Mob lynching 
ಸುದ್ದಿಗಳು

ಮಂಗಳೂರು ಗುಂಪು ಹತ್ಯೆ ಪ್ರಕರಣ: ಮತ್ತೊಬ್ಬ ಆರೋಪಿಗೆ ಜಾಮೀನು ಮಂಜೂರು ಮಾಡಿದ ಹೈಕೋರ್ಟ್‌

ಮಂಗಳೂರಿನ ಕುಡುಪು ಗ್ರಾಮದ ಬಳಿ ಕ್ರಿಕೆಟ್‌ ಪಂದ್ಯದ ವೇಳೆ ಚಿಂದಿ ಆಯುವ ಮೊಹಮ್ಮದ್‌ ಅಶ್ರಫ್‌ ಎಂಬಾತ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗಿದ್ದರಿಂದ ಗುಂಪು ಹಲ್ಲೆ ನಡೆಸಲಾಗಿತ್ತು ಎಂದು ದೂರು ದಾಖಲಾಗಿತ್ತು.

Bar & Bench

ಮಂಗಳೂರಿನ ಕುಡುಪು ಗ್ರಾಮದ ದೇವಸ್ಥಾನದ ಹಿಂಭಾಗದಲ್ಲಿರುವ ಕ್ರೀಡಾಂಗಣದಲ್ಲಿ ಕ್ರಿಕೆಟ್‌ ಪಂದ್ಯ ನಡೆಯುತ್ತಿದ್ದ ವೇಳೆ "ಪಾಕಿಸ್ತಾನ್‌ ಜಿಂದಾಬಾದ್‌" ಎಂದು ಕೂಗಲಾಗಿದೆ ಎಂದು ಮುಸ್ಲಿಮ್‌ ಸಮುದಾಯದ ಚಿಂದಿ ಆಯುತ್ತಿದ್ದ ಕೇರಳದ ವ್ಯಕ್ತಿಯೊಬ್ಬನನ್ನು ಥಳಿಸಿ ಕೊಂದ ಆರೋಪದ ಕುರಿತಾದ ಗುಂಪು ಹತ್ಯೆ ಪ್ರಕರಣದಲ್ಲಿನ ಆರೋಪಿಯೊಬ್ಬನಿಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಜಾಮೀನು ಮಂಜೂರು ಮಾಡಿದೆ.

ದಕ್ಷಿಣ ಕನ್ನಡದ ಕುಡುಪಿವಿನ ನಟೇಶ್‌ ಕುಮಾರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.

Justice Shivashankar Amarannavar

ಅರ್ಜಿದಾರ ಒಂದು ಲಕ್ಷ ರೂಪಾಯಿ ಮೌಲ್ಯದ ವೈಯಕ್ತಿಕ ಬಾಂಡ್‌ ಮತ್ತು ಒಬ್ಬರ ಭದ್ರತೆ ಒದಗಿಸಬೇಕು. ಪ್ರಾಸಿಕ್ಯೂಷನ್‌ ಸಾಕ್ಷಿ ತಿರುಚಬಾರದು. ವಿಚಾರಣಾಧೀನ ನ್ಯಾಯಾಲಯದಲ್ಲಿ ನಡೆಯುವ ವಿಚಾರಣೆಯಲ್ಲಿ ಭಾಗಿಯಾಗಬೇಕು ಎಂಬ ಸಾಮಾನ್ಯ ಷರತ್ತುಗಳನ್ನು ನ್ಯಾಯಾಲಯ ವಿಧಿಸಿದೆ.

ನಟೇಶ್‌ ಏಪ್ರಿಲ್ 29, 2025ರಿಂದ ಜೈಲಿನಲ್ಲಿದ್ದು, ಇದೇ ಪ್ರಕರಣದಲ್ಲಿ ಸಂತ್ರಸ್ತನಿಗೆ ಕೋಲಿನಿಂದ ಹಲ್ಲೆ ನಡೆಸಿದ ಇಬ್ಬರು ಸತ್ರ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ ಎಂಬ ಕಾರಣವನ್ನು ನ್ಯಾಯಾಲಯ ನೀಡಿದೆ. ಹಾಲಿ ಪ್ರಕರಣದಲ್ಲಿ ಸಕ್ಷಮ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಈಗಾಗಲೇ ಸಲ್ಲಿಕೆಯಾಗಿರುವುದರಿಂದ ನಟೇಶ್‌ನನ್ನು ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಮೊಹಮ್ಮದ್‌ ಆಯುಬ್‌ ಅಲಿ ಅವರು “ನಟೇಶ್‌ ಕುಮಾರ್‌ ಮನೆಯಿಂದ ಖಾರದಪುಡಿ ತಂದು ಅಶ್ರಫ್‌ ಕಣ್ಣು ಮತ್ತು ದೇಹಕ್ಕೆ ಎರಚಿದ್ದನು. ಅಲ್ಲದೇ, ಅಶ್ರಫ್‌ ಮೇಲೆ ತಾನು ಹಲ್ಲೆ ಮಾಡುವುದರೊಂದಿಗೆ ಇತರರಿಗೂ ಪ್ರಚೋದನೆ ನೀಡಿದ್ದನು” ಎಂದಿದ್ದರು.

