The Bhagavad Gita 
ಸುದ್ದಿಗಳು

ಶಾಲೆಗಳಲ್ಲಿ ಭಗವದ್ಗೀತೆ ಕಡ್ಡಾಯ ಕಲಿಕೆ ಪ್ರಶ್ನಿಸಿ ಗುಜರಾತ್ ಹೈಕೋರ್ಟ್ ಮೊರೆ ಹೋದ ಜಮೀಯತ್ ಉಲಮಾ ಎ ಹಿಂದ್

ಸರ್ಕಾರದ ಪ್ರತಿಕ್ರಿಯೆ ಕೇಳಿದ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ಒಪ್ಪಲಿಲ್ಲ.

Bar & Bench

ಬರುವ ಶೈಕ್ಷಣಿಕ ವರ್ಷದಿಂದ 6ರಿಂದ 12ನೇ ತರಗತಿ ವಿದ್ಯಾರ್ಥಿಗಳಿಗೆ ಭಗವದ್ಗೀತೆಯನ್ನು ಕಡ್ಡಾಯ ಕಲಿಸುವ ರಾಜ್ಯ ಶಿಕ್ಷಣ ಇಲಾಖೆಯ ನಿರ್ಣಯ ಪ್ರಶ್ನಿಸಿ ಭಾರತದ ಪ್ರಮುಖ ಮುಸ್ಲಿಂ ಪಂಡಿತರ ಸಂಘಟನೆ ಜಮಿಯತ್ ಉಲಮಾ-ಎ-ಹಿಂದ್ ಗುಜರಾತ್‌ ಹೈಕೋರ್ಟ್‌ ಮೊರೆ ಹೋಗಿದೆ [ಜಮೀಯತ್ ಉಲಮಾ ಎ ಹಿಂದ್‌ ಗುಜರಾತ್‌ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ವಿಚಾರಣೆ ವೇಳೆ ಸರ್ಕಾರದ ಪ್ರತಿಕ್ರಿಯೆ ಕೇಳಿದ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ವಿಭಾಗೀಯ ಪೀಠ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಬೇಕೆಂಬ ಅರ್ಜಿದಾರರ ಮನವಿ ಪರಿಗಣಿಸಲು ಒಪ್ಪಲಿಲ್ಲ. ಪ್ರಕರಣವನ್ನು ಆಗಸ್ಟ್ 18, 2022ಕ್ಕೆ ಮುಂದೂಡಲಾಗಿದೆ.

ಅರ್ಜಿಯಲ್ಲಿ ಏನಿದೆ?

  • ಭಗವದ್ಗೀತೆ ಬೋಧಿಸುವ ನಿರ್ಧಾರ ಪರೋಕ್ಷ ಅಧಿಕಾರ ಪ್ರಯೋಗವಾಗಿದ್ದು ಸಂವಿಧಾನದ 14, 28ನೇ ವಿಧಿ ಮತ್ತಿತರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ. ಅಲ್ಲದೆ ಸಂವಿಧಾನದ ಮೂಲ ಲಕ್ಷಣವಾದ ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿದೆ.

  • ಸರ್ಕಾರದ ಬೊಕ್ಕಸದಿಂದ ಸಂಪೂರ್ಣವಾಗಿ ನಿರ್ವಹಿಸಲಾಗುತ್ತಿರುವ ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ಧಾರ್ಮಿಕ ಸೂಚನೆ ನೀಡಬಾರದು ಎಂದು ತಿಳಿಸುವ ಸಂವಿಧಾನದ 28ನೇ ವಿಧಿಯನ್ನು ಈ ನಿರ್ಧಾರ ಉಲ್ಲಂಘಿಸಿದೆ.

  • ಗೀತೆಯು ಹಿಂದೂಗಳ ಧಾರ್ಮಿಕ ಪುಸ್ತಕವಾಗಿದೆ. ಗೀತೆಯಲ್ಲಿ ಹೇಳಲಾದ ಎಲ್ಲಾ ಮೌಲ್ಯಗಳು ಹಿಂದೂ ಧರ್ಮದ ತತ್ವಗಳೊಂದಿಗೆ ಹೆಣೆದುಕೊಂಡಿವೆ ಎಂಬುದು ನಿರ್ವಿವಾದಿತ ಸತ್ಯ.

  • ಕೇವಲ ಒಂದು ಧರ್ಮದ ಬಗ್ಗೆ ಶಿಕ್ಷಣ ನೀಡಿದರೆ ಉಳಿದ ಧರ್ಮಗಳಿಗಿಂತ ಆ ಧರ್ಮ ಶ್ರೇಷ್ಠ ಎಂದು ಚಿಕ್ಕ ಮಕ್ಕಳ ಮೇಲೆ ಪ್ರಭಾವ ಬೀರುತ್ತದೆ. ಇದು ಸಂವಿಧಾನದ 21 ಮತ್ತು 25ರ ಅಡಿ ಒದಗಿಸಲಾಗುವ ಮುಕ್ತ ಆಯ್ಕೆ ಮತ್ತು ವಿವೇಚನೆ ಮೇಲೆ ಪ್ರಭಾವ ಬೀರುತ್ತದೆ.

