Mob lynching 
ಸುದ್ದಿಗಳು

ಮಂಗಳೂರು ಗುಂಪು ಹತ್ಯೆ ಪ್ರಕರಣ: ಆರೋಪಿಗಳ ಜಾಮೀನು ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್‌

ವಿಚಾರಣಾಧೀನ ನ್ಯಾಯಾಲಯವು ಅಶ್ರಾಫ್‌ ಸಹೋದರನಿಗೆ ಸಕಾಲಕ್ಕೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೇ ಗಂಭೀರ ಲೋಪ ಎಸಗಿದೆ ಎಂದು ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ್‌ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

Bar & Bench

ಮಂಗಳೂರು ಗುಂಪು ಹತ್ಯೆ ಪ್ರಕರಣದಲ್ಲಿನ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಮತ್ತು ಸಾವಿನ್ನಪ್ಪಿದ ಅಶ್ರಾಫ್‌ ಸಹೋದರ ಸಲ್ಲಿಸಿದ್ದ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ.

ವಿಚಾರಣಾಧೀನ ನ್ಯಾಯಾಲಯವು ಅಶ್ರಾಫ್‌ ಸಹೋದರನಿಗೆ ಸಕಾಲಕ್ಕೆ ನೋಟಿಸ್‌ ಜಾರಿ ಮಾಡಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡದೇ ಗಂಭೀರ ಲೋಪ ಎಸಗಿದೆ ಎಂದು ನ್ಯಾಯಮೂರ್ತಿ ವಿಜಯಕುಮಾರ್‌ ಎ. ಪಾಟೀಲ್‌ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ಈಗಾಗಲೇ ಆರೋಪ ಪಟ್ಟಿ ಸಲ್ಲಿಕೆಯಾಗಿರುವುದರಿಂದ ಆರೋಪಿಗಳನ್ನು ವಶಕ್ಕೆ ಪಡೆಯುವ ಅಗತ್ಯವಿಲ್ಲ ಎಂಬ ಆಧಾರದಲ್ಲಿ ಜಾಮೀನು ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ. ಹೈಕೋರ್ಟ್‌ನ ಸಮನ್ವಯ ಪೀಠವು ಅಶ್ರಾಫ್‌ ಸಹೋದರನ ವಾದ ಆಲಿಸಿದ ಬಳಿಕ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ ಎಂಬುದನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಪ್ರಕರಣದಲ್ಲಿನ ನಾಲ್ಕು ಮತ್ತು 11ನೇ ಆರೋಪಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿರುವುದನ್ನು ಗಮನಿಸಿರುವ ಪೀಠವು, ಈ ಹಂತದಲ್ಲಿ ಜಾಮೀನು ಅರ್ಜಿ ವಜಾಗೊಳಿಸಿ ಹೊಸದಾಗಿ ಅವುಗಳನ್ನು ಪರಿಗಣಿಸುವಂತೆ ವಿಚಾರಣಾಧೀನ ನ್ಯಾಯಾಲಯಕ್ಕೆ ಆದೇಶಿಸುವುದರಿಂದ ವಿಚಾರಣೆ ವಿಳಂಬವಾಗುತ್ತದೆ, ಅಲ್ಲದೇ ಗುಂಪು ಹತ್ಯೆ ಪ್ರಕರಣಗಳನ್ನು ನಿಗದಿತ ಕಾಲಮಿತಿಯಲ್ಲಿ ಇತ್ಯರ್ಥಪಡಿಸುವಂತೆ ಸುಪ್ರೀಂ ಕೋರ್ಟ್‌ ಸೂಚಿಸಿದೆ ಎಂದು ಪೀಠ ಆದೇಶದಲ್ಲಿ ದಾಖಲಿಸಿದೆ.

2025ರ ಏಪ್ರಿಲ್‌ 27ರಂದು ಅಶ್ರಾಫ್‌ನನ್ನು ಕ್ರಿಕೆಟ್‌ ಆಡುತ್ತಿದ್ದ ಜನರ ಸಮೂಹ ಹಲ್ಲೆ ನಡೆಸಿ ಕೊಂದಿತ್ತು ಎಂದು ಆರೋಪಿಸಲಾಗಿದೆ. ಅಶ್ರಾಫ್‌ ಎಂಬಾತ ಪಾಕಿಸ್ತಾನ್‌.. ಪಾಕಿಸ್ತಾನ್‌ ಎಂದು ಕೂಗುತ್ತಾ ಕ್ರಿಕೆಟ್‌ ಮೈದಾನಕ್ಕೆ ನುಗ್ಗಿದ್ದನು. ಇದನ್ನು ಗಮನಿಸಿದ ಆರೋಪಿಗಳು ಆತನನ್ನು ಬೆನ್ನಟ್ಟಿದ್ದು, ಆತ ಎಡವಿ ಬಿದ್ದಿದ್ದನು. ಈ ಹಂತದಲ್ಲಿ ಅಲ್ಲಿದ್ದವರು ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಆತ ಆನಂತರ ಮೃತಪಟ್ಟಿದ್ದನು ಎಂಬುದು ಪ್ರಾಸಿಕ್ಯೂಷನ್‌ ಆರೋಪವಾಗಿದೆ.

