ಲೋಕಸಭಾ ಚುನಾವಣೆ ಬಳಿಕ ಮಣಿಪುರದ ಕುಕಿ-ಜೋ ಬುಡಕಟ್ಟು ಜನಾಂಗದವರ ವಿರುದ್ಧ ಮತ್ತೆ ಹಿಂಸಾತ್ಮಕ ದಾಳಿ ನಡೆಯುವ ಭೀತಿಯ ಹಿನ್ನೆಲೆಯಲ್ಲಿ ಮಣಿಪುರ ಬುಡಕಟ್ಟು ವೇದಿಕೆ ಸುಪ್ರೀಂ ಕೋರ್ಟ್ ಮೊರೆ ಹೋಗಿದೆ.
ಕಳೆದ ಆರು ತಿಂಗಳಿನಿಂದ, ಮಣಿಪುರದ ಕುಕಿ-ಜೋ ಸಮುದಾಯ ಆಕ್ರಮಣಕಾರಿ ಗುಂಪುಗಳ ಶಸ್ತ್ರಸಜ್ಜಿತರಾಗಿ ಸನ್ನದ್ಧರಾಗುತ್ತಿರುವುದನ್ನು ಪ್ರತ್ಯಕ್ಷ ಕಾಣಲಾಗಿದೆ. ಈ ಗುಂಪುಗಳಲ್ಲಿ ಒಂದಾದ ಅರಂಬೈ ಟೆಂಗೋಲ್ ಕುಕಿಗಳನ್ನು ನಾಶಮಾಡುವುದಾಗಿ ಬೆದರಿಕೆ ಹಾಕಿದೆ ಎಂದು ಅರ್ಜಿ ಆತಂಕ ವ್ಯಕ್ತಪಡಿಸಿದೆ.
ಅರ್ಜಿಯ ಪ್ರಮುಖಾಂಶಗಳು
ಹಿಂಸಾಚಾರದ ತನಿಖೆಗಳ ಮೇಲ್ವಿಚಾರಣೆಗಾಗಿ ಸುಪ್ರೀಂ ಕೋರ್ಟ್ ನೇಮಿಸಿದ ಮಹಾರಾಷ್ಟ್ರ ಪೊಲೀಸ್ ಅಧಿಕಾರಿ ದತ್ತಾತ್ರೇ ಪಡಸಾಲಿಗೀಕರ್ ಅವರು ಕುಕಿ ಜೋ ಸಮುದಾಯದ ನೆರವಿಗೆ ಬಂದಿಲ್ಲ
ಸಮುದಾಯದ ಮೇಲಿನ ಕ್ರೂರ ದಾಳಿಯ ಬಗ್ಗೆ ಮತ್ತೆ ಮತ್ತೆ ಮನವಿ ಸಲ್ಲಿಸಿದ್ದರೂ ಅವರು ಯಾವುದೇ ಕ್ರಮ ಕೈಗೊಂಡಿಲ್ಲ.
ದಾಳಿಕೋರರು ಸ್ವತಂತ್ರವಾಗಿ ತಿರಗುತ್ತಿದ್ದು ಹಿಂಸಾಚಾರ ಮತ್ತು ಶಸ್ತ್ರಾಸ್ತ್ರ ದೋಚುವಿಕೆಗೆ ಸಂಬಂಧಿಸಿದಂತೆ ಪಡಸಾಲಗೀಕರ್ ಅವರಿಗೆ ಐದು ಮನವಿ ಸಲ್ಲಿಸಿದ್ದರೂ ಸಂತ್ರಸ್ತ ಸಮುದಾಯವನ್ನು ಕತ್ತಲಲ್ಲಿಡಲಾಗಿದೆ.
ಮೊದಲ ದಾಳಿಗಿಂತಲೂ ತೀವ್ರ ದಾಳಿ ನಡೆಯಬಹುದಾದ್ದರಿಂದ ನ್ಯಾಯಾಲಯದೆದುರು ಕೈಮುಗಿದು ನಿಂತಿದ್ದೇವೆ.
