ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ನಾಯಕ ಮನೀಶ್ ಸಿಸೋಡಿಯಾ ಅವರು ಪ್ರತಿ ಸೋಮವಾರ ಮತ್ತು ಗುರುವಾರದಂದು ತನಿಖಾಧಿಕಾರಿಯ ಮುಂದೆ ಹಾಜರಾಗುವಂತೆ ಸೂಚಿಸುವ ಜಾಮೀನು ಷರತ್ತನ್ನು ಸಡಿಲಿಸಲು ಕೋರಿ ಸಲ್ಲಿಸಿರುವ ಮನವಿಯ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಜಾರಿ ನಿರ್ದೇಶನಾಲಯಕ್ಕೆ (ಇ ಡಿ) ನೋಟಿಸ್ ಜಾರಿ ಮಾಡಿದೆ [ಮನೀಶ್ ಸಿಸೋಡಿಯಾ ವಿರುದ್ಧ ಜಾರಿ ನಿರ್ದೇಶನಾಲಯ].
ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರನ್ನೊಳಗೊಂಡ ಪೀಠವು ಪ್ರಕರಣವನ್ನು ಮುಂದೂಡದೆ ಮುಂದಿನ ವಿಚಾರಣೆಯಲ್ಲೇ ನಿರ್ಧರಿಸುವುದಾಗಿ ಭರವಸೆ ನೀಡಿದೆ. "ನೋಟೀಸ್ ನೀಡಿ. ಎರಡು ವಾರಗಳಲ್ಲಿ ಪ್ರತಿಕ್ರಿಯಿಸಿ" ಎಂದು ವಿಚಾರಣೆ ವೇಳೆ ಕೋರ್ಟ್ ಹೇಳಿತು.
ಇದಕ್ಕೂ ಮುನ್ನ ಸಿಸೋಡಿಯಾ ಪರವಾಗಿ ಹಿರಿಯ ವಕೀಲ ಎಎಂ ಸಿಂಘ್ವಿ ಅವರು, "ಅವರು ಗೌರವಾನ್ವಿತ ವ್ಯಕ್ತಿ. ಅವರು ಈಗಾಗಲೇ 60 ಬಾರಿ ಹಾಜರಾಗಿದ್ದಾರೆ. ಬೇರೆ ಯಾವುದೇ ಆರೋಪಿಗಳಿಗೆ ಅಂತಹ ಷರತ್ತು ಇಲ್ಲ" ಎಂದು ಹೇಳಿದರು.
ಇದೇ ವೇಳೆ ವಿಚಾರಣೆಯನ್ನು ಮುಂದೂಡುವುದರಿಂದ ತಮ್ಮ ಕಕ್ಷೀದಾರರಿಗೆ ತೊಂದರೆಯಾಗಲಿದೆ ಎನ್ನುವುದನ್ನು ಪೀಠದ ಗಮನಕ್ಕೆ ತಂದ ಅವರು, ಮುಂದಿನ ವಿಚಾರಣೆ ವೇಳೆ ಪ್ರತಿಪಕ್ಷಕಾರರು ಮುಂದೂಡುವಂತೆ ಕೋರುವ ಸಾಧ್ಯತೆ ಇದ್ದು, ಹಾಗಾಗಿ ವಿಚಾರಣೆಗೆ ಹತ್ತಿರದ ದಿನಾಂಕ ನೀಡುವಂತೆ ಕೋರಿದರು.
ಈ ವೇಳೆ, ಮುಂದಿನ ವಿಚಾರಣೆಯಲ್ಲೇ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಪೀಠ ಖಚಿತವಾಗಿ ನುಡಿಯಿತು. "ಮುಂದಿನ ದಿನಾಂಕದಂದು ಅರ್ಜಿಯನ್ನು ನಿರ್ಧರಿಸುತ್ತೇವೆ ಎಂದು ನಾವು ಸ್ಪಷ್ಟಪಡಿಸುತ್ತೇವೆ" ಎಂದು ಪೀಠ ಹೇಳಿತು.
ಪ್ರಸಕ್ತ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಹಾಗೂ ಇ ಡಿ ದಾಖಲಿಸಿರುವ ಪ್ರಕರಣಗಳಲ್ಲಿ ಮನೀಶ್ ಸಿಸೋಡಿಯಾ ಅವರಿಗೆ ಇದೇ ವರ್ಷ ಆಗಸ್ಟ್‌ನಲ್ಲಿ ಜಾಮೀನು ದೊರೆತಿತ್ತು. ಫೆಬ್ರವರಿ 26, 2023 ರಿಂದ ಈ ವರ್ಷದ ಆಗಸ್ಟ್‌ವರೆಗೆ ಅವರು ಬಂಧನದಲ್ಲಿದ್ದರು.
ಈ ಕೆಳಗಿನ ಷರತ್ತುಗಳಿಗೆ ಒಳಪಟ್ಟು ಸಿಸೋಡಿಯಾ ಅವರಿಗೆ ಜಾಮೀನು ನೀಡಲಾಗಿತ್ತು:
- ಇಬ್ಬರ ಭದ್ರತೆಯೊಂದಿಗೆ ₹10,00,000 ಮೊತ್ತದ ಜಾಮೀನು ಬಾಂಡ್‌ಗಳನ್ನು ಒದಗಿಸಬೇಕು;
- ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒತ್ತೆ ಇರಿಸಬೇಕು;
- ಪ್ರತಿ ಸೋಮವಾರ ಮತ್ತು ಗುರುವಾರ ಬೆಳಗ್ಗೆ 10-11 ಗಂಟೆ ಅವಧಿಯಲ್ಲಿ ತನಿಖಾಧಿಕಾರಿಗೆ ಹಾಜರಿ ಒದಗಿಸಬೇಕು.
ಸಿಸೋಡಿಯಾ ಅವರು ಪ್ರಸ್ತುತ ಈ ಕೊನೆಯ ಷರತ್ತಿನ ಸಡಿಲಿಕೆ ಕೋರಿದ್ದಾರೆ.