ದೂರದರ್ಶನಕ್ಕೆ ಸೇರ್ಪಡೆಯಾದಾಗಿನಿಂದಲೂ ಸಹೋದ್ಯೋಗಿಗಳ ವಿರುದ್ಧ ದುರುದ್ದೇಶಪೂರಿತ ಪ್ರಕರಣಗಳ ಮೂಲಕ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸಿರುವ ದೂರದರ್ಶನ ಮಾಜಿ ಉದ್ಯೋಗಿ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರ ನಡೆ ಸರ್ವತಾ ಒಪ್ಪುವಂಥದ್ದಲ್ಲ ಎಂದು ಕಟುವಾಗಿ ನುಡಿದಿರುವ ಬೆಂಗಳೂರಿನ ನ್ಯಾಯಾಲಯವು ಫಿರ್ಯಾದಿ ಎನ್ ಕೆ ಮೋಹನ್ ರಾಮ್ ಅವರಿಗೆ ₹1.2 ಲಕ್ಷ ರೂಪಾಯಿ ಹಣವನ್ನು ಪರಿಹಾರವಾಗಿ ಪಾವತಿಸಲು ಜೋಶಿಗೆ ಆದೇಶಿಸಿದೆ.
ಅಲ್ಲದೇ, ಫೆಬ್ರವರಿ 24 ಅಥವಾ 25ರಂದು ದೂರದರ್ಶನ ಮತ್ತು ಎಲ್ಲಾ ಪ್ರಮುಖ ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೆಗಳ ಮುಖೇನ ಎನ್ ಕೆ ಮೋಹನ್ ರಾಮ್ ಅವರಿಗೆ ಜೋಶಿ ಬೇಷರತ್ ಕ್ಷಮೆ ಕೋರಬೇಕು ಎಂದು ಕಟ್ಟಪ್ಪಣೆ ಮಾಡಿದೆ.
ನಕಲಿ ಪ್ರಕರಣ ದಾಖಲಿಸಿ ಮಾನಸಿಕ ವೇದನೆ ಸೃಷ್ಟಿಸುವುದಲ್ಲದೇ ಅಪಾರ ನಷ್ಟಕ್ಕೆ ಕಾರಣರಾಗಿರುವ ಮಹೇಶ್ ಜೋಶಿ ₹1.2 ಲಕ್ಷ ಹಣವನ್ನು ವಾರ್ಷಿಕ ಶೇ. 24ರ ಬಡ್ಡಿ ದರದಲ್ಲಿ ಪಾವತಿಸಲು ಆದೇಶಿಸಬೇಕು ಎಂದು ಕೋರಿ ಎನ್ ಕೆ ಮೋಹನ್ ರಾಮ್ ಸಲ್ಲಿಸಿದ್ದ ಮೂಲ ದಾವೆಯನ್ನು 14ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶೆ ನಳಿನಿ ಕುಮಾರ್ ಅವರು ಈಚೆಗೆ ಪುರಸ್ಕರಿಸಿದ್ದಾರೆ.
“ಮಹೇಶ್ ಜೋಶಿ ಅವರ ನಡೆಯನ್ನು ಅವರ ಪರ ವಕೀಲರು ಬಲವಾಗಿ ಸಮರ್ಥಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅದಕ್ಕೆ ಜೋಶಿ ಅರ್ಹರಲ್ಲ. ತಮ್ಮ ವೃತ್ತಿ ಬದುಕು ಆರಂಭವಾದಗಿನಿಂದ ಇಲ್ಲಿಯವರೆಗೂ ಅವರು ತಮ್ಮ ಸಹೋದ್ಯೋಗಿಗಳೊಂದಿಗೆ ಪ್ರತೀಕಾರ ತೀರಿಸಿಕೊಳ್ಳುವ ರೀತಿ ನಡೆದುಕೊಂಡಿದ್ದಾರೆ. ತನ್ನ ಸಹೋದ್ಯೋಗಿಗಳಿಂತ ಮೇಲಿನ ಸ್ಥಾನದಲ್ಲಿದ್ದ ಮಹೇಶ್ ಜೋಶಿ ಅವರು ತಮ್ಮ ವಿರುದ್ಧದ ನಂಬಿಕೆಗಳನ್ನು ಸುಳ್ಳು ಎಂದು ಸಾಬೀತುಪಡಿಸುವ ರೀತಿಯಲ್ಲಿ ನಡೆದುಕೊಳ್ಳಬೇಕಿತ್ತು. ಅಲ್ಲದೇ, ತಾನು ವಹಿಸಿಕೊಂಡಿರುವ ಜವಾಬ್ದಾರಿಯ ಮೂಲಕ ಸಂಸ್ಥೆಯ ಬೆಳವಣಿಗೆಗೆ ಮುಂದಾಗಬೇಕಿತ್ತು" ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಮುಂದುವರೆದು, "ಜೋಶಿ ಅವರು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳುವ ಯತ್ನ ಮಾಡಿದ್ದಾರೆ. ಮಾಹಿತಿ ಮತ್ತು ಪ್ರಸಾರ ಇಲಾಖೆಯ ವಿಚಕ್ಷಣಾ ವಿಭಾಗಕ್ಕೆ ಜೋಶಿ ಬರೆದಿರುವ ಪತ್ರದಲ್ಲಿ ಪ್ರತಿಯೊಂದು ಶಬ್ದವೂ ಎನ್ ಕೆ ಮೋಹನ್ ರಾಮ್ ವಿರುದ್ಧ ಪ್ರತೀಕಾರಕ್ಕೆ ಉದಾಹರಣೆಯಾಗಿದೆ. ಹೀಗಾಗಿ, ಎನ್ ಕೆ ಮೋಹನ್ ರಾಮ್ ಕೋರಿರುವಂತೆ ಪರಿಹಾರ ಪಾವತಿಸಲು ಜೋಶಿಗೆ ಆದೇಶಿಸುವುದಷ್ಟೇ ಸಾಲದು. ಈ ಮೂಲಕ ಸರ್ಕಾರಿ ಅಧಿಕಾರಿಗಳು ತಮ್ಮ ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಯತ್ನಿಸುವವರಿಗೆ ಸಂದೇಶ ರವಾನಿಸಬೇಕಿದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಕಠಿಣವಾಗಿ ಹೇಳಿದೆ.
