ದೇಶಾದ್ಯಂತ ನೈತಿಕ ಪೊಲೀಸ್ ಗಿರಿಯ ಕರಾಳ ಮುಖದ ವಿರುದ್ಧ ಚರ್ಚೆಗೆ ಗ್ರಾಸವಾಗಿದ್ದ ಮಂಗಳೂರು ಹೋಮ್ ಸ್ಟೇಯಲ್ಲಿ ಉಳಿದಿದ್ದವರ ಮೇಲಿನ ದಾಳಿ ಪ್ರಕರಣದಲ್ಲಿನ 40 ಆರೋಪಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ನ್ಯಾಯಾಲಯವು 12 ವರ್ಷಗಳ ಬಳಿಕ ಸಾಕ್ಷ್ಯಾಧಾರಗಳ ಕೊರತೆಯಿಂದ ಮಂಗಳವಾರ ಖುಲಾಸೆಗೊಳಿಸಿದೆ.
ಸುದೀರ್ಘ ಕಾಲ ವಿಚಾರಣೆ ನಡೆಸಿದ ದಕ್ಷಿಣ ಕನ್ನಡ ಜಿಲ್ಲೆಯ ಆರನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್ ವಿ ಕಾಂತರಾಜು ಅವರು ತೀರ್ಪು ಪ್ರಕಟಿಸಿದ್ದಾರೆ. ವಿಸ್ತೃತ ಆದೇಶ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಮಂಗಳೂರಿನ ಮಾರ್ನಿಂಗ್ ಮಿಸ್ಟ್ ಹೋಮ್ ಸ್ಟೇಯಲ್ಲಿ 2012ರ ಜುಲೈ 28ರಂದು ವಿಜಯ್ ಮತ್ತು ಸಂಜನಾ ಅವರ ಹುಟ್ಟು ಹಬ್ಬ ಆಚರಿಸಲಾಗುತ್ತಿತ್ತು. ಈ ಕಾರ್ಯಕ್ರಮಕ್ಕೆ ಅವರು ಸ್ನೇಹಿತರನ್ನು ಆಹ್ವಾನಿಸಿದ್ದರು. ಇಲ್ಲಿ ಅನೈತಿಕ ಚಟುವಟಿಕೆ ನಡೆಯುತ್ತಿದೆ ಎಂದು ಆರೋಪಿಗಳು ದಾಳಿ ನಡೆಸಿ, ಅಲ್ಲಿದ್ದ ಯುವಕ-ಯುವತಿಯರ ಮೇಲೆ ಹಲ್ಲೆ ಮಾಡಿ ಅವಮಾನಿಸಿದ್ದರು. ಈ ಸಂಬಂಧ ಮಂಗಳೂರಿನ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳಾದ ಸುಭಾಷ್ ಪಡಿಲ್, ಗಣೇಶ್ ಅಲಿಯಾಸ್ ಮುನ್ನಾ, ಶರತ್, ಸಂದೀಪ್ ಶೆಟ್ಟಿ, ತಾರನಾಥ, ವೇಣುಗೋಪಾಲ, ತಾರನಾಥ ಆಳ್ವಾ, ರಾಜೇಶ್, ಚೇತನ್ ಕುಲಾಲ್, ಸುನಿಲ್, ಹರೀಶ್ ಮರೋಳಿ ಅಲಿಯಾಸ್ ಹರೀಶ್, ಶೈಲೇಶ್ ಶೆಟ್ಟಿ, ಪುನೀತ್ ಕುಮಾರ್, ವರುಣ್, ಕಿರಣ್ ಪೂಜಾರಿ, ಸುರೇಶ್ ಪೂಜಾರಿ, ಸುರೇಶ್ ಪೂಜಾರಿ, ಮಿಥುನ್ ಪೂಜಾರಿ, ಸಂಪತ್ ಪೂಜಾರಿ, ಸಂಪತ್ ಪೂಜಾರಿ, ದೀಪಕ್, ರಮೇಶ್ ಕೊಟ್ಯಾನ್, ಜಗದೀಶ್ ಪೂಜಾರಿ, ನಿತಿನ್ ಪೂಜಾರಿ, ಪುನೀತ್, ದಿನೇಶ್, ಗಣೇಶ್ ವೀರನಗರ, ರಾಜೇಶ್ ಅಲಿಯಾಸ್ ಕೊಂಬು ರಾಜೇಶ್, ಕಿರಣ್ ಅಲಿಯಾಸ್ ಕಿರಣ್ ಬಿ ಎಸ್, ದೀಕ್ಷಿತ್, ಸುನಿಲ್ ಪರಂಗೀಪೇಟೆ, ಮಹೇಶ್, ಸಂತೋಷ್ ಶೆಟ್ಟಿ, ಹರೀಶ್ ಪರಂಗೀಪೇಟೆ, ಉದಯ್ ಕುಮಾರ್, ಅರುಣ್, ಶ್ರೇಯಸ್ ಅಲಿಯಾಸ್ ಸಚ್ಚು, ಶರಣ್ ಅಲಿಯಾಸ್ ಶರಣ್‌ರಾಜ್ ಮತ್ತು ಪತ್ರಕರ್ತ ನವೀನ್ ಸೂರಿಂಜೆ ಮತ್ತಿತರರ ವಿರುದ್ಧ ಮಂಗಳೂರಿನ ಗ್ರಾಮೀಣ ಠಾಣೆಯಲ್ಲಿ 2012ರಲ್ಲಿ ಐಪಿಸಿ ಸೆಕ್ಷನ್‌ಗಳಾದ 143, 147, 148, 447, 448, 114, 341, 323, 324, 325, 504, 506, 509, 354, 395, 120ಬಿ ಜೊತೆಗೆ 149ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಕಾಲಾಂತರದಲ್ಲಿ ಪತ್ರಕರ್ತ ಸೂರಿಂಜೆ ವಿರುದ್ಧದ ಪ್ರಕರಣವನ್ನು ನ್ಯಾಯಾಲಯ ಕೈಬಿಟ್ಟಿತ್ತು. ಹಲವು ಆರೋಪಿಗಳ ವಿರುದ್ಧ ಪ್ರತ್ಯೇಕವಾಗಿ ವಿಭಜಿಸಿ ಪ್ರಕರಣ ದಾಖಲಿಸಲಾಗಿತ್ತು.
13, 22, 33, 34ನೇ ಆರೋಪಿಗಳನ್ನು ಹೊರತುಪಡಿಸಿ ಉಳಿದವರು ಹಾಜರಾಗಿದ್ದಾರೆ. ಮಂಗಳೂರಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ 9ನೇ ಆರೋಪಿ, ಶಿವಮೊಗ್ಗದಲ್ಲಿ ನ್ಯಾಯಾಂಗ ಬಂಧನದಲ್ಲಿರುವ 15ನೇ ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಸಿಆರ್‌ಪಿಸಿ ಸೆಕ್ಷನ್ 235(1)ರ ಅಡಿ 1ರಿಂದ 12, 14ರಿಂದ 21, 23ರಿಂದ 32, 35ರಿಂದ 43ನೇ ಆರೋಪಿಗಳನ್ನು ಐಪಿಸಿ ಸೆಕ್ಷನ್‌ಗಳಾದ 143, 147, 148, 447, 448, 114, 341, 342, 427, 323, 325, 354, 395, 427, 504, 506, 509, 120ಬಿ ಜೊತೆಗೆ 149ರ ಅಡಿ ಆರೋಪ ಮತ್ತು ಕರ್ನಾಟಕ ಸಾರ್ವಜನಿಕ ಆಸ್ತಿಗೆ ಹಾನಿ ನಿಷೇಧ ಕಾಯಿದೆ ಸೆಕ್ಷನ್ 2(ಎ), ಐಪಿಸಿ ಸೆಕ್ಷನ್ 505(ಬಿ)(ಸಿ), ಮಹಿಳೆಯರನ್ನು ಅಸಭ್ಯವಾಗಿ ಪ್ರದರ್ಶನ ನಿಷೇಧ ಕಾಯಿದೆ ಸೆಕ್ಷನ್ 3 ಮತ್ತು 4 ಜೊತೆಗೆ ಐಪಿಸಿ ಸೆಕ್ಷನ್ 34ರ ಅಡಿ ಆರೋಪದಿಂದ ಖುಲಾಸೆಗೊಳಿಸಲಾಗಿದೆ ಎಂದು ತೀರ್ಪಿನಲ್ಲಿ ವಿವರಿಸಲಾಗಿದೆ.