ಮಣಿಪುರ ಹೈಕೋರ್ಟ್ ಪರಿಶಿಷ್ಟ ಪಂಗಡದ ಮೊದಲ ಮಹಿಳಾ ನ್ಯಾಯಮೂರ್ತಿಯಾಗಿ ನ್ಯಾಯಾಂಗ ಅಧಿಕಾರಿ ಗೊಲ್ಮೆಯ್ ಗೈಫುಲ್‌ಶಿಲು ಕಬುಯಿ ಅವರನ್ನು ನೇಮಕ ಮಾಡಿ ಕೇಂದ್ರ ಸರ್ಕಾರ ಶುಕ್ರವಾರ ಅಧಿಸೂಚನೆ ಹೊರಡಿಸಿದೆ.
ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವಾಲಯದ ಸ್ವತಂತ್ರ ಉಸ್ತುವಾರಿಯಾದ ರಾಜ್ಯ ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಈ ಬೆಳವಣಿಗೆಯನ್ನು ಟ್ವೀಟ್ ಮಾಡಿದ್ದಾರೆ.
ಮಣಿಪುರ ಹೈಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಲಿರುವ ಪರಿಶಿಷ್ಟ ಬುಡಕಟ್ಟು ಸಮುದಾಯದ ಮೊದಲ ಮಹಿಳೆ ಕಬೂಯಿ.
ನ್ಯಾಯಾಂಗ ಅಧಿಕಾರಿಗಳಾದ ಅರಿಬಮ್ ಗುಣೇಶ್ವರ್ ಶರ್ಮಾ ಮತ್ತು ಕಬೂಯಿ ಅವರನ್ನು ಮಣಿಪುರ ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ಪದೋನ್ನತಿ ನೀಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಕಳೆದ ಜನವರಿಯಲ್ಲಿ ಶಿಫಾರಸು ಮಾಡಿತ್ತು. ಐವರು ನ್ಯಾಯಮೂರ್ತಿಗಳ ಸಾಮರ್ಥ್ಯದ ಹೈಕೋರ್ಟ್ನಲ್ಲಿ ಪ್ರಸ್ತುತ 3 ಮಂದಿ ನ್ಯಾಯಮೂರ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯಕ್ಕೆ ಇಲ್ಲಿ ಕಾಯಂ ಮುಖ್ಯ ನ್ಯಾಯಮೂರ್ತಿ ಹುದ್ದೆ ಖಾಲಿ ಇದೆ.