Supreme Court, Manipur Violence
Supreme Court, Manipur Violence 
ಸುದ್ದಿಗಳು

ಮಣಿಪುರ ಹಿಂಸಾಚಾರ: ಅಸ್ಸಾಂನಿಂದ ಸಿಬಿಐ ಪ್ರಕರಣಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಅನುಮತಿ

Bar & Bench

ಮಣಿಪುರ ಹಿಂಸಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಸುತ್ತಿರುವ ಪ್ರಕರಣಗಳ ವಿಚಾರಣೆಯನ್ನು ಅಸ್ಸಾಂನಿಂದ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದೆ.

ಸಂತ್ರಸ್ತರಿಗೆ ಮಣಿಪುರದಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಹೇಳಿಕೆ ನೀಡಲು ಅನುಕೂಲವಾಗುವಂತೆ ನ್ಯಾಯಾಲಯ ಹಲವು ನಿರ್ದೇಶನಗಳನ್ನು ನೀಡಿದೆ.

ವೀಡಿಯೊ ಕಾನ್ಫರೆನ್ಸ್‌ ಮೂಲಕ ವಿಚಾರಣೆ ನಡೆಸಲು ಮಣಿಪುರದಲ್ಲಿ ಸೂಕ್ತ ಅಂತರ್ಜಾಲ ಸೌಲಭ್ಯ ಒದಗಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಭರವಸೆ ನೀಡಿದ ನಂತರ ಭಾರತದ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದೆ.  

ಆದರೂ ಅಸ್ಸಾಂ ರಾಜಧಾನಿ ಗುವಾಹಟಿಗೆ ಖುದ್ದು ತೆರಳಿಯೇ ವಿಚಾರಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರನ್ನು ತಾನು ತಡೆಯುವುದಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿದೆ.

ಹಿಂಸಾಚಾರದ ಸಂತ್ರಸ್ತರು ವಿಚಾರಣೆಗಾಗಿ ಅಸ್ಸಾಂಗೆ ಪ್ರಯಾಣಿಸುವಂತಾಗಬಾರದು ಎಂದು ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವೇಸ್‌ ಮತ್ತು ವಕೀಲ ವೃಂದಾ ಗ್ರೋವರ್ ಅವರು ಎತ್ತಿದ ಆತಂಕಗಳನ್ನು ನ್ಯಾಯಾಲಯ ಪರಿಗಣಿಸಿತು.

ವಿಚಾರಣೆ ನಡೆಸಲು ಅಸ್ಸಾಂ ರಾಜ್ಯವನ್ನೇ ಏಕೆ ಆಯ್ಕೆ ಮಾಡಲಾಗಿದೆ ಎಂಬ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಅವರ ಪ್ರಶ್ನೆಗೆ ಉತ್ತರಿಸಿದ ಸಾಲಿಸಿಟರ್ ಜನರಲ್ ತುಷಾರ್‌ ಮೆಹ್ತಾ ಅವರು ಅಸ್ಸಾಂನಲ್ಲಿ ಅಂತರ್ಜಾಲ ಸಂಪರ್ಕವು ತುಲನಾತ್ಮಕವಾಗಿ ಉತ್ತಮ ರೀತಿಯಲ್ಲಿದೆ ಎಂದು ಹೇಳಿದರು.

ಈ ಮಧ್ಯೆ ಮಣಿಪುರದ ಒಟ್ಟಾರೆ ವಾತಾವರಣ ಮತ್ತು ನ್ಯಾಯಯುತ ವಿಚಾರಣೆ ನಡೆಸುವ ಅಗತ್ಯತೆಗಳನ್ನು ಗಮನಿಸಿ ವಿವಿಧ ನಿರ್ದೇಶನಗಳನ್ನು ಪೀಠ ನೀಡಿತು.