Manish Sisodia, Rouse Avenue Court  
ಸುದ್ದಿಗಳು

ವಿಚಾರಣೆ ವಿಳಂಬಕ್ಕೆ ಮನೀಶ್ ಸಿಸೋಡಿಯಾ, ಇತರ ಆರೋಪಿಗಳ ಯತ್ನ: ದೆಹಲಿ ನ್ಯಾಯಾಲಯ

ಸಿಸೋಡಿಯಾ ಮತ್ತಿತರರು ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ಪ್ರಕರಣ ಆಮೆ ಗತಿಯಲ್ಲೇನೂ ಸಾಗುತ್ತಿಲ್ಲ ಎಂದು ನ್ಯಾಯಾಧೀಶೆ ಕಾವೇರಿ ಬವೇಜಾ ಹೇಳಿದ್ದಾರೆ.

Bar & Bench

ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರ  ಆರೋಪಿಗಳು ದೆಹಲಿ ಅಬಕಾರಿ ನೀತಿ ಪ್ರಕರಣದ ವಿಚಾರಣೆ ವಿಳಂಬಗೊಳಿಸಲು ಸಂಘಟಿತ ಯತ್ನ ನಡೆಸುತ್ತಿದ್ದಾರೆ ಎಂದು ದೆಹಲಿ ನ್ಯಾಯಾಲಯ ಮಂಗಳವಾರ ಅಸಮಾಧಾನ ವ್ಯಕ್ತಪಡಿಸಿದೆ.

ಅನೇಕ ಅರ್ಜಿಗಳನ್ನು ಸಲ್ಲಿಸಿರುವ ಸಿಸೋಡಿಯಾ ಹಾಗೂ ಉಳಿದ ಆರೋಪಿಗಳು, ಮಂಡಿಸುತ್ತಿರುವ ಕೆಲ ಮೌಖಿಕ ವಾದಗಳು ಕ್ಷುಲ್ಲಕವಾಗಿವೆ ಎಂದು ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ ಸಂಕೀರ್ಣದಲ್ಲಿರುವ ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ತಿಳಿಸಿದ್ದಾರೆ.

ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಜಾಮೀನು ನಿರಾಕರಿಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಗಮನಾರ್ಹ ಸಂಗತಿ ಎಂದರೆ, 2023ರ ಅಕ್ಟೋಬರ್‌ನಲ್ಲಿ ಸಿಸೋಡಿಯಾ ಅವರ ಜಾಮೀನು ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್, ವಿಚಾರಣೆ ಸುದೀರ್ಘವಾಗಿದ್ದರೆ ಮತ್ತು ಮುಂದಿನ ಮೂರು ತಿಂಗಳಲ್ಲಿಯೂ ಆಮೆಗತಿಯಲ್ಲಿ ಮುಂದುವರಿದರೆ ವಿಚಾರಣಾ ನ್ಯಾಯಾಲಯಕ್ಕೆ ಹೊಸ ಜಾಮೀನು ಅರ್ಜಿ ಸಲ್ಲಿಸಬಹುದು ಎಂದು ಹೇಳಿತ್ತು.

ಸಿಸೋಡಿಯಾ ಮತ್ತಿತರರು ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸುತ್ತಿದ್ದರೂ ಪ್ರಕರಣ ಆಮೆ ಗತಿಯಲ್ಲೇನೂ ಸಾಗುತ್ತಿಲ್ಲ ಎಂದು ನ್ಯಾಯಾಧೀಶೆ ಕಾವೇರಿ ತಿಳಿಸಿದ್ದಾರೆ.

ಇಂದು ವಿವರವಾದ ಆದೇಶ ಪ್ರತಿ ಲಭ್ಯವಾಗಿದ್ದು ಅದರಲ್ಲಿ ತನ್ನ ಪತ್ನಿಯ ಆರೋಗ್ಯದ ಕಾರಣದಿಂದ ಜಾಮೀನಿನ ಮೇಲೆ ಬಿಡುಗಡೆ ಮಾಡಬೇಕು ಎಂಬ ಸಿಸೋಡಿಯಾ ಅವರ ವಾದವನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿದೆ.