ಮಣಿಪುರದ ಬುಡಕಟ್ಟು ಪ್ರದೇಶಗಳಲ್ಲಿ ಭದ್ರತೆ ಒದಗಿಸುವಂತೆ ಭಾರತೀಯ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ನಿರ್ದೇಶನ ನೀಡಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.
ಸೇನಾ ಕಾರ್ಯಾಚರಣೆ, ಭದ್ರತಾ ಅಥವಾ ರಕ್ಷಣಾ ಕಾರ್ಯಾಚರಣೆಗಳನ್ನು ಹೇಗೆ ನಡೆಸಬೇಕು ಎಂದು ಅಸಿತ್ವ ಪಡೆದ 72 ವರ್ಷಗಳಲ್ಲಿ ಸುಪ್ರೀಂ ಕೋರ್ಟ್ ಈವರೆಗೆ ಎಂದಿಗೂ ನಿರ್ದೇಶನ ನೀಡಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಪಿ ಎಸ್ ನರಸಿಂಹ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ ತಿಳಿಸಿದೆ.
ಸೇನೆಯ ಮೇಲಿನ ನಾಗರಿಕ ನಿಯಂತ್ರಣ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದ್ದು ನ್ಯಾಯಾಲಯ ಈ ತತ್ವವನ್ನು ಉಲ್ಲಂಘಿಸುವುದಿಲ್ಲ ಎಂದು ಪೀಠ ಒತ್ತಿ ಹೇಳಿತು.
"ಕಳೆದ 72 ವರ್ಷಗಳಲ್ಲಿ ನಾವು ಭಾರತೀಯ ಸೇನೆಗೆ ಅಂತಹ ನಿರ್ದೇಶನ ನೀಡಿಲ್ಲ. ಪ್ರಜಾಪ್ರಭುತ್ವದ ಶ್ರೇಷ್ಠ ಲಕ್ಷಣವೆಂದರೆ ಸೇನೆಯ ಮೇಲೆ ನಾಗರಿಕರ ನಿಯಂತ್ರಣ ಇರುವುದಾಗಿದ್ದು ನಾವು ಅದನ್ನು ಉಲ್ಲಂಘಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ನುಡಿಯಿತು.
ಕಾನೂನು ಸುವ್ಯವಸ್ಥೆ ಹಾಗೂ ರಾಜ್ಯದ ಭದ್ರತೆ ಕಾಪಾಡುವುದು ಚುನಾಯಿತ ಸರ್ಕಾರದ ವ್ಯಾಪ್ತಿಗೆ ಬರಲಿದ್ದು ನ್ಯಾಯಾಲಯ ಸೇನೆ ಮತ್ತು ಅರೆಸೇನಾ ಪಡೆಗಳಿಗೆ ಆ ಬಗೆಯ ನಿರ್ದೇಶನ ನೀಡುವುದು ಸೂಕ್ತವಲ್ಲ. ಹೀಗಾಗಿ ಸೇನೆಯ ನಿರ್ದಿಷ್ಟ ಪಡೆಯೊಂದನ್ನು ಎಲ್ಲಿ ನಿಯೋಜಿಸಬೆಕು ಎಂಬಿತ್ಯಾದಿಗಳ ಕುರಿತು ನ್ಯಾಯಾಲಯ ನಿರ್ದೇಶನ ನೀಡುವುದು ಸಾಧ್ಯವಿಲ್ಲ ಎಂದು ಅದು ವಿವರಿಸಿತು. ಆದರೆ ಮಣಿಪುರದಲ್ಲಿ ಜನರ ಜೀವನ ಮತ್ತು ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ ನೋಡಿಕೊಳ್ಳಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಅದು ನಿರ್ದೇಶಿಸಿತು.
ಮಣಿಪುರ ಹಿಂಸಾಚಾರ ಹಿನ್ನೆಲೆಯಲ್ಲಿ ಸಲ್ಲಿಸಲಾಗಿದ್ದ ವಿವಿಧ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹಿಂಸಾಚಾರ ತಡೆಗಟ್ಟಲು ತಾನು ಕೈಗೊಂಡ ಕ್ರಮಗಳನ್ನು ಸೂಚಿಸುವ ಹೊಸ ಸ್ಥಿತಿಗತಿ ವರದಿ ಸಲ್ಲಿಸುವುದಾಗಿ ರಾಜ್ಯ ಸರ್ಕಾರ ಕಳೆದ ವಾರ ನ್ಯಾಯಾಲಯಕ್ಕೆ ತಿಳಿಸಿತ್ತು.