Supreme Court, Manipur Violence 
ಸುದ್ದಿಗಳು

ಮಣಿಪುರ ಹಿಂಸಾಚಾರಕ್ಕೆ ಬಿಜೆಪಿ ಕುಮ್ಮಕ್ಕು: ಸುಪ್ರೀಂ ಕೋರ್ಟ್ ಮೊರೆ ಹೋದ ಮಣಿಪುರ ಬುಡಕಟ್ಟು ಸಂಘಟನೆ

ಪಿಐಎಲ್ ಅಲ್ಲದೆ, ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಸಂಬಂಧ ಮಣಿಪುರ ಹೈಕೋರ್ಟ್ ಮಾರ್ಚ್ 27ರಂದು ಜಾರಿಗೊಳಿಸಿದ್ದ ಆದೇಶ ಪ್ರಶ್ನಿಸಿ ಬಿಜೆಪಿ ಶಾಸಕ ದಿಂಗಂಗ್ಲುಂಗ್ ಗ್ಯಾಂಗ್ಮಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಮಣಿಪುರ ರಾಜ್ಯದಲ್ಲಿನ ಸಂಘರ್ಷದ ಹಿನ್ನೆಲೆಯಲ್ಲಿ ಸಿಆರ್‌ಪಿಎಫ್ ಶಿಬಿರಗಳಿಗೆ ಓಡಿಹೋಗಿರುವ ಮಣಿಪುರಿ ಬುಡಕಟ್ಟು ಜನಾಂಗದವರನ್ನು ಬೆಂಗಾವಲಿನಲ್ಲಿ ಸುರಕ್ಷಿತವಾಗಿ ಮರಳಿ ಗ್ರಾಮಗಳಿಗೆ ಕರೆತರಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಕೋರಿ ಶನಿವಾರ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ [ಮಣಿಪುರ ಟ್ರೈಬಲ್ ಫೋರಮ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].

ಮಣಿಪುರದಲ್ಲಿ ಬುಡಕಟ್ಟು ಸಮುದಾಯಗಳ ಮೇಲಿನ ದಾಳಿಗೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯ ಪೂರ್ಣ ಕುಮ್ಮಕ್ಕು ಇದೆ ಎಂದು ಮಣಿಪುರ ಬುಡಕಟ್ಟು ವೇದಿಕೆ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಆರೋಪಿಸಿದೆ.

ದಾಳಿಗೆ ರಾಜ್ಯ (ಇಂಡಿಯನ್ ಪೀಪಲ್ಸ್ ಪಾರ್ಟಿ ಮತ್ತು ಬಿಜೆಪಿ)  ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಸಂಪೂರ್ಣ ಬೆಂಬಲ ಇದೆ. ಅದು ಬಲಾಢ್ಯ ಸಮುದಾಯಗಳನ್ನು ಬೆಂಬಲಿಸುತ್ತಿದ್ದು ಸಂವಿಧಾನದ ನಿಯಮಾವಳಿಗೆ ವ್ಯತಿರಿಕ್ತವಾದ ಜಾತ್ಯತೀತವಲ್ಲದ ಕಾರ್ಯಸೂಚಿಯ ಕಾರಣಕ್ಕೆ ದಾಳಿಗಳನ್ನು ಆಯೋಜಿಸಿದೆ ಎಂದು ಆರೋಪಿಸಲಾಗಿದೆ.

ಪ್ರಬಲ ಸಮುದಾಯ ನಡೆಸುದ ದಾಳಿಯಲ್ಲಿ 30 ಬುಡಕಟ್ಟು ವ್ಯಕ್ತಿಗಳು ಸಾವನ್ನಪ್ಪಿದ್ದು 132 ಮಂದಿ ಗಾಯಗೊಂಡಿದ್ದಾರೆ. ಇಷ್ಟಾದರೂ ಈ ಯಾವ ಘಟನೆಗಳಿಗೆ ಸಂಬಂಧಿಸಿದಂತೆಯೂ ಎಫ್‌ಐಆರ್‌ ದಾಖಲಾಗಿಲ್ಲ ಎಂದು ಆತಂಕ ವ್ಯಕ್ತಪಡಿಸಲಾಗಿದೆ.  

ಪೊಲೀಸರೇ ಬಲಾಢ್ಯ ಸಮುದಾಯದ ಪರವಾಗಿದ್ದು ಹತ್ಯೆ ನಡೆಯುವಾಗ ಅವರ ನಿಷ್ಕ್ರಿಯತೆಯಿಂದಾಗಿ ಎಫಐಆರ್‌ ದಾಖಲಾಗಿಲ್ಲ, ಇಲ್ಲವೇ ಯಾವುದೇ ತನಿಖೆ ನಡೆಯುತ್ತಿಲ್ಲ ಎಂದು ಪಿಐಎಲ್‌ ದೂರಿದೆ.