ನಟೇಶ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಎಂ ಅರುಣ್‌ ಶ್ಯಾಮ್‌ ಅವರು “ಇದು ಕೊಲೆಯಲ್ಲ. ಹಲ್ಲೆಯಾಗಿರಬಹುದು. ಸುದೀರ್ಘ ಕಾಲದಿಂದ ನಟೇಶ್‌ ಜೈಲಿನಲ್ಲಿದ್ದು, ಕಸ್ಟಡಿಗೆ ಪಡೆದು ವಿಚಾರಣೆ ನಡೆಸುವ ಅಗತ್ಯವಿಲ್ಲದಿರುವುದರಿಂದ ಅವರಿಗೆ ಜಾಮೀನು ನೀಡಬೇಕು” ಎಂದು ಕೋರಿದ್ದರು.

ಪ್ರಕರಣದ ಹಿನ್ನೆಲೆ: ಮಂಗಳೂರು ತಾಲ್ಲೂಕಿನ ಕುಡುಪು ಗ್ರಾಮದ ಭಟ್ರ ಕಲ್ಲುರ್ಟಿ ದೇವಸ್ಥಾನದ ಹಿಂಬದಿಯಲ್ಲಿರುವ ಮೈದಾನದಲ್ಲಿ ಆಯೋಜಿಸಿದ್ದ ಕ್ರಿಕೆಟ್‌ ಪಂದ್ಯದ ವೇಳೆ ಸಮೀಪದ ರೈಲ್ವೆ ಹಳಿ ಕಡೆಯಿಂದ ಚಿಂದಿ ಆಯುವ ಮೊಹಮ್ಮದ್‌ ಅಶ್ರಫ್‌ ಎಂಬಾತ ಪಾಕಿಸ್ತಾನ್‌ ಪಾಕಿಸ್ತಾನ್‌ ಎಂದು ಜೋರಾಗಿ ಕೂಗುತ್ತಾ ಬರುತ್ತಿರುವುದನ್ನು ಕಂಡು ಕ್ರಿಕೆಟ್‌ ಆಡಲು ಮತ್ತು ಅದನ್ನು ನೋಡಲು ಬಂದಿದ್ದವರು ಏಕಾಏಕಿ ಆತನ ಮೇಲೆ ಹಲ್ಲಿ ನಡೆಸಿ, ತೀವ್ರವಾಗಿ ಗಾಯಗೊಳಿಸಿದ್ದರು ಎಂಬ ಆರೋಪದ ಮೇಲೆ 2025ರ ಏಪ್ರಿಲ್‌ 28ರಂದು ಮಂಗಳೂರು ಗ್ರಾಮಾಂತರ  ಠಾಣೆಯಲ್ಲಿ ಬಿಎನ್‌ಎಸ್‌ ಸೆಕ್ಷನ್‌ಗಳಾದ 103(2), 115(2), 189(2), 191(3), 190, 191(1), 240 ಅಡಿ ಪ್ರಕರಣ ದಾಖಲಾಗಿದೆ.

ಸಚಿನ್‌, ದೀಕ್ಷಿತ್‌, ಮಂಜುನಾಥ್‌, ಸಾಯಿದೀಪ್‌, ಸಂತೋಷ್‌, ದೇಜುಯಾನೆ ದೇವದಾಸ್‌, ಅನಿಲ್‌ ಕುಡುಪು, ಧನುಷ್‌ ಕುಡುಪು ಕಟ್ಟೆ, ನಿತೇಶ್‌, ಶ್ರೀದತ್ತ, ವಿವಿಯಾನ್‌, ಕಿಶೋರ್‌, ಆದರ್ಶ, ಅನಿಲ್ ಕೊಟುಮುರಾ, ಯತಿನ್‌ ಕೊಟುಮುರಾ, ಸಂದೀಪ್‌ ದೇವರಾ, ದೀಕ್ಷಿತ್‌ ಯಾನೆ ಮುನ್ನ, ನಾಗೇಂದ್ರ ಕೊಟಿಮುರಾ, ಸುನೀಲ್‌ ಮತ್ತಿತರರನ್ನು ಆರೋಪಿಗಳು ಎಂದು ಹೆಸರಿಸಲಾಗಿದೆ.

Natesh Kumar Vs State of Karnataka.pdf
Preview