Supreme Court, Manipur Violence
Supreme Court, Manipur Violence  
ಸುದ್ದಿಗಳು

ಸಹಜ ಸ್ಥಿತಿಯತ್ತ ಮಣಿಪುರ: ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರದ ವಿವರಣೆ

Bar & Bench

ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಆತಂಕವನ್ನು ಹೋಗಲಾಡಿಸಲಾಗುವುದು ಮತ್ತು ಸಕಾರಾತ್ಮಕ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಮಣಿಪುರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಸೋಮವಾರ ತಿಳಿಸಿದೆ. ಮಣಿಪುರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ನ್ಯಾಯಾಲಯಕ್ಕೆ ಈ ಭರವಸೆ ನೀಡಿದರು.

ಈ ಹಿನ್ನೆಲೆಯಲ್ಲಿ ಪರಿಹಾರ ಶಿಬಿರಗಳಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು, ಊರು ತೊರೆದ ವ್ಯಕ್ತಿಗಳ ಪುನರ್ವಸತಿಗಾಗಿ ಮತ್ತು ಧಾರ್ಮಿಕ ಪೂಜಾ ಸ್ಥಳ ರಕ್ಷಣೆಗಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಪಿ.ಎಸ್.ನರಸಿಂಹ ಮತ್ತು ಜೆ.ಬಿ.ಪರ್ದಿವಾಲಾ ಅವರಿದ್ದ ಪೀಠ ತಾಕೀತು ಮಾಡಿತು.

ವಿಚಾರಣೆ ವೇಳೆ ತುಷಾರ್‌ ಮೆಹ್ತಾ ʼಪರಿಸ್ಥಿತಿ ತಹಬಂದಿಗೆ ತರುವುದಕ್ಕಾಗಿ ಸಿಎಪಿಎಫ್‌ನ 52 ತುಕಡಿ, ಅಸ್ಸಾಂ ರೈಫಲ್ಸ್‌ನ 101 ತುಕಡಿಗಳನ್ನು ನಿಯೋಜಿಸಲಾಗಿದೆ. ಪ್ರಕ್ಷುಬ್ಧ ಸ್ಥಳಗಳಲ್ಲಿ ಈ ತುಕಡಿಗಳು ಪಥ ಸಂಚಲನ ನಡೆಸಿವೆ. ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರನ್ನು ಭದ್ರತಾ ಸಲಹೆಗಾರರನ್ನಾಗಿ ನೇಮಿಸಲಾಗಿದೆ. ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಯನ್ನು ಮುಖ್ಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ. ಇದಲ್ಲದೆ, ಶಾಂತಿ ಸಭೆಗಳನ್ನು ನಡೆಸಲಾಗಿದ್ದು ಊರು ತೊರೆದ ವ್ಯಕ್ತಿಗಳಿಗಾಗಿ ಪರಿಹಾರ ಶಿಬಿರಗಳನ್ನು ತೆರೆಯಲಾಗಿದ್ದು. ಗಲಭೆಗ್ರಸ್ತ ಪ್ರದೇಶಗಳಲ್ಲಿ ಸಿಲುಕಿದ್ದವರ ಸುಗಮ ಸಂಚಾರಕ್ಕೆ ಭದ್ರತಾಪಡೆಗಳು ಅನುವು ಮಾಡಿವೆ” ಎಂದು ತಿಳಿಸಿದರು.

“ಈ ಪ್ರಯತ್ನಗಳಿಂದಾಗಿ ಕಳೆದೆರಡು ದಿನಗಳಿಂದ ಹಿಂಸಾಚಾರದ ಘಟನೆ ವರದಿಯಾಗಿಲ್ಲ. ಪರಿಸ್ಥಿತಿ ಸಹಜತೆಯತ್ತ ಮರಳುತ್ತಿದೆ. ಅಹಿತಕರ ಘಟನೆಗಳು ನಡೆಯದೇ ಇರುವುದರಿಂದ ಮೂರರಿಂದ ನಾಲ್ಕು ಗಂಟೆಗಳ ಕಾಲ ಕರ್ಫ್ಯೂ ಸಡಿಲಿಸಲಾಗಿದೆ. ಇದು ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಸೂಚಿಸುತ್ತದೆ" ಎಂದು ಅವರು ಹೇಳಿದರು.

ಮಣಿಪುರ ರಾಜ್ಯದಲ್ಲಿ ನಡೆಯುತ್ತಿರುವ ಘರ್ಷಣೆ ಮತ್ತು ಹಿಂಸಾಚಾರದ ಕುರಿತಂತೆ ಮೂರು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು.

ಬಹುಸಂಖ್ಯಾತ ಮೈತೇಯಿ ಸಮುದಾಯಕ್ಕೆ ಎಸ್‌ಟಿ ಸ್ಥಾನಮಾನ ನೀಡಬೇಕು ಎಂಬ ಬೇಡಿಕೆಗೆ ಮಣಿಪುರದಲ್ಲಿ ಕೆಲ ಬುಡಕಟ್ಟು ಜನಾಂಗದವರು ವಿರೋಧ ವ್ಯಕ್ತಪಡಿಸಿದ್ದರು. ಮೈತೇಯಿ ಸಮುದಾಯವನ್ನು ನಾಲ್ಕು ವಾರಗಳಲ್ಲಿ ಪರಿಶಿಷ್ಟ ಪಂಗಡದ ಪಟ್ಟಿಗೆ ತ್ವರಿತವಾಗಿ ಪರಿಗಣಿಸಬೇಕು ಎಂದು ಮಣಿಪುರ ಹೈಕೋರ್ಟ್‌ ಏಪ್ರಿಲ್ 19, 2023 ರಂದು ಆದೇಶಿಸಿತ್ತು. ಇದು ಬುಡಕಟ್ಟು ಮತ್ತು ಬುಡಕಟ್ಟೇತರ ಸಮುದಾಯಗಳ ನಡುವಿನ ಘರ್ಷಣೆಗೆ ಇಂಬು ನೀಡಿತು.