“ಎನ್ ಕೆ ಮೋಹನ್ ರಾಮ್ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಮಹೇಶ್ ಜೋಶಿ ಯತ್ನಿಸಿರುವುದು ದೃಢವಾಗಿದ್ದು, ಫೆಬ್ರವರಿ 24 ಅಥವಾ 25ರಂದು ಮಹೇಶ್ ಜೋಶಿ ಅವರು ಎನ್ ಕೆ ಮೋಹನ್ ರಾಮ್ ಮತ್ತು ತನ್ನ ಇತರೆ ಸಹೋದ್ಯೋಗಿಗಳಿಗೆ ಪ್ರಮುಖ ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಲ್ಲಿ ಬೇಷರತ್ ಕ್ಷಮೆ ಯಾಚಿಸಬೇಕು. ಅಂದೇ ಸಂಜೆ 6.30ರಿಂದ 8.30ರ ನಡುವೆ ಮೂರು ಎಪಿಸೋಡ್‌ಗಳಲ್ಲಿ ಕನ್ನಡ ದೂರರ್ಶನ ಕೇಂದ್ರದಲ್ಲಿ ಬೇಷರತ್ ಕ್ಷಮೆ ಕೋರಿರುವುದು ಪ್ರಸಾರವಾಗಬೇಕು. ಈ ನಿರ್ದೇಶನದ ಅನುಪಾಲನೆಯನ್ನು ಏಳು ದಿನಗಳಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಬೇಕು. ಈ ಆದೇಶ ಪಾಲಿಸಲು ಮಹೇಶ್ ಜೋಶಿ ವಿಫಲವಾದರೆ ಕಚೇರಿಯು ಸ್ವಯಂಪ್ರೇರಿತವಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಳ್ಳಬೇಕು. ಅಲ್ಲದೇ, ಏಳು ದಿನ ಜೈಲು ವಾಸ ಅನುಭವಿಸಬೇಕು” ಎಂದು ನ್ಯಾಯಾಲಯ ಮಹತ್ವದ ಆದೇಶ ಮಾಡಿದೆ. ವಿಚಾರಣೆಯನ್ನು ಫೆಬ್ರವರಿ 27ಕ್ಕೆ ನಿಗದಿಪಡಿಸಿದೆ.
ಪ್ರಕರಣದ ಹಿನ್ನೆಲೆ: 1981ರಲ್ಲಿ ಮೋಹನ್ ರಾಮ್ ಅವರು ಎಐಆರ್-ದೂರದರ್ಶನದಲ್ಲಿ ಉಪ ನಿರ್ದೇಶಕರಾಗಿ (ಕಾರ್ಯಕ್ರಮ) ಕೆಲಸ ಆರಂಭಿಸಿದ್ದರು. ಅಲ್ಲಿಯೇ ಮಹೇಶ್ ಜೋಶಿ ಅವರು ದೂರದರ್ಶನ ಕೇಂದ್ರದ ಕಾರ್ಯಕಾರಿ ನಿರೂಪಕರಾಗಿ ಕೆಲಸ ಮಾಡುತ್ತಿದ್ದರು. 7/1/1999ರಲ್ಲಿ ಜೋಶಿ ಅವರು ರಾಮ್ ಮತ್ತು ಇತರೆ 26 ಮಂದಿಯ ವಿರುದ್ಧ ಮಾನಹಾನಿ ಪ್ರಕರಣ ದಾಖಲಿಸಿದ್ದರು. ದೆಹಲಿಯ ಪ್ರಸಾರ ಭಾರತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ರಾಮ್ ಮತ್ತು ಇತರರು ಎಐಆರ್ ಮತ್ತು ದೂರದರ್ಶನ ಕಾರ್ಯಕ್ರಮ ಸಿಬ್ಬಂದಿ ಸಂಸ್ಥೆ ಹೆಸರಿನ ಅಡಿ ಪಿತೂರಿ ನಡೆಸಿ 19/4/1999ರಂದು ದೂರು ನೀಡಿದ್ದರು ಎಂಬುದು ಆರೋಪವಾಗಿದೆ. ಈ ಪ್ರಕರಣದಲ್ಲಿ ರಾಮ್ ಮತ್ತಿತರರು ಖುಲಾಸೆಯಾಗಿದ್ದರು.
