INC MLA K Y Nanje Gowda and Karnataka HC
INC MLA K Y Nanje Gowda and Karnataka HC 
ಸುದ್ದಿಗಳು

ಮಾಲೂರು ಕಾಂಗ್ರೆಸ್‌ ಶಾಸಕ ಕೆ ವೈ ನಂಜೇಗೌಡ ಆಯ್ಕೆ ಅಸಿಂಧು ಕೋರಿಕೆ: ಹ್ಯಾಂಡ್‌ ಸಮನ್ಸ್‌ ನೀಡಲು ಹೈಕೋರ್ಟ್‌ ಆದೇಶ

Bar & Bench

ಕಳೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರದ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ಕೆ ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಸಲ್ಲಿಸಲಾಗಿರುವ ಅರ್ಜಿ ಸಂಬಂಧ ಪ್ರತಿವಾದಿಗಳಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರರಿಗೆ ಕರ್ನಾಟಕ ಹೈಕೋರ್ಟ್ ಸೋಮವಾರ ಅನುಮತಿಸಿದೆ.

ಶಾಸಕ ಕೆ ವೈ ನಂಜೇಗೌಡ ಅವರ ಆಯ್ಕೆಯನ್ನು ಪ್ರಶ್ನಿಸಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆ ಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ವಿಚಾರಣಾ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್ ದೇವದಾಸ್ ಅವರ ಪೀಠ ಈ ಆದೇಶ ಮಾಡಿದೆ.

ವಿಚಾರಣೆ ವೇಳೆ ಅರ್ಜಿದಾರ ಪರ ಹಿರಿಯ ವಕೀಲರು, ಅರ್ಜಿಯಲ್ಲಿ ಶಾಸಕ ಕೆ ವೈ ನಂಜೇಗೌಡ ಮತ್ತು ಚುನಾವಣೆಗೆ ಸ್ಪರ್ಧಿಸಿದ್ದ ಇತರೆ 13 ಮಂದಿ ಪ್ರತಿವಾದಿಗಳಿದ್ದಾರೆ. ಆ ಪೈಕಿ ಅನೇಕ ಪ್ರತಿವಾದಿಗಳಿಗೆ ಅರ್ಜಿ ಸಂಬಂಧ ಈ ಹಿಂದೆ ಹೈಕೋರ್ಟ್ ಜಾರಿ ಮಾಡಿದ್ದ ನೋಟಿಸ್/ಸಮನ್ಸ್ ತಲುಪಿಲ್ಲ. ಅದರಂತೆ ಪ್ರತಿವಾದಿಗಳಿಗೆ ನೋಟಿಸ್/ಹ್ಯಾಂಡ್ ಸಮನ್ಸ್ ಜಾರಿ ನೀಡಲು ಅನುಮತಿಸಬೇಕು ಎಂದು ಕೋರಿದರು.

ಆ ಮನವಿ ಪುರಸ್ಕರಿಸಿದ ಪೀಠವು ಈವರೆಗೂ ಸಮನ್ಸ್ ಜಾರಿಯಾಗದ ಪ್ರತಿವಾದಿಗಳಿಗೆ ಹ್ಯಾಂಡ್ ಸಮನ್ಸ್ ನೀಡಲು ಅರ್ಜಿದಾರರ ಪರ ವಕೀಲರು ಒಂದು ವಾರದಲ್ಲಿ ಕ್ರಮಕೈಗೊಳ್ಳಬೇಕು. ಸಮನ್ಸ್ ಜಾರಿಯಾದ ನಂತರದ ಒಂದು ವಾರದಲ್ಲಿ ಪ್ರತಿವಾದಿಗಳು ಅರ್ಜಿ ಕುರಿತು ಆಕ್ಷೇಪಣೆ ಸಲ್ಲಿಸಬೇಕು. ಹಾಗೆಯೇ, ಮೊದಲನೆ ಪ್ರತಿವಾದಿಯಾಗಿರುವ ಶಾಸಕ ಕೆ ವೈ ನಂಜೇಗೌಡ ಅವರು ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್‌ 11ಕ್ಕೆ ಮುಂದೂಡಿತು.

ವಿಧಾನಸಭೆ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆ ವೈ ನಂಜೇಗೌಡ ಗೆಲುವು ಸಾಧಿಸಿದ್ದರು. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಎಲ್ಲಾ 15 ಮಂದಿ ಸ್ಪರ್ಧಿಗಳ ಏಜೆಂಟ್‌ಗಳಿಗೆ ಮತ ಎಣಿಕೆ ಕೇಂದ್ರದಲ್ಲಿ ಸಮರ್ಪಕ ವ್ಯವಸ್ಥೆ ಮಾಡಿರಲಿಲ್ಲ. ಒಂದೇ ಕೊಠಡಿಯಲ್ಲಿ ಮತಗಳ ಎಣಿಕೆ ಕಾರ್ಯ ನಡೆಯಬೇಕಿದ್ದು, ಎರಡು ಪ್ರತ್ಯೇಕ ಕೊಠಡಿಯಲ್ಲಿ ಮತ ಎಣಿಕೆ ಮಾಡಲಾಗಿದೆ. ಆ ಮೂಲಕ ಜನಪ್ರತಿನಿಧಿಗಳ ಕಾಯಿದೆಯ ನಿಯಮಗಳು ಮತ್ತು ಚುನಾವಣಾ ಆಯೋಗ ಪ್ರಕಟಿಸಿದ್ದ ನಿಯಮಗಳನ್ನು ಉಲ್ಲಂಘಿಸಲಾಗಿದೆ. ಆದ್ದರಿಂದ, ನಂಜೇಗೌಡ ಅವರನ್ನು ವಿಜೇತ ಅಭ್ಯರ್ಥಿಯಾಗಿ ಘೋಷಣೆ ಮಾಡಿದ ಚುನಾವಣಾ ಆಯೋಗದ ಕ್ರಮ ರದ್ದುಪಡಿಸಬೇಕು. ಮತಗಳ ಮರು ಎಣಿಕೆಗೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.