ಬಂಧಿತ ಆರೋಪಿಗಳಿಗೆ ಸತ್ರ ನ್ಯಾಯಾಲಯವು ವಿವಿಧ ನೆಲೆಗಳ ಮೇಲೆ ಜಾಮೀನು ಮಂಜೂರು ಮಾಡಿದ್ದು, ಕೆಲವರಿಗೆ ಇತರರಿಗೆ ಜಾಮೀನು ಮಂಜೂರು ಮಾಡಿರುವುದನ್ನು ಪರಿಗಣಿಸಿ ಜಾಮೀನು ನೀಡಿತ್ತು. ಕೆಲವರಿಗೆ ಎಫ್‌ಐಆರ್‌ನಲ್ಲಿ ಅವರ ಹೆಸರಿಲ್ಲ ಎಂದು ಇನ್ನು ಕೆಲವರಿಗೆ ಕ್ರಿಮಿನಲ್‌ ಹಿನ್ನೆಲೆ ಎಂದು ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.

ಆರೋಪಿಗಳು ಪ್ರತಿ ತಿಂಗಳು ಪೊಲೀಸ್‌ ಠಾಣೆಗೆ ಹಾಜರಾಗಬೇಕು ಎಂಬ ಹೆಚ್ಚುವರಿ ಷರತ್ತು ವಿಧಿಸಬೇಕು ಎಂಬ ಸರ್ಕಾರದ ವಾದವನ್ನೂ ಹೈಕೋರ್ಟ್‌ ಇದೇ ಸಂದರ್ಭದಲ್ಲಿ ತಿರಸ್ಕರಿಸಿದೆ.

ಗುಂಪು ಹಲ್ಲೆ ಮತ್ತು ಹತ್ಯೆಯಲ್ಲಿ ಸಾವನ್ನಪ್ಪಿದವರ ಕುಟುಂಬದವರಿಗೆ ಮಧ್ಯಂತರ ಪರಿಹಾರದ ನೀಡುವ ಸಂಬಂಧ ಮೂರು ತಿಂಗಳಲ್ಲಿ ಯೋಜನೆ ರೂಪಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದ್ದು, ಈ ಸಂಬಂಧ ಅನುಪಾಲನಾ ವರದಿ ಸಲ್ಲಿಸಲು ಆದೇಶಿಸಿದೆ.

ಗುಂಪು ಹಲ್ಲೆ ಮತ್ತ ಹತ್ಯೆ ತಡೆಯಲು ಜಿಲ್ಲಾ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳ ನೇಮಕಾತಿ, ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು, ನಿಯಮಿತ ಪೊಲೀಸ್‌ ಗಸ್ತು, ತಕ್ಷಣಕ್ಕೆ ಎಫ್‌ಐಆರ್‌ ದಾಖಲಿಸುವುದನ್ನು ಕಟ್ಟುನಿಟ್ಟುಗೊಳಿಸಲು ರಾಜ್ಯ ಸರ್ಕಾರಕ್ಕೆ ಪೀಠ ನಿರ್ದೇಶಿಸಿದೆ.

ಇಂಥ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿಗದಿತ ನ್ಯಾಯಾಲಯಗಳನ್ನು ಆರಂಭಿಸಬೇಕು, ಸಂಜ್ಞೇ ಪರಿಗಣಿಸಿದ ಆರು ತಿಂಗಳಲ್ಲಿ ಪ್ರಕರಣ ಇತ್ಯರ್ಥವಾಗಬೇಕು. ಸಂತ್ರಸ್ತ ವ್ಯಕ್ತಿಯ ಕುಟುಂಬದವರಿಗೆ ಆರೋಪಿಗಳು ಆರೋಪ ಮುಕ್ತಿ ಕೋರುವಾಗ, ಜಾಮೀನು ಕೋರುವಾಗ ಮತ್ತು ಪೆರೋಲ್‌ ಕೇಳುವಾಗ ವಿರೋಧಿಸಲು ನೋಟಿಸ್‌ ಜಾರಿ ಮಾಡಬೇಕು ಎಂದೂ ಹೈಕೋರ್ಟ್‌ ನಿರ್ದೇಶಿಸಿದೆ.

ಇಂಥ ಕೃತ್ಯಗಳನ್ನು ತಡೆಯಲು, ಹತ್ತಿಕ್ಕಲು ವಿಫಲವಾಗುವ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕೈಗೊಳ್ಳಬೇಕು. ಈ ಆದೇಶವನ್ನು ಪಾಲಿಸಲು ಆದೇಶದ ಪ್ರತಿಯನ್ನು ಎಲ್ಲಾ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಲಯಗಳಿಗೆ ಕಳುಹಿಸಿಕೊಡಬೇಕು ಮತ್ತು ಸಂತ್ರಸ್ತರನ್ನು ಪ್ರಕರಣದಲ್ಲಿ ಪಕ್ಷಕಾರರನ್ನಾಗಿಸಬೇಕು ಎಂದು ನಿರ್ದೇಶಿಸಿದೆ.

Abdul Jabbar & Sachin and others.pdf
Preview