Manish Sisodia, Supreme Court 
ಸುದ್ದಿಗಳು

ಸಿಸೋಡಿಯಾ ಪ್ರಕರಣ: ಲಂಚದ ಸಾಕ್ಷ್ಯ ಇಲ್ಲದೆ ಅಪರಾಧ ನಿಲ್ಲದು, ಒತ್ತಡ ಗುಂಪುಗಳ ಆಗ್ರಹವೊಂದೇ ಸಾಲದು ಎಂದ ಸುಪ್ರೀಂ

ಅಬಕಾರಿ ನೀತಿ ಬದಲಾವಣೆಗೆ ಒತ್ತಡ ಹೇರುವ ಗುಂಪುಗಳು ಆಗ್ರಹಿಸಿವೆ ಎಂದ ಮಾತ್ರಕ್ಕೆ ಲಂಚದ ಸಾಕ್ಷ್ಯ ಇಲ್ಲದೆ ಭ್ರಷ್ಟಾಚಾರ ಅಥವಾ ಅಪರಾಧ ನಡೆದಿದೆ ಎನ್ನಲಾಗದು ಎಂದು ನ್ಯಾಯಾಲಯ ನುಡಿದಿದೆ.

Bar & Bench

ದೆಹಲಿ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಮನೀಶ್ ಸಿಸೋಡಿಯಾ ಅವರನ್ನು ಸಿಲುಕಿಸಬಹುದಾದ ಲಂಚದ ಯಾವುದೇ ಸಾಕ್ಷ್ಯಗಳಿವೆಯೇ ಎಂದು ಸುಪ್ರೀಂ ಕೋರ್ಟ್ ಗುರುವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯಗಳನ್ನು (ಇ ಡಿ) ಕೇಳಿದೆ.

ಅಬಕಾರಿ ನೀತಿ ಬದಲಾವಣೆಗೆ ಒತ್ತಡ ಹೇರುವ ಗುಂಪುಗಳು ಆಗ್ರಹಿಸಿದ್ದ ಮಾತ್ರಕ್ಕೆ ಲಂಚದ ಸಾಕ್ಷ್ಯ ಇಲ್ಲದೆ ಭ್ರಷ್ಟಾಚಾರ ಅಥವಾ ಅಪರಾಧ ನಡೆದಿದೆ ಎನ್ನಲಾಗದು ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್‌ ವಿಎನ್ ಭಟ್ಟಿ ಅವರಿದ್ದ ಪೀಠ ನುಡಿದಿದೆ.

“ನೀತಿ ಬದಲಾವಣೆಯಾಗಿದೆ ಎನ್ನುವುದು ನಮಗೆ ತಿಳಿದಿದೆ, ಪ್ರತಿಯೊಬ್ಬರೂ ಅವರಿಗೆ ಅನುಕೂಲಕರವಾದ ಬದಲಾವಣೆ  ಬಯಸುತ್ತಾರೆ. ಅದು ಎಲ್ಲೆಡೆ ಇರುತ್ತದೆ. ವಿಶೇಷ ಗುಂಪುಗಳು ತಾರತಮ್ಯರೂಪಿಯಾಗಿವೆ ಎಂದು ನಾವು ಹೇಳುವುದಾದರೆ... ಹಣದ  ಅಂಶ ಇಲ್ಲದೆ ಅದು ಅಪರಾಧವಾಗುವುದಿಲ್ಲ ... ನಾವು ಆ ಮಟ್ಟಕ್ಕೆ ಹೋದರೆ, ನೀತಿ ನಿರ್ಧಾರ ತೆಗೆದುಕೊಳ್ಳುವಾಗ ಯಾವುದೇ ಒತ್ತಡದ ಗುಂಪುಗಳು ಮಾತ್ರವಲ್ಲ ಪಟ್ಟಭದ್ರ ಹಿತಾಸಕ್ತಿಗಳೂ ಇರುವುದಿಲ್ಲ... (ನೀತಿ ನಿರೂಪಣೆಯಲ್ಲಿ) ಕೆಲವು ಒತ್ತಡ ಮತ್ತು ಸಂಘರ್ಷ ಯಾವಾಗಲೂ ಇರುತ್ತದೆ. ಖಂಡಿತವಾಗಿಯೂ ಲಂಚ ಸ್ವೀಕರಿಸಬಾರದು,’’ ಎಂದು ಪೀಠ ಮೌಖಿಕವಾಗಿ ತಿಳಿಸಿತು.

ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ಬಂಧನದಲ್ಲಿರುವ ಎಎಪಿ ನಾಯಕ ಮತ್ತು ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿತು.