Manek Gandhi facebook
ಸುದ್ದಿಗಳು

ಮಾಜಿ ಕೇಂದ್ರ ಸಚಿವೆ ಮೇನಕಾ ಗಾಂಧಿ ವಿರುದ್ಧದ ಮಾನಹಾನಿ ಪ್ರಕರಣ ರದ್ದುಪಡಿಸಲು ಹೈಕೋರ್ಟ್‌ ನಕಾರ

ಬೆಂಗಳೂರಿನ ಸತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್‌ ರಿವಿಷನ್‌ ಅರ್ಜಿ ಸಲ್ಲಿಸಲು ಅವಕಾಶ; ವಿಚಾರಣಾ ನ್ಯಾಯಾಲಯದ ಸಮನ್ಸ್‌ಗೆ ಎರಡು ವಾರಗಳ ತಡೆ ನೀಡಿದ ನ್ಯಾಯಾಲಯ.

Bar & Bench

ಮಾಜಿ ಕೇಂದ್ರ ಸಚಿವೆ ಹಾಗೂ ಬಿಜೆಪಿ ನಾಯಕಿ ಮೇನಕಾ ಸಂಜಯ್‌ ಗಾಂಧಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವ ಕ್ರಿಮಿನಲ್‌ ಮಾನಹಾನಿ ಪ್ರಕರಣದ ವಿಚಾರಣೆಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಪ್ರಕರಣದ ವಿಚಾರಣಾ ನ್ಯಾಯಾಲಯದ ಸಮನ್ಸ್‌ ಪ್ರಶ್ನಿಸಿ ಸತ್ರ ನ್ಯಾಯಾಲಯಕ್ಕೆ ಕ್ರಿಮಿನಲ್‌ ರಿವಿಷನ್‌ ಅರ್ಜಿ ಸಲ್ಲಿಸಲು ಮೇನಕಾ ಗಾಂಧಿಗೆ ಅವಕಾಶ ನೀಡಿರುವ ನ್ಯಾಯಮೂರ್ತಿ ಅನಂತ್‌ ರಾಮನಾಥ್‌ ಹೆಗಡೆ ಅವರ ಏಕಸದಸ್ಯ ಪೀಠವು ವಿಚಾರಣಾ ನ್ಯಾಯಾಲಯದ ಸಮನ್ಸ್‌ ಜಾರಿಗೆ ಎರಡು ವಾರಗಳ ತಡೆ ನೀಡಿದೆ.

Justice Anant Ramanath Hegde

ಪ್ರಕರಣದ ದಾಖಲೆಗಳನ್ನು ಪರಿಶೀಲಿಸಿದ ಹೈಕೋರ್ಟ್‌, 2019ರ ನವೆಂಬರ್‌ 16ರಂದು ಖಾಸಗಿ ದೂರನ್ನು ವಜಾಗೊಳಿಸಲಾಗಿತ್ತು ಮತ್ತು 2025ರ ಜೂನ್‌ 30ರಂದು ಸತ್ರ ನ್ಯಾಯಾಲಯವು ಆ ಆದೇಶವನ್ನು ರದ್ದುಗೊಳಿಸಿ ಪ್ರಕರಣವನ್ನು ಮರುಪರಿಗಣನೆಗೆ ಕಳುಹಿಸಿತ್ತು ಎಂಬುದನ್ನು ಗಮನಿಸಿದೆ.

“ಸತ್ರ ನ್ಯಾಯಾಲಯ ತನ್ನ ಹಿಂದಿನ ಆದೇಶದಿಂದ ಪ್ರಭಾವಿತವಾಗಿ ಪ್ರಕರಣವನ್ನು ವಸ್ತುನಿಷ್ಠವಾಗಿ ಮರುಪರಿಗಣಿಸುವುದಿಲ್ಲ ಎಂಬ ಅರ್ಜಿದಾರರ ಆತಂಕವನ್ನು ಸೂಕ್ತ ನಿರ್ದೇಶನದ ಮೂಲಕ ಪರಿಹರಿಸಬಹುದು” ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮೇನಕಾ ಗಾಂಧಿ ಸತ್ರ ನ್ಯಾಯಾಲಯದಲ್ಲಿ ಕ್ರಿಮಿನಲ್‌ ರಿವಿಷನ್‌ ಅರ್ಜಿ ಸಲ್ಲಿಸಿದರೆ, ಆ ನ್ಯಾಯಾಲಯವು ಪ್ರಕರಣದ ಎಲ್ಲ ಅಂಶಗಳನ್ನು ಸ್ವತಂತ್ರವಾಗಿ ಪರಿಶೀಲಿಸಿ ಕಾನೂನುಬದ್ಧ ಆದೇಶ ಹೊರಡಿಸಬೇಕು ಎಂದು ಹೈಕೋರ್ಟ್‌ ನಿರ್ದೇಶಿಸಿದೆ.

