ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿರುವ ಆಪ್ ಮುಖಂಡ ಮತ್ತು ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಮಧ್ಯಂತರ ಜಾಮೀನು ಕೋರಿ ದೆಹಲಿ ನ್ಯಾಯಾಲಯದ ಕದತಟ್ಟಿದ್ದಾರೆ.
ಕೇಂದ್ರೀಯ ತನಿಖಾ ದಳ ಮತ್ತು ಜಾರಿ ನಿರ್ದೇಶನಾಲಯ ದಾಖಲಿಸಿರುವ ಪ್ರಕರಣಗಳಲ್ಲಿ ಸಿಸೋಡಿಯಾ ಅವರು ಮಧ್ಯಂತರ ಜಾಮೀನು ಕೋರಿದ್ದಾರೆ. ಏಪ್ರಿಲ್ 20ರಂದು ವಿಶೇಷ ನ್ಯಾಯಾಧೀಶೆ ಕಾವೇರಿ ಬವೇಜಾ ಅವರು ಅರ್ಜಿ ವಿಚಾರಣೆ ನಡೆಸಲಿದ್ದಾರೆ.
ಸಿಸೋಡಿಯಾ ಸೇರಿದಂತೆ ಹಲವು ಗಣ್ಯರು ಅಬಕಾರಿ ನೀತಿ ಪ್ರಕರಣದಲ್ಲಿ ಜೈಲು ಪಾಲಾಗಿದ್ದಾರೆ. ಕಳೆದ ವರ್ಷದ ಫೆಬ್ರವರಿಯಿಂದ ಸಿಸೋಡಿಯಾ ಜೈಲಿನಲ್ಲಿದ್ದಾರೆ. 2022ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸುವುದರೊಂದಿಗೆ ಪ್ರಕರಣ ಮುನ್ನೆಲೆಗೆ ಬಂದಿತ್ತು. ಆಪ್ ನಾಯಕರು ಮದ್ಯ ತಯಾರಕರಿಂದ ಅವರ ಪರವಾಗಿ ನೀತಿ ರೂಪಿಸಲು ಲಂಚ ಪಡೆದಿದ್ದಾರೆ ಎಂಬುದು ಆರೋಪವಾಗಿದೆ.
2023ರ ಫೆಬ್ರವರಿ 26ರಂದು ಸಿಬಿಐ ಸಿಸೋಡಿಯಾರನ್ನು ಬಂಧಿಸಿದ್ದು, 2023ರ ಮಾರ್ಚ್ 9ರಂದು ಜಾರಿ ನಿರ್ದೇಶನಾಲಯ ಅವರನ್ನು ವಶಕ್ಕೆ ಪಡೆದಿತ್ತು. ಎರಡೂ ಪ್ರಕರಣಗಳಲ್ಲಿ ವಿಚಾರಣಾಧೀನ ನ್ಯಾಯಾಲಯ, ದೆಹಲಿ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿ ತಿರಸ್ಕರಿಸಿವೆ. ಸರ್ವೋಚ್ಚ ನ್ಯಾಯಾಲಯವು ಮರುಪರಿಶೀಲನಾ ಅರ್ಜಿ ಮತ್ತು ಕ್ಯುರೇಟಿವ್ ಅರ್ಜಿಗಳನ್ನು ತಿರಸ್ಕರಿಸಿತ್ತು.