೇಳೆ (ಜೂನ್ 27) ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಹಾಗೂ ಸಿಬಿಎಫ್‌ಸಿಯಿಂದ ಪ್ರಕರಣದ ಕುರಿತು ಸಂಪೂರ್ಣ ಸೂಚನೆ ಪಡೆಯುವಂತೆ ಉಪ ಸಾಲಿಸಿಟರ್‌ ಜನರಲ್‌ (ಡಿಎಸ್‌ಜಿ) ಅವರಿಗೆ ನ್ಯಾಯಾಲಯ ಸೂಚಿಸಿತ್ತು. ಅದರನ್ವಯ ಇಂದು ವಾದ ಮಂಡಿಸಿದ ಡಿಎಸ್‌ಜಿ ಎಸ್‌ ಬಿ ಪಾಂಡೆ ಐದು ಮಂದಿ ಪರಿಣತರ ತಂಡ ಸಿನಿಮಾವನ್ನು ಪ್ರಮಾಣೀಕರಿಸಿದೆ. ಈ ಪ್ರಮಾಣಪತ್ರವನ್ನು ಅರ್ಜಿದಾರರು ಪ್ರಶ್ನಿಸಿಲ್ಲ ಎಂದರು.

ಆಗ ನ್ಯಾಯಾಲಯ “ರಾಮಾಯಣವನ್ನು ಸಿನಿಮಾದಲ್ಲಿ ಹೀಗೆ ಚಿತ್ರಿಸಿದವರಿಗೆ ಸೆನ್ಸಾರ್‌ ಅವರು ಪ್ರಮಾಣಪತ್ರ ನೀಡಿದ್ದಾರೆ ಎಂದು ನೀವು ಹೇಳುತ್ತಿದ್ದೀರಿ, ಹಾಗಿದ್ದರೆ ಅವರು ನಿಜಕ್ಕೂ ಧನ್ಯರು!" ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿತು.

ಆದಿಪುರುಷ್‌ ಸಿನಿಮಾ ರಾಮಾಯಣದ ಒಟ್ಟಂದದ ಮೇಲೆ ಶಂಕೆ ವ್ಯಕ್ತಪಡಿಸಿದ್ದು ಸಾಂಸ್ಕೃತಿಕ ಪರಂಪರೆ ಮತ್ತು ಹಿಂದೂ ಧರ್ಮವನ್ನು ದೂಷಿಸಿದೆ ಎಂದು ದೂರಿ ಅರ್ಜಿದಾರರು ನ್ಯಾಯಾಲಯದ ಮೊರೆ ಹೋಗಿದ್ದರು.