ದೂರಿನಲ್ಲಿರುವ ಆರೋಪಗಳು, ದಾಖಲಾದ ಹೇಳಿಕೆಗಳು ಹಾಗೂ ವಿಚಾರಣಾ ನ್ಯಾಯಾಲಯದ ಮುಂದೆ ಸಲ್ಲಿಸಲಾದ ದಾಖಲೆಗಳ ಆಧಾರದ ಮೇಲೆ ಪ್ರಕರಣವನ್ನು ಸ್ವತಂತ್ರವಾಗಿ ನಿರ್ಣಯಿಸಬೇಕು. 2025ರ ಜೂನ್‌ 30ರಂದು ಸತ್ರ ನ್ಯಾಯಾಲಯ ನೀಡಿದ್ದ ಆದೇಶದಿಂದ ಯಾವುದೇ ರೀತಿಯಲ್ಲಿ ಪ್ರಭಾವಿತರಾಗಬಾರದು ಎಂದು ಸ್ಪಷ್ಟಪಡಿಸಿದೆ.

ಮೇನಕಾ ಗಾಂಧಿ ಪರ ವಕೀಲರು, ಅರ್ಜಿದಾರರು ದೆಹಲಿಯ ನಿವಾಸಿಯಾಗಿದ್ದು, ಹಿರಿಯ ನಾಗರಿಕರಾಗಿದ್ದಾರೆ. ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಸತ್ರ ನ್ಯಾಯಾಲಯದಲ್ಲಿ ರಿವಿಷನ್‌ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು ಹಾಗೂ ಅಲ್ಲಿಯವರೆಗೆ ವಿಚಾರಣಾ ನ್ಯಾಯಾಲಯದ ಆದೇಶದ ಜಾರಿಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದರು.

ಈ ಮನವಿಯನ್ನು ಪುರಸ್ಕರಿಸಿದ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯದ ಸಮನ್ಸ್‌ ಜಾರಿಗೆ ಎರಡು ವಾರಗಳ ತಡೆ ನೀಡಿದೆ. ಈ ಅವಧಿಯಲ್ಲಿ ಅರ್ಜಿದಾರರು ಸೂಕ್ತ ಕ್ರಿಮಿನಲ್‌ ರಿವಿಷನ್‌ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದಲ್ಲಿ ಅದನ್ನು ವಿಚಾರಣೆ ನಡೆಸಿ ಕಾನೂನುಬದ್ಧವಾಗಿ ತೀರ್ಮಾನಿಸಬೇಕು ಎಂದು ಸೂಚಿಸಿದೆ.

ಇದೇ ವೇಳೆ, ಪ್ರಕರಣದ ಈ ಹಂತದಲ್ಲಿ ದೂರುದಾರರು ಅಥವಾ ಅರ್ಜಿದಾರರು ಮಂಡಿಸಿರುವ ವಾದಗಳ ಸತ್ಯಾಸತ್ಯತೆ ಹಾಗೂ ಪ್ರಕರಣದ ಮೂಲ ವಿಚಾರಗಳ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸಿಲ್ಲ. ಎರಡೂ ಪಕ್ಷಗಳ ಎಲ್ಲ ವಾದಗಳನ್ನು ಮುಕ್ತವಾಗಿರಿಸಲಾಗಿದೆ ಎಂದು ಪೀಠ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಮೈಸೂರಿನ ಎಸ್‌ ಕೆ ಮಿತ್ತಲ್‌ ಅವರು ಭಾರತೀಯ ದಂಡ ಸಂಹಿತೆಯ (IPC) ಸೆಕ್ಷನ್‌ 499 ಮತ್ತು 500ರ ಅಡಿಯಲ್ಲಿ ಮೇನಕಾ ಗಾಂಧಿ ವಿರುದ್ಧ ಖಾಸಗಿ ಮಾನಹಾನಿ ದೂರು ಸಲ್ಲಿಸಿದ್ದರು.

ಬೆಂಗಳೂರಿನ 42ನೇ ಹೆಚ್ಚುವರಿ ಮುಖ್ಯ ನ್ಯಾಯಿಕ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಗೆ ಬಾಕಿಯಿದೆ. ಈ ಪ್ರಕರಣದ ವಿಚಾರಣಾ ಪ್ರಕ್ರಿಯೆ ಹಾಗೂ ಸಮನ್ಸ್‌ ಆದೇಶವನ್ನು ರದ್ದುಪಡಿಸುವಂತೆ ಕೋರಿ ಮೇನಕಾ ಗಾಂಧಿ ಹೈಕೋರ್ಟ್‌ ಮೊರೆ ಹೋಗಿದ್ದರು.

2019ರ ನವೆಂಬರ್‌ 16ರಂದು ದೂರು ವಜಾಗೊಂಡಿದ್ದರೂ, 2025ರ ಜೂನ್‌ 30ರಂದು ಸತ್ರ ನ್ಯಾಯಾಲಯ ಆ ಆದೇಶವನ್ನು ರದ್ದುಗೊಳಿಸಿ ಮರುಪರಿಗಣನೆಗೆ ಕಳುಹಿಸಿತ್ತು. ಇದೀಗ ಹೈಕೋರ್ಟ್‌ ಪ್ರಕರಣವನ್ನು ರದ್ದುಪಡಿಸಲು ನಿರಾಕರಿಸಿದ್ದು, ಸತ್ರ ನ್ಯಾಯಾಲಯದಲ್ಲಿ ಕಾನೂನು ಪರಿಹಾರ ಪಡೆಯಲು ಮೇನಕಾ ಗಾಂಧಿಗೆ ಅವಕಾಶ ನೀಡಿದೆ.