ಇದನ್ನು ಜೋಶಿ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದು, ಹೈಕೋರ್ಟ್ 5/7/2011ರಂದು ರಾಮ್ ಮತ್ತಿತರರ ಪರ ಆದೇಶ ನೀಡಿತ್ತು. ಈ ಸಂದರ್ಭದಲ್ಲಿ ಪ್ರಕರಣದಲ್ಲಿ ಮೊದಲನೇ ಆರೋಪಿಯಾಗಿದ್ದ, ಎಐಆರ್ ಮತ್ತು ದೂರದರ್ಶನದ ಕಾರ್ಯಕ್ರಮ ಸಿಬ್ಬಂದಿ ಸಂಸ್ಥೆಯ ರಾಷ್ಟ್ರೀಯ ಅಧ್ಯಕ್ಷ ಎನ್ನಲಾದ ಸುರೇಶ್ ಚಂದ್ರ ನಾಯಕ್ 25/6/2002ರಂದು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ರಾಮ್ ಮತ್ತು ಇತರರು ಕಾರ್ಯಕ್ರಮ ಸಿಬ್ಬಂದಿ ಸಂಸ್ಥೆಯ ಸದಸ್ಯರಲ್ಲ. ಇಂಥ ಘಟಕವು ಬೆಂಗಳೂರು ದೂರದರ್ಶನ ಕೇಂದ್ರದಲ್ಲಿಲ್ಲ. ಅಂಥ ಪತ್ರ ಬರೆಯುವ ಅಧಿಕಾರ ರಾಮ್ ಮತ್ತು ಇತರರಿಗೆ ಇಲ್ಲ ಎಂಬ ಒಕ್ಕಣೆಯ ಅಫಿಡವಿಟ್ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ನಕಲಿ ಅಫಿಡವಿಟ್ ಲಾಭ ಪಡೆದಿದ್ದ ಜೋಶಿಯು 30/8/2004ರಂದು ಜೆ ಸಿ ನಗರ ಠಾಣೆಯಲ್ಲಿ ಎರಡು ವರ್ಷಗಳ ಬಳಿಕ ರಾಮ್ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಇದನ್ನು ಆಧರಿಸಿ ರಾಮ್ ಮತ್ತು ಇತರರ ವಿರುದ್ಧ ಪೊಲೀಸರು 415, 419, 464, 468, 469, 471 ಮತ್ತು 474 ಜೊತೆಗೆ ಸೆಕ್ಷನ್ 120B ಅಡಿ ಪ್ರಕರಣ ದಾಖಲಿಸಿದ್ದರು.
ಈ ಪ್ರಕರಣದಲ್ಲಿ ರಾಮ್ ಮತ್ತು ಇತರರು ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಅಲ್ಲದೇ, ಪ್ರಕರಣವನ್ನು 18/4/2013ರಂದು ಹೈಕೋರ್ಟ್ ವಜಾ ಮಾಡಿತ್ತು. ಇದೇ ಸಂದರ್ಭದಲ್ಲಿ ಹೈಕೋರ್ಟ್, ಜೋಶಿ ಅವರು ಸಹೋದ್ಯೋಗಿಗಳ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಪ್ರಕರಣ ದಾಖಲಿಸಿದ್ದಾರೆ ಎಂದು ಹೇಳಿತ್ತು. ಇದನ್ನು ಆಧರಿಸಿ, ಎನ್ ಕೆ ಮೋಹನ್ ರಾಮ್ ಅವರು ಜೋಶಿ ದುರುದ್ದೇಶಪೂರಿತವಾಗಿ ತಮ್ಮನ್ನು ಪ್ರಕರಣಗಳಲ್ಲಿ ಸಿಲುಕಿಸುವ ಮೂಲಕ ಮಾನಸಿಕ ವೇದನೆ ಸೃಷ್ಟಿಸಿ, ಅಪಾರ ನಷ್ಟಕ್ಕೆ ಕಾರಣರಾಗಿದ್ದಾರೆ ಎಂದು ಆಕ್ಷೇಪಿಸಿ ಪರಿಹಾರ ಕೋರಿ ದಾವೆ ಹೂಡಿದ್ದರು.