Manipur Violence, Supreme Court  
ಸುದ್ದಿಗಳು

ಮಣಿಪುರ ಹಿಂಸಾಚಾರ: ಸಂತ್ರಸ್ತರ ಪರಿಹಾರ ಹೆಚ್ಚಳ, ಗುರುತುಪತ್ರ ಮರು ಒದಗಿಸಲು ಸುಪ್ರೀಂಗೆ ಮಹಿಳಾ ಸಮಿತಿ ಒತ್ತಾಯ

Bar & Bench

ಮಣಿಪುರದಲ್ಲಿ ಇತ್ತೀಚೆಗೆ ನಡೆದ ಜನಾಂಗೀಯ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ಒದಗಿಸಲೆಂದು ಸುಪ್ರೀಂ ಕೋರ್ಟ್‌ ರಚಿಸಿದ್ದ ಮಹಿಳಾ ಸಮಿತಿಯು ಹಿಂಸಾಚಾರದ ಸಂತ್ರಸ್ತರಿಗೆ ನೀಡಲಾಗುವ ಪರಿಹಾರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಿದೆ.

ಹಿಂಸಾಚಾರ ಮತ್ತು ಸಲಹೆಗಳ ಕುರಿತು ತನ್ನ ಅವಲೋಕನಗಳಿಗೆ ಸಂಬಂಧಿಸಿದಂತೆ ಜಮ್ಮು ಕಾಶ್ಮೀರ ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್‌, ನಿವೃತ್ತ ನ್ಯಾಯಮೂರ್ತಿಗಳಾದ ಶಾಲಿನಿ ಜೋಶಿ ಹಾಗೂ ಆಶಾ ಮೆನನ್ ಅವರಿರುವ ಸಲಹಾ ಸಮಿತಿ ಮೂರು ವರದಿಗಳನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದೆ.

ವರದಿಗಳನ್ನು ಪರಿಶೀಲಿಸಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ  “ಸಂತ್ರಸ್ತರಿಗೆ ಅಗತ್ಯ ದಾಖಲೆಗಳನ್ನು ಮತ್ತೆ ಒದಗಿಸಬೇಕಿದೆ, ಸಂತ್ರಸ್ತರ ಪರಿಹಾರ ಯೋಜನೆಯನ್ನು ನವೀಕರಿಸುವ ಅಗತ್ಯವಿದ್ದು ನೋಡಲ್‌ ಆಡಳಿತ ತಜ್ಞರನ್ನು ನೇಮಿಸಬೇಕು” ಎಂದಿದೆ.  

ಮಣಿಪುರ ಹಿಂಸಾಚಾರದಲ್ಲಿ ಮನೆ ಕಳೆದುಕೊಂಡ ವ್ಯಕ್ತಿಗಳು ಅಗತ್ಯ ದಾಖಲೆಗಳನ್ನು ಕಳೆದುಕೊಂಡಿರುವುದು ಸಮಿತಿಯ ವರದಿಗಳಲ್ಲಿ ಎತ್ತಿರುವ ಮಹತ್ವದ ವಿಚಾರಗಳಲ್ಲೊಂದಾಗಿದೆ. ಆಧಾರ್‌ ಚೀಟಿಯಂತಹ ಕಳೆದುಕೊಂಡಿರುವ ನಿರ್ಣಾಯಕ ಗುರುತಿನ ದಾಖಲೆಗಳನ್ನು ಮತ್ತೆ ಒದಗಿಸಲು ಅನುವಾಗುವಂತೆ ನೋಡಲ್ ಅಧಿಕಾರಿಗಳನ್ನು ನೇಮಿಸಬೇಕು ಎಂದು ವರದಿಗಳು ತಿಳಿಸಿವೆ.

ಜೊತೆಗೆ ಪರಿಹಾರ ಯೋಜನೆಗಳ ಕುರಿತಂತೆಯೂ ಸಮಿತಿ ಪ್ರಸ್ತಾಪಿಸಿದ್ದು ಎನ್‌ಎಎಲ್‌ಎಸ್‌ಎ ಯೋಜನೆಗೆ ಅನುಗುಣವಾಗಿ ಸಮಿತಿ ಪರಿಹಾರ ಕಾರ್ಯಸೂಚಿಯಲ್ಲಿ ಸುಧಾರಣೆಗಳನ್ನು ಮಾಡುವಂತೆ ಶಿಫಾರಸು ಮಾಡಿದೆ.