ಕುಕಿ ಸಮುದಾಯದ ಬಾಲಕನ ಶಿರಚ್ಛೇದ ಮಾಡಿದ ಆರೋಪ ಎದುರಿಸುತ್ತಿರುವ ಕುಂಬಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಎಸ್ ಪ್ರೇಮಚಂದ್ರ ಸಿಂಗ್ ಅವರನ್ನು ಬಂಧಿಸಬೇಕು.
ಹಿಂಸಾಚಾರ ತಡೆಗಟ್ಟಲು ಅರಂಬೈ ಟೆಂಗೋಲ್ ಮತ್ತು ಮೈತೇಯಿ ಲೀಪುನ್ ಗುಂಪಿನ ನಾಯಕರನ್ನು ಬಂಧಿಸಬೇಕು.
170 ಕುಕಿಗಳ ಸಾವು ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಸಿದ್ಧಪಡಿಸಲಾದ ಆರೋಪಪಟ್ಟಿಗಳ ವಿವರಗಳನ್ನು ಮಣಿಪುರ ಸರ್ಕಾರ ಕೂಡಲೇ ಬಹಿರಂಗಪಡಿಸಬೇಕು.
ಭಾರತೀಯ ಸೇನೆಯು ತಕ್ಷಣವೇ ಕುಕಿ-ಜೋ ಸಮುದಾಯದ ಜೀವ ಮತ್ತು ಆಸ್ತಿ ರಕ್ಷಣೆಗೆ ಮುಂದಾಗಬೇಕು.
ಪಡಸಾಲಿಗೀಕರ್ ಮತ್ತು ನ್ಯಾಯಮೂರ್ತಿ ಗೀತಾ ಮಿತ್ತಲ್ ಸಮಿತಿ ಸಲ್ಲಿಸಿದ ವರದಿಗಳನ್ನು ಬಹಿರಂಗಪಡಿಸಬೇಕು.
ಮಣಿಪುರ ಹಿಂಸಾಚಾರಕ್ಕೆ ಸಂಬಂಧಿಸಿದ ವಿವಿಧ ಅರ್ಜಿಗಳು ಸುಪ್ರೀಂ ಕೋರ್ಟ್ ಅಂಗಳದಲ್ಲಿವೆ. ಹಿಂಸಾಚಾರದ ತನಿಖೆ ಮೇಲ್ವಿಚಾರಣೆಗಾಗಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರ ನೇತೃತ್ವದ ಅಖಿಲ ಮಹಿಳಾ ನ್ಯಾಯಾಂಗ ಸಮಿತಿಯನ್ನು ಸುಪ್ರೀಂ ಕೋರ್ಟ್ ರಚಿಸಿತ್ತು. ಆದರೆ ರಾಜ್ಯ ಸರ್ಕಾರದ ಪ್ರತಿಯೊಂದು ವಿವರಗಳನ್ನು ಪರಿಶೀಲಿಸುವ ಗುರಿ ತನ್ನದಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಕೆಲ ತಿಂಗಳುಗಳ ಹಿಂದೆ ತಿಳಿಸಿದ್ದರು.
ಹಿಂಸಾಚಾರಕ್ಕೆ ಬಲಿಯಾದ ವಾರಸುದಾರರಲಿಲ್ಲದ ಮತ್ತು ಗುರುತು ಪತ್ತೆಯಾಗದವರ ದೇಹಗಳನ್ನು ಸೂಕ್ತ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನಡೆಸುವಂತೆ ನ್ಯಾಯಾಲಯ ಮಣಿಪುರ ಸರ್ಕಾರಕ್ಕೆ ಆದೇಶಿಸಿತ್ತು. ಇದಕ್ಕೂ ಮುನ್ನ ಅಂದರೆ ಕಳೆದ ವರ್ಷ ಆಗಸ್ಟ್‌ನಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ತನಿಖೆಯ ಮೇಲ್ವಿಚಾರಣೆ ನಡೆಸುವಂತೆ ಪಡಸಾಲಿಗೀಕರ್ ಅವರಿಗೆ ನಿರ್ದೇಶನ ನೀಡಿತ್ತು.