ಮಗುವಿಗೆ ತನ್ನ ತಂದೆ ಯಾರೆಂದು ತಿಳಿದುಕೊಳ್ಳುವ ಹಕ್ಕಿಗಿಂತಲೂ ವ್ಯಕ್ತಿಯ ಖಾಸಗಿತನದ ಹಕ್ಕು ಮಿಗಿಲಾದುದಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಈಚೆಗೆ ತೀರ್ಪು ನೀಡಿದೆ.
ತನ್ನ ತಂದೆ ಎಂದು ತಾನು ಪ್ರತಿಪಾದಿಸುತ್ತಿರುವ ವ್ಯಕ್ತಿಯ ಡಿಎನ್‌ಎಯನ್ನು ತನ್ನ ಡಿಎನ್‌ಎ ಜೊತೆ ತುಲನೆ ಮಾಡುವಂತೆ ಮಗುವೊಂದು ಸಲ್ಲಿಸಿದ್ದ ಮನವಿಯನ್ನು ವಿಚಾರಣಾ ನ್ಯಾಯಾಲಯ ಪುರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಅರ್ಚನಾ ಪುರಿ ತೀರ್ಪು ನೀಡಿದರು.
ತನ್ನ ತಂದೆ ಯಾರು ಎಂಬ ಮಾಹಿತಿಯನ್ನು ನಿರ್ಲಕ್ಷಿಸದೆ ಇರುವುದು ಆ ಮಗವಿಗೆ ನೀಡುವ ನ್ಯಾಯವಾಗಿದೆ. ಅದನ್ನು ನಿರ್ಲಕ್ಷಿಸಬಾರದು.
"ಈ ಮಗು/ಅರ್ಜಿದಾರನಿಗೆ ಸತ್ಯ ಎಂಬುದು ನಿರ್ಲಕ್ಷಿಸಲು ಸಾಧ್ಯವಿಲ್ಲದ ಅಂಶವಾಗಿದೆ. ಸತ್ಯವನ್ನು ನಿರೂಪಿಸಲು ಸಾಧ್ಯವಿರುವಾಗ, ನಿಸ್ಸಂಶಯವಾಗಿ ಆ ಸತ್ಯವು ಗೊತ್ತಾಗಬೇಕು ಎಂಬದು ಆ ಮಗುವಿನ ಒತ್ತಾಯವಾಗಿದೆ. ಇದೇ ವೇಳೆ, ತಂದೆ ಎಂದು ಹಣೆಪಟ್ಟಿ ಹಚ್ಚಲಾದ ವ್ಯಕ್ತಿಯ ಗೌಪ್ಯತೆಯ ಹಕ್ಕನ್ನು ಕೂಡ ಗಣನೆಗೆ ತೆಗೆದುಕೊಳ್ಳಬೇಕಿದೆ. ಆದಾಗ್ಯೂ, ಮಗುವಿಗೆ ತನ್ನ ತಂದೆ ಯಾರೆಂದು ತಿಳಿದುಕೊಳ್ಳುವ ಹಕ್ಕನ್ನು ವ್ಯಕ್ತಿಯ ಖಾಸಗಿತನದ ಹಕ್ಕು ಅತಿಕ್ರಮಿಸುವಂತಿಲ್ಲ ಎಂದು ನ್ಯಾಯಾಲಯ ವಿವರಿಸಿದೆ" ಅಂತೆಯೇ ವ್ಯಕ್ತಿ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾಗೊಳಿಸಿತು.
ಆದರೆ ಡಿಎನ್‌ಎ ಮಾದರಿ ತೆಗೆದುಕೊಳ್ಳುವಾಗ ತಂದೆ ಎಂದು ಆರೋಪಿತನಾದ ವ್ಯಕ್ತಿ ಪ್ರತಿರೋಧ ಒಡ್ಡಿದರೆ ಪೊಲೀಸ್ ಬಲ ಬಳಸುವಂತೆ ವಿಚಾರಣಾ ನ್ಯಾಯಾಲಯ ನೀಡಿದ್ದ ನಿರ್ದೇಶನ ಅನಗತ್ಯ ಎಂದು ಹೈಕೋರ್ಟ್ ಹೇಳಿದೆ. ಪ್ರಕರಣದ ಬಗ್ಗೆ ಆ ವ್ಯಕ್ತಿಯ ನಿರ್ಧಾರಕ್ಕೆ ಅನುಗುಣವಾಗಿ ವಿಚಾರಣಾ ನ್ಯಾಯಾಲಯ ತನ್ನ ತೀರ್ಪು ದಾಖಲಿಸಬೇಕು ಎಂದು ಅದು ಹೇಳಿದೆ.