  • ಶ್ರೀಮಂತ ಮತ್ತು ಪ್ರಾಚೀನ ಭಾರತೀಯ ಸಂಸ್ಕೃತಿಯನ್ನು ಪ್ರತಿನಿಧಿಸುವ ವಿಶಾಲವಾದ ಮತ್ತು ವೈವಿಧ್ಯಮಯ ಸಾಹಿತ್ಯದ ತರ್ಕಬದ್ಧ ವಿಶ್ಲೇಷಣೆ ನಡೆಸಲು ನಿರ್ಣಯ ವಿಫಲವಾಗಿದೆ.

  • ಮೌಲ್ಯಾಧಾರಿತ ಶಿಕ್ಷಣ ವ್ಯವಸ್ಥೆ ಜಾರಿಗೊಳಿಸುವ ಸೋಗಿನಲ್ಲಿ ವಿವಾದಿತ ನಿರ್ಣಯ ತರ್ಕಬದ್ಧವಾಗಿ ಮತ್ತು ಸೂಕ್ತ ವಿವೇಚನೆ ಇಲ್ಲದೆ ಒಂದು ಪುಸ್ತಕವನ್ನು ಮೌಲ್ಯ ಗ್ರಂಥ ಎಂದು ಆಯ್ಕೆ ಮಾಡಿ ಅದರ ಬೋಧನೆ ಕಡ್ಡಾಯಗೊಳಿಸಿದೆ.

  • ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಸ್ಫೂರ್ತಿ ಪಡೆಯಲಾಗಿದೆ ಎಂದು ಸರ್ಕಾರ ತಿಳಿಸಿದ್ದರೂ ಎನ್‌ಇಪಿ ಗೀತೆ ಅಥವಾ ಇನ್ನಾವುದೇ ಪವಿತ್ರ ಗ್ರಂಥದ ಬಗ್ಗೆ ಸೂಚಿಸದ ಹಿನ್ನೆಲೆಯಲ್ಲಿ ಅವಲಂಬನೆ ತಪ್ಪಾಗಿದೆ.

  • ಸಂವಿಧಾನದ 51 ಎ (ಎಚ್) ವಿಧಿ ಒಳಗೊಂಡಿರುವ ಸಂಯಮ, ಮಾನವತಾವಾದ ಹಾಗೂ ವೈಜ್ಞಾನಿಕ ಹಾಗೂ ಪ್ರಶ್ನಿಸುವ ಮನೋಭಾವವನ್ನು ಪ್ರೋತ್ಸಾಹಿಸುವ ಸಾಂವಿಧಾನಿಕ ಗುರಿಗೆ ಧಾರ್ಮಿಕ ಮೌಲ್ಯಾಧಾರಿತ ಶಿಕ್ಷಣ ವಿರುದ್ಧವಾಗಿದೆ.

  • ನಂಬಿಕೆ ಮತ್ತು ಪುರಾಣಗಳೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಮೌಲ್ಯಗಳ ಬೋಧನೆಯನ್ನು ಆಕ್ಷೇಪಾರ್ಹ ನಿರ್ಣಯ ಕಡ್ಡಾಯಗೊಳಿಸುತ್ತದೆ. ಇದು ಆ ಸತ್ಯವನ್ನು ಒಪ್ಪುವವರಿಗೆ ಮಾತ್ರ ರುಚಿಸುತ್ತದೆ.

  • ಬೇರೆ ಧರ್ಮಗಳಿಗಿಂತಲೂ ಒಂದು ಧರ್ಮಕ್ಕೆ ಪ್ರಾಶಸ್ತ್ಯ ನೀಡುವುದರಿಂದ ಸಾಂವಿಧಾನಿಕ ನೈತಿಕತೆಗೆ ನಿರ್ಣಯ ವಿರುದ್ಧವಾಗಿದೆ.

  • ಜಾತ್ಯತೀತ ಪ್ರಭುತ್ವವೊಂದರಲ್ಲಿ ಕಲಿಸಬೇಕಾದ ನೈತಿಕಮೌಲ್ಯಗಳು ಸಂವಿಧಾನದ ಪೀಠಿಕೆಯಲ್ಲಿ ಪ್ರತಿಪಾದಿಸಿರುವ ಸಮಾನತೆ, ಭ್ರಾತೃತ್ವ ಮತ್ತು ನ್ಯಾಯದ ಸಾಂವಿಧಾನಿಕ ಮೌಲ್ಯಗಳನ್ನು ಒಳಗೊಂಡಿರಬೇಕು.