ಪಶ್ಚಿಮ ಬಂಗಾಳದಲ್ಲಿ ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯ ವಿಶೇಷ ಆಮೂಲಾಗ್ರ ಪರಿಷ್ಕರಣೆಗೆ (ಎಸ್‌ಐಆರ್) ಮುಂದಾಗಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಾರೆ.
ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ, ಅರ್ಹ ಮತದಾರರು ದೊಡ್ಡ ಪ್ರಮಾಣದಲ್ಲಿ ಮತಹಕ್ಕು ಕಳೆದುಕೊಳ್ಳುವ ತ್ವರಿತ ಮತ್ತು ಸರಿಪಡಿಸಲಾಗದ ಅಪಾಯ ಇದೆ ಎಂದು ಆತಂಕ ವ್ಯಕ್ತಪಡಿಸಿರುವ ಅವರು ಕಳೆದ ವರ್ಷ ತಯಾರಿಸಲಾದ ಈಗಿರುವ ಮತದಾರರ ಪಟ್ಟಿಯ ಆಧಾರದಲ್ಲೇ ಚುನಾವಣೆ ನಡೆಸುವಂತೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಮಮತಾ ಅವರ ಅರ್ಜಿಯ ಪ್ರಮುಖಾಂಶಗಳು
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಹೆಸರಿನ ವ್ಯತ್ಯಾಸ ಇಲ್ಲವೇ ಅಕ್ಷರ ದೋಷ ಇರುವ ವರ್ಗದ ಪ್ರಕರಣಗಳನ್ನು ವಿಚಾರಣೆಗೆ ಕರೆಯಬಾರದು ಎಂದು ಚುನಾವಣಾಧಿಕಾರಿಗಳಿಗೆ ಸೂಚಿಸಬೇಕು.
ಲಭ್ಯವಿರುವ ದಾಖಲೆಗಳ ಆಧಾರದಲ್ಲಿ ಸ್ವಯಂಪ್ರೇರಿತವಾಗಿ ಹೆಸರು ತಿದ್ದಪಡಿ ಮಾಡಬೇಕು.
ಸಕ್ಷಮ ಅಧಿಕಾರಿಗಳು ನೀಡಿರುವ ಎಲ್ಲಾ ಗುರುತಿನ ದಾಖಲೆಗಳನ್ನು ಮಾನ್ಯಗೊಳಿಸಬೇಕು.
ವಿಧಾನಸಭೆಯ ಅವಧಿ 07.05.2026ರಂದು ಅಂತ್ಯಗೊಳ್ಳಲಿರುವುದರಿಂದ, ತಕ್ಷಣವೇ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದೆ; ಇದರಿಂದ ದೂರು ಪರಿಹಾರಕ್ಕೆ ಸಮಯವೇ ಸಿಗದ ಸ್ಥಿತಿ ನಿರ್ಮಾಣವಾಗುತ್ತದೆ.
ಚುನಾವಣಾ ಆಯೋಗದ ಕ್ರಮ ಅಸ್ಪಷ್ಟ, ದುಡುಕಿನ, ಅಸಾಂವಿಧಾನಿಕ ಮತ್ತು ಕಾನೂನುಬಾಹಿರವಾಗಿದ್ದು, ಇದರಿಂದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಲೋಪ ಉಂಟಾಗುತ್ತದೆ.
ಎಸ್‌ಐಆರ್ ಪ್ರಕ್ರಿಯೆಯಿಂದ ಲಕ್ಷಾಂತರ ಮತದಾರರು ಮತದಾನದ ಹಕ್ಕು ಕಳೆದುಕೊಳ್ಳುತ್ತಾರೆ, ಇದರಿಂದ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಸಮಾನ ಅವಕಾಶ ದೊರೆಯುವುದಿಲ್ಲ.
ಮನಬಂದಂತೆ ದಿನಾಂಕ ವಿಧಿಸಿ ಆ ದಿನಾಂಕಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಒದಗಿಸುವ ಮೂಲಕ ಪೌರತ್ವ ಸಾಬೀತುಪಡಿಸುವಂತೆ ಒತ್ತಾಯಿಸುವುದು ಸಂವಿಧಾನ ಹಾಗೂ ಪ್ರಜಾ ಪ್ರತಿನಿಧಿ ಕಾಯಿದೆಗೆ ವಿರುದ್ಧವಾಗಿದೆ.
ಇಡೀ ಎಸ್‌ಐಆರ್ ಪ್ರಕ್ರಿಯೆ 90 ದಿನಕ್ಕಿಂತ ಕಡಿಮೆ ಅವಧಿಯಲ್ಲಿ ಆತುರದಿಂದ ನಡೆಸಲಾಗುತ್ತಿದೆ. ಇದರಿಂದ ರಾಜ್ಯದ ಹೊರಗೆ ತಾತ್ಕಾಲಿಕವಾಗಿ ಕೆಲಸಕ್ಕೆ ತೆರಳಿರುವ ಭಾರೀ ಪ್ರಮಾಣದ ವಲಸೆ ಕಾರ್ಮಿಕರು ಮತದಾರರ ಪಟ್ಟಿಯಿಂದ ದೂರ ಉಳಿಯುವ ಸಾಧ್ಯತೆ ಇದೆ.
ಚುನಾವಣಾ ಆಯೋಗ ಪರಿಶೀಲಿಸದ ಸಾಫ್ಟ್‌ವೇರ್ ಮೂಲಕ ಎಸ್‌ಐಆರ್ ಪ್ರಕ್ರಿಯೆ ನಡೆಸುತ್ತಿದೆ.
ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನಗಳ ಹೊರತಾಗಿಯೂ, ವಾಟ್ಸಾಪ್ ಮೂಲಕ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಲಾಗುತ್ತಿದೆ.
ಹೆಸರಿನ ವ್ಯತ್ಯಾಸ ಇಲ್ಲವೇ ಅಕ್ಷರ ದೋಷ ಇರುವ ವರ್ಗದ ಪಟ್ಟಿಯನ್ನು ಆನ್‌ಲೈನ್‌ನಲ್ಲಿ ಪ್ರಕಟಿಸಿಲ್ಲ.
ಮಾಲ್ಡಾದಂತಹ ಕೆಲ ಜಿಲ್ಲೆಗಳಲ್ಲಿ ಸುಪ್ರೀಂ ಕೋರ್ಟ್ ಆದೇಶ ನಿರ್ಲಕ್ಷಿಸಿ 20,000 ಪ್ರಕರಣಗಳನ್ನು ‘ಇತರೆʼ ವರ್ಗದಿಂದ ಹೆಸರಿನ ವ್ಯತ್ಯಾಸ ಇಲ್ಲವೇ ಅಕ್ಷರ ದೋಷ ಇರುವ ವರ್ಗಕ್ಕೆ ಸೇರಿಸಲಾಗಿದೆ. ಇದು ದುರುದ್ದೇಶಿತ ಮತ್ತು ಕಾನೂನು ಬಾಹಿರ.