ಹಾಗಾಗಿ, ಆದಿವಾಸಿಗಳ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ವಿರುದ್ಧ ಅಸ್ಸಾಂನ ಮಾಜಿ ಪೊಲೀಸ್ ಮಹಾನಿರ್ದೇಶಕ ಹರೇಕೃಷ್ಣ ದೇಕಾ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಬೇಕು. ಜೊತೆಗೆ ಮುಖ್ಯ ನ್ಯಾಯಮೂರ್ತಿ ಟಿನ್ಲಿಯಾಂತಾಂಗ್ ವೈಪೇಯಿ, ಮೇಘಾಲಯ ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷರ ನೇತೃತ್ವದಲ್ಲಿ ತನಿಖೆಯ ಮೇಲ್ವಿಚಾರಣೆ ನಡೆಸಬೇಕು ಎಂದು ಮನವಿ ಮಾಡಲಾಗಿದೆ.

ಮುಖ್ಯವಾಹಿನಿಯ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಯ ವಿರುದ್ಧ ಮಣಿಪುರದಲ್ಲಿ ಕೆಲ ಬುಡಕಟ್ಟು ಜನಾಂಗದವರು ವಿರೋಧ ವ್ಯಕ್ತಪಡಿಸಿದ್ದರು. ಮೈತೇಯಿ ಸಮುದಾಯವನ್ನು ನಾಲ್ಕು ವಾರಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ತ್ವರಿತವಾಗಿ ಪರಿಗಣಿಸಬೇಕು ಎಂದು ಮಣಿಪುರ ಹೈಕೋರ್ಟ್‌ ಏಪ್ರಿಲ್ 19, 2023 ರಂದು ಆದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಘರ್ಷಣೆಗೆ ಇಂಬು ನೀಡಿತು.

ನ್ಯೂ ಲಂಬುಲೇನ್, ಚೆಕಾನ್, ಗೇಮ್ಸ್ ವಿಲೇಜ್, ಪೈಟೆ ವೆಂಗ್, ಲ್ಯಾಂಫೆಲ್, ಲಾಂಗೊಲ್, ಮಂತ್ರಿಪುಖ್ರಿ, ಚಿಂಗ್‌ಮೈರಾಂಗ್, ಮುಂತಾದ ಬುಡಕಟ್ಟು ಜನಾಂಗದವರು ನೆಲೆಸಿದ್ದ ತಾಣಗಳಿಗೆ ಅವರನ್ನು ಸುರಕ್ಷಿತವಾಗಿ ಕರೆತರಲು ಕೇಂದ್ರ ಸರ್ಕಾರದ ಸೇನಾಪಡೆಗಳಿಗೆ ನಿರ್ದೇಶನ ನೀಡಬೇಕು. ಜೊತೆಗೆ ಹಿಂಸಾಚಾರಕ್ಕೆ ತುತ್ತಾದ ಚರ್ಚ್‌ಗಳ ಮರು ನಿರ್ಮಾಣ ಮಾಡಲು ಸೂಚಿಸಬೇಕು ಎಂದು ಪಿಐಎಲ್‌ ಪ್ರಾರ್ಥಿಸಿದೆ.

 ಮತ್ತೊಂದು ಅರ್ಜಿ

ಇದೇ ವೇಳೆ ಮುಖ್ಯವಾಹಿನಿಯ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡುವ ಸಂಬಂಧ ಮಣಿಪುರ ಹೈಕೋರ್ಟ್‌ ಮಾರ್ಚ್ 27ರಂದು ಜಾರಿಗೊಳಿಸಿದ್ದ ಆದೇಶ ಪ್ರಶ್ನಿಸಿ ಗುಡ್ಡಗಾಡು ಪ್ರದೇಶಗಳ ಸಮಿತಿ ಅಧ್ಯಕ್ಷ ಮತ್ತು ಬಿಜೆಪಿ ಶಾಸಕ ದಿಂಗಂಗ್‌ಲುಂಗ್ ಗ್ಯಾಂಗ್‌ಮಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಮೈತೇಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರದ ಬಳಿ ಯಾವುದೇ ಪ್ರಸ್ತಾವನೆ ಇಲ್ಲ. ಅಲ್ಲದೆ ರಾಜ್ಯ ಸರ್ಕಾರ ಕೇಂದ್ರಕ್ಕೆ ಅಂತಹ ಯಾವುದೇ ಪ್ರಸ್ತಾವನೆ ಕಳುಹಿಸಿಲ್ಲ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.