ಮನೆಯಲ್ಲಿ ಬಾಡಿಗೆಯಲ್ಲಿದ್ದ ತನ್ನ ತಾಯಿಯೊಂದಿಗೆ ಬಾಡಿಗೆದಾರ 1988ರಲ್ಲಿ ದೈಹಿಕ ಸಂಪರ್ಕ ಬೆಳೆಸಿದ ಫಲವಾಗಿ ತಾನು1990ರಲ್ಲಿ ಜನಿಸಿದೆ ಎಂಬುದು ಅಪ್ರಾಪ್ತ ವಯಸ್ಕನ ದೂರಾಗಿತ್ತು. ಆದರೆ ಮಗು ತನ್ನದಲ್ಲ ಬದಲಿಗೆ ಮೊದಲ ಪತಿಯದ್ದು ಎಂದು ಪ್ರಸ್ತುತ ಅರ್ಜಿ ಸಲ್ಲಿಸಿದ್ದ ವ್ಯಕ್ತಿ ವಾದಿಸಿದ್ದರು. 1994ರಲ್ಲಿ ತಾಯಿ ವಿಚ್ಛೇದನ ಪಡೆದಿದ್ದರು. 2015ರಲ್ಲಿ ಡಿಎನ್ಎ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿಚಾರಣಾ ನ್ಯಾಯಾಲಯ ಅನುಮತಿಸಿತ್ತು.
ನಂತರ ಆ ವ್ಯಕ್ತಿ (ಅರ್ಜಿದಾರ) ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಮಗು ತನ್ನ ತಾಯಿಯ ವಿವಾಹದ ಸಮಯದಲ್ಲಿ ಜನಿಸಿರುವುದರಿಂದ, ಭಾರತೀಯ ಸಾಕ್ಷ್ಯ ಕಾಯಿದೆಯ ಸೆಕ್ಷನ್ 112 ಅನ್ವಯವಾಗುತ್ತದೆ ಎಂದು ವಾದಿಸಿದರು.
ವಿವಾಹಿತರು ಪರಸ್ಪರ ಸಂಬಂಧ ಹೊಂದಿಲ್ಲ ಎಂದು ಸಾಬೀತಾಗದೆ ಇದ್ದಾಗ ತಾಯಿ ಮತ್ತು ವ್ಯಕ್ತಿ (ಪತಿ) ನಡುವಿನ ವಿವಾಹದ ಸಮಯದಲ್ಲಿ ಜನಿಸಿದ್ದ ಮಗು ಆ ವ್ಯಕ್ತಿಯ ಕಾನೂನುಬದ್ಧ ಮಗು ಎಂದು ಸೆಕ್ಷನ್ ಒತ್ತಿಹೇಳುತ್ತದೆ.
ಜಾರಿಣಿಯ ಪುತ್ರ ಎಂದು ಕರೆಸಿಕೊಳ್ಳದಂತೆ ಮಗುವಿನ ಹಿತಾಸಕ್ತಿ ಕಾಪಾಡುವ ಸಲುವಾಗಿ ಈ ಕಲ್ಪನೆ ಇದ್ದರೂ ಪ್ರಸ್ತುತ ಪ್ರಕರಣ ಇದಕ್ಕಿಂತ ಭಿನ್ನವಾಗಿರುವುದರಿಂದ ಸೆಕ್ಷನ್ 112 ಇಲ್ಲಿ ಅನ್ವಯಿಸುವುದಿಲ್ಲ ಎಂದು ಅದು ಹೇಳಿದೆ.
ಡಿಎನ್‌ಎ ಪರೀಕ್ಷೆಗಳಿಗೆ ಆದೇಶಿಸುವುದು ವಾಡಿಕೆಯಾಗಬಾರದು ಎಂಬ ವಿವಿಧ ತೀರ್ಪುಗಳ ಕುರಿತಂತೆ ಮಾತನಾಡಿದ ನ್ಯಾಯಾಲಯ ಆ ತೀರ್ಪುಗಳು ಚಾಲ್ತಿಯಲ್ಲಿರುವ ವಿವಾಹದ ಸಂಗಾತಿಯು ಮಗುವಿನ ಪಿತೃತ್ವವನ್ನು ನಿರಾಕರಿಸುವ ಸಂದರ್ಭಗಳಿಗೆ ಸಂಬಂಧಿಸಿವೆ ಎಂದಿದೆ.
ಈ ಪ್ರಕರಣದಲ್ಲಿ ಮಗು ತಾನೇ ಮುಂದೆ ಬಂದು ಅರ್ಜಿದಾರನೇ ತನ್ನ ತಂದೆ ಎಂದು ಹೇಳುತ್ತಿರುವುದನ್ನು ಗಮನಿಸಿದ ನ್ಯಾಯಾಲಯ ಮಗುವಿನ ತಾಯಿ ಕೂಡ ಅದನ್ನೇ ಹೇಳುತ್ತಿದ್ದಾರೆ ಎಂದಿತು.
ಇದು ಸಮಾಜದಲ್ಲಿ ತನ್ನ ಮತ್ತು ತನ್ನ ತಾಯಿಯ ಸ್ಥಾನವನ್ನು ಡಿಎನ್‌ಎ ಪರೀಕ್ಷೆ ಕಡಿಮೆ ಮಾಡಬಹುದು ಎಂದು ಮಗನಿಗೆ ತಿಳಿದಿದ್ದರೂ ಆತ ಪರೀಕ್ಷೆಗೆ ಮುಂದಾಗುವಂತೆ ಹೇಳಿದ್ದಾನೆ. ಇದು ಪರಿಗಣಿಸಬೇಕಾದ ಅಂಶ ಎಂದು ಅದು ಹೇಳಿದೆ.