Vicky Kaushal, Katrina Kaif  
ಸುದ್ದಿಗಳು

ವಿಕ್ಕಿ, ಕತ್ರಿನಾಗೆ ಜೀವ ಬೆದರಿಕೆ: ಆರೋಪಿ ಪೊಲೀಸ್ ವಶಕ್ಕೆ

ಕಳೆದ ಕೆಲ ತಿಂಗಳುಗಳಿಂದ ಮಾನ್ವೇಂದ್ರ ಸಿಂಗ್ ಕತ್ರಿನಾ ಅವರನ್ನು ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ.

Bar & Bench

ಬಾಲಿವುಡ್‌ ತಾರಾ ದಂಪತಿ ಕತ್ರಿನಾ ಕೈಫ್‌ ಮತ್ತು ವಿಕ್ಕಿ ಕೌಶಲ್‌ಗೆ ಬೆದರಿಕೆ ಹಾಕಿದ್ದ ಮಾನ್ವೇಂದ್ರ ವಿಂದ್ವಾಸಾನಿ ಸಿಂಗ್‌ನನ್ನು ಮುಂಬೈನ ನ್ಯಾಯಾಲಯವೊಂದು ಎರಡು ದಿನಗಳ ಕಾಲ ಪೊಲೀಸ್‌ ವಶಕ್ಕೆ ಒಪ್ಪಿಸಿದೆ.

ವಿಕ್ಕಿ ಕೌಶಲ್‌ ದೂರು ನೀಡಿದ ಒಂದು ದಿನದ ಬಳಿಕ ಮುಂಬೈ ಪೊಲೀಸರು ಮಾನ್ವೇಂದರ್‌ನನ್ನು ಬಂಧಿಸಿದ್ದಾರೆ. ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 67ರ ಜೊತೆಗೆ ಐಪಿಸಿ ಸೆಕ್ಷನ್ 354 ಡಿ (ಹಿಂಬಾಲಿಸುವಿಕೆ) ಮತ್ತು 506 (II) (ಗಂಭೀರ ಅಪಾಯ ಉಂಟು ಮಾಡುವ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿದೆ. ಅದೇ ದಿನ ಬಾಂದ್ರಾದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಮಾನ್ವೇಂದರ್‌ನನ್ನು ಹಾಜರುಪಡಿಸಿದ್ದು 2 ದಿನಗಳ ಪೊಲೀಸ್ ವಶಕ್ಕೆ ನೀಡಿ ನ್ಯಾಯಾಲಯ ಆದೇಶಿಸಿದೆ.

ಜುಲೈ 13 ರಂದು ಮಾನ್ವೇಂದರ್‌ ಕೌಶಲ್‌ಗೆ ಕೊಲೆ ಬೆದರಿಕೆ ಹಾಕುವ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದ. ಕಳೆದ ಕೆಲ ತಿಂಗಳುಗಳಿಂದ ಕತ್ರಿನಾ ಅವರನ್ನು ಮಾನ್ವೇಂದರ್‌ ಸಿಂಗ್ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಿಂಬಾಲಿಸಿ ಕಿರುಕುಳ ನೀಡುತ್ತಿದ್ದ. ಅಲ್ಲದೆ ಕತ್ರೀನಾ ಅವರೊಂದಿಗೆ ತಾನು ಇರುವಂತಹ ತಿರುಚಿದ ಛಾಯಾಚಿತ್ರಗಳನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹರಿಬಿಟ್ಟಿದ್ದ.

ಅಪರಾಧ ಎಸಗುವ ಉದ್ದೇಶ ಅರಿಯಲು ಮಾನ್ವೇಂದರ್‌ನನ್ನು ವಶಕ್ಕೆ ಪಡೆಯುವ ಅಗತ್ಯವಿದೆ ಎಂದು ರಿಮಾಂಡ್‌ ಅರ್ಜಿಯಲ್ಲಿ ತಿಳಿಸಲಾಗಿತ್ತು. ಆದರೆ ಸಿಂಗ್‌ ಪರ ವಕೀಲ ಸಂದೀಪ್ ಶೇರ್ಖಾನೆ ಅವರು ಪ್ರಾಸಿಕ್ಯೂಷನ್‌ ಏಕಪಕ್ಷೀಯ ಕಥೆಯನ್ನಷ್ಟೇ ಹೇಳುತ್ತಿದೆ ಎಂದು ವಾದಿಸಿ ಮನ್ವೀಂದರ್‌ ಬಂಧನ ವಿರೋಧಿಸಿದರು.

"ಮಾನ್ವೇಂದರ್‌ ಸಿಂಗ್‌ ಇನ್ನೂ ಯಶಸ್ಸಿಗಾಗಿ ಶ್ರಮಿಸುತ್ತಿರುವ ನಟ. ಆತನನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಿ ಬಲಿಪಶು ಮಾಡಲಾಗಿದೆ. ಕೈಫ್‌ ಮತ್ತು ಆಕೆಯ ಸಹೋದರಿ ಕಳಿಸಿದ್ದ ಸಂದೇಶಗಳನ್ನು ಇನ್‌ಸ್ಟಾಗ್ರಾಂನಿಂದ ಅಳಿಸಿಹಾಕಲಾಗಿದೆ. ಏಕಪಕ್ಷೀಯ ಕಥೆ ಕಟ್ಟಲಾಗಿದೆ. ಅವರು ಒಂದೇ ಉದ್ಯಮದಿಂದ ಬಂದವರಾಗಿದ್ದು 2019 ರಿಂದ ಪರಿಚಿತರು. ಈಗ ಇದ್ದಕ್ಕಿದ್ದಂತೆ ಆರೋಪ ಮಾಡಲಾಗುತ್ತಿದೆ” ಎಂದು ಅವರು ವಿವರಿಸಿದರು.