ದೆಹಲಿ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದ ಕ್ರಿಮಿನಲ್ ಪಿತೂರಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ದೆಹಲಿ ನ್ಯಾಯಾಲಯ ಶುಕ್ರವಾರ ಹೇಳಿದೆ [ಮನೀಶ್ ಸಿಸೋಡಿಯಾ ಮತ್ತು ಸಿಬಿಐ ನಡುವಣ ಪ್ರಕರಣ].
ಸಿಬಿಐ ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾಗೆ ಜಾಮೀನು ನಿರಾಕರಿಸಿದ ವಿಶೇಷ ಸಿಬಿಐ ನ್ಯಾಯಾಧೀಶ ಎಂ ಕೆ ನಾಗ್‌ಪಾಲ್, “ಪ್ರಾಸಿಕ್ಯೂಷನ್ ಆರೋಪಗಳು ಮತ್ತು ಸಾಕ್ಷ್ಯಗಳ ಪ್ರಕಾರ ಸಿಸೋಡಿಯಾ ಕ್ರಿಮಿನಲ್ ಪಿತೂರಿಯ ರೂವಾರಿ” ಎಂದಿದ್ದಾರೆ.
ಪೀಠದ ಪ್ರಮುಖ ಅವಲೋಕನಗಳು
ಸಹ ಆರೋಪಿ ವಿಜಯ್ ನಾಯರ್ ಅವರ ಮೂಲಕ ಅರ್ಜಿದಾರ ಸಿಸೋಡಿಯಾ ದಕ್ಷಿಣದವರ ಲಾಬಿಯ ನೇತೃತ್ವ ವಹಿಸಿದ್ದವರ ಸಂಪರ್ಕದಲ್ಲಿದ್ದರು. ಅವರಿಗೆ ಅನುಕೂಲಕರವಾದ ರೀತಿಯಲ್ಲಿ ನೀತಿ ರೂಪಿಸುವುದನ್ನು ಪ್ರತಿ ಹಂತದಲ್ಲಿ ಖಾತ್ರಿಪಡಿಸಿಕೊಳ್ಳಲು ಪ್ರಯತ್ನಿಸಲಾಯಿತು. ಅಲ್ಲದೆ, ಕೆಲ ಮದ್ಯದ ಬ್ರಾಂಡ್‌ಗಳ ಮಾರಾಟದಲ್ಲಿ ಏಕಸ್ವಾಮ್ಯ ಸಾಧಿಸಲು ಪೂರಕವಾಗಿ (ಅಬಕಾರಿ) ಕೂಟ ರಚನೆಗೆ ಅನುಮತಿಸಲಾಗಿದೆ ಎಂದು ಇಲ್ಲಿಯವರೆಗೆ ಸಂಗ್ರಹಿಸಲಾದ ಪುರಾವೆಗಳು ಸ್ಪಷ್ಟವಾಗಿ ಹೇಳುತ್ತಿವೆ.
ಸಿಸೋಡಿಯಾ ಅವರು ಜಾಮೀನಿನ ಮೇಲೆ ಬಿಡುಗಡೆಗೊಂಡರೆ ಪ್ರಕರಣದ ಕೆಲ ಪ್ರಮುಖ ಸಾಕ್ಷಿಗಳ ನಾಶ, ಸಾಕ್ಷ್ಯಗಳ ತಿರುಚುವಿಕೆ ಅಥವಾ ಕೆಲ ಪ್ರಮುಖ ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಗಂಭೀರ ಆತಂಕ ಇದೆ.
ಪ್ರಕರಣದಲ್ಲಿ ಈಗಾಗಲೇ ಜಾಮೀನು ಪಡೆದವರೊಂದಿಗೆ ಸಿಸೋಡಿಯಾ ಅವರ ಪಾತ್ರವನ್ನು ಹೋಲಿಸಲು ಸಾಧ್ಯವಿಲ್ಲ.
ಸಿಬಿಐ ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯವು ಕ್ರಿಮಿನಲ್ ಪಿತೂರಿಯಲ್ಲಿ ಸಿಸೋಡಿಯಾ ಅವರ ಸಕ್ರಿಯ ಭಾಗವಹಿಸುವಿಕೆಯನ್ನು ತೋರಿಸುವುದಷ್ಟೇ ಅಲ್ಲದೆ ಭ್ರಷ್ಟಾಚಾರ ಕಾಯಿದೆಯಲ್ಲಿ ಉಲ್ಲೇಖಿಸಿರುವ ಕೆಲ ಪ್ರಮುಖ ಕೃತ್ಯಗಳನ್ನು ಮೇಲ್ನೋಟಕ್ಕೆ ಎಸಗಿರುವುದನ್ನು ಹೇಳುತ್ತದೆ.
ಸಿಸೋಡಿಯಾ ಅವರ ವಿರುದ್ಧ ಮಾಡಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪ್ರಕರಣದ ಈ ಹಂತದಲ್ಲಿ, ಅವರು ಜಾಮೀನಿನ ಮೇಲೆ ಬಿಡುಗಡೆಯಾಗಲು ಅರ್ಹರಲ್ಲ. ತನಿಖೆಯಲ್ಲಿ ಅವರ ಪಾತ್ರ ಏನೆಂಬುದನ್ನು ಇನ್ನಷ್ಟೇ ನಿರ್ಧರಿಸಬೇಕಿದೆ.
ದೆಹಲಿಯಲ್ಲಿ ಮದ್ಯದ ವ್ಯಾಪಾರದ ಏಕಸ್ವಾಮ್ಯಕ್ಕೆ ಅನುಕೂಲವಾಗುವಂತೆ ದೆಹಲಿ ಅಬಕಾರಿ ನೀತಿಯನ್ನು ದುರ್ಬಳಕೆ ಮಾಡಿ ಜಾರಿಗೆ ತರಲಾಗಿದೆ ಎಂಬ ಆರೋಪ ಸಿಸೋಡಿಯಾ ಮತ್ತು ಎಎಪಿಯ ಇತರೆ ಸದಸ್ಯರ ವಿರುದ್ಧ ಕೇಳಿ ಬಂದಿತ್ತು. ದಕ್ಷಿಣ ಭಾರತದಿಂದ ಮದ್ಯದ ವ್ಯವಹಾರ ನಡೆಸುತ್ತಿರುವ ವ್ಯಕ್ತಿಗಳು ಸುಮಾರು ₹90- ₹100 ಕೋಟಿ ಮುಂಗಡ ಕಿಕ್‌ಬ್ಯಾಕ್ ಪಾವತಿಸಿದ್ದಕ್ಕೆ ಪ್ರತಿಯಾಗಿ ಈ ನೀತಿ ಜಾರಿಗೊಳಿಸಲಾಗಿದೆ ಎಂದು ಆರೋಪಿಸಲಾಗಿತ್ತು.