ಸುದ್ದಿಗಳು

ಶೌಚ ಗುಂಡಿಗಳ ಸ್ವಚ್ಛತೆಯನ್ನು ಪೌರಕಾರ್ಮಿಕರಿಂದ ಮಾಡಿಸುವುದಾದರೆ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳಿ: ಹೈಕೋರ್ಟ್

Bar & Bench

ಒಂದೊಮ್ಮೆ ಶೌಚಗುಂಡಿಗಳನ್ನು ದೈಹಿಕವಾಗಿಯೇ ಪೌರಕಾರ್ಮಿಕರು ಸ್ವಚ್ಛಗೊಳಿಸುವ ಪರಿಸ್ಥಿತಿ ಉದ್ಭವಿಸಿದರೆ ಆಗ ಅದನ್ನು ಕಟ್ಟುನಿಟ್ಟಾಗಿ ಕಾನೂನು ಹಾಗೂ ನಿಯಮಾವಳಿಗಳ ರೀತ್ಯಾ ಕೈಗೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ರಾಜ್ಯದಲ್ಲಿ ಮಲದ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವ ಪರಿಪಾಠಕ್ಕೆ ಕೊನೆ ಹಾಡುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾ. ಸತೀಶ್ ಚಂದ್ರ ಶರ್ಮ ಹಾಗೂ ನ್ಯಾ. ಸಚಿನ್‌ ಶಂಕರ್ ಮಗದುಮ್‌ ಅವರಿದ್ದ ವಿಭಾಗೀಯ ಪೀಠವು ಸೋಮವಾರ ನಡೆಸಿತು. ಈ ವೇಳೆ ಪೀಠವು, ಶೌಚ ಗುಂಡಿಗಳು ಹಾಗೂ ಚರಂಡಿಗಳನ್ನು ಸ್ವಚ್ಛಗೊಳಿಸುವ ಕುರಿತಾದ ಪ್ರಕ್ರಿಯೆಯ ಬಗ್ಗೆ ಮಲದ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಿರುವ ಹಾಗೂ ಪೌರಕಾರ್ಮಿಕರಿಗೆ ಪುನರ್ವಸತಿ ಕಲ್ಪಿಸುವ ಕುರಿತಾದ 2013ರ ಕಾಯಿದೆಯಡಿ ಸ್ಪಷ್ಟವಾಗಿ ತಿಳಿಸಲಾಗಿದೆ ಎಂದು ಹೇಳಿತು.

ಆದರೆ, ಈ ಕುರಿತ ನಿಯಮಗಳನ್ನು ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಪದೇ ಪದೇ ಉಲ್ಲಂಘಿಸಿರುವುದಕ್ಕೆ ಬೇಸರ ವ್ಯಕ್ತಪಡಿಸಿತು. “ಸೂಕ್ತ ಕಾನೂನು ಇದ್ದರೂ ಸಹ ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಅಥವಾ ಅದರಿಂದ ನಿಯುಕ್ತರಾದ ಗುತ್ತಿಗೆದಾರರು ಅದರ ನಿಯಮಾವಳಿಗಳನ್ನು ಉಲ್ಲಂಘಿಸುತ್ತಿರುವುದು ದುರದೃಷ್ಟಕರ” ಎಂದಿತು.

ವಿಚಾರಣೆಯ ವೇಳೆ ನ್ಯಾಯಾಲಯವು 2013ರ ಕಾನೂನಿನಡಿ ಮಲದಗುಂಡಿ ಸ್ವಚ್ಛಗೊಳಿಸುವ ಪೌರಕಾರ್ಮಿಕರ ಪುನರ್ವಸತಿಗೆ ಕಾಯಿದೆಯು ಅವಕಾಶ ಮಾಡಿದೆ. ಆದರೆ, ಈವರೆಗೆ ಪೌರಕಾರ್ಮಿಕರ ಸಮೀಕ್ಷೆಯನ್ನು ಪೂರ್ಣಗೊಳಿಸಿಲ್ಲ ಎನ್ನುವುದನ್ನು ಗಮನಿಸಿತು. ಸಮೀಕ್ಷೆಯನ್ನು ಈವರೆಗೆ ಪೂರೈಸದೆ ಇರಲು ಕಾರಣಗಳೇನು ಎನ್ನುವ ಬಗ್ಗೆ ವಿವರವಾದ ವರದಿ ಸಲ್ಲಿಸುವಂತೆ ಇದೇ ವೇಳೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ಸೂಚಿಸಿತು.

ಈ ವೇಳೆ ರಾಜ್ಯ ಸರ್ಕಾರದ ಪರ ವಕೀಲರು ಕಲಬುರ್ಗಿಯಲ್ಲಿ ಶೌಚ ಗುಂಡಿ ಸ್ವಚ್ಛಗೊಳಿಸುವ ವೇಳೆ ಮೃತಪಟ್ಟ ಇಬ್ಬರು ಪೌರಕಾರ್ಮಿಕರು ಹಾಗೂ ರಾಮನಗರದಲ್ಲಿ ಇದೇ ಕೆಲಸದ ವೇಳೆ ಮೃತಪಟ್ಟ ಮೂವರು ಪೌರಕಾರ್ಮಿಕರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ ಪರಿಹಾರ ವಿತರಿಸಿರುವುದಾಗಿ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. ರಾಮನಗರದ ಪ್ರಕರಣದಲ್ಲಿ ಎಫ್‌ಐಆರ್‌ ದಾಖಲಿಸಲಾಗಿದ್ದ ತನಿಖೆ ನಡೆಯುತ್ತಿರುವುದಾಗಿಯೂ ತಿಳಿಸಲಾಯಿತು.

“ಒಂದೊಮ್ಮೆ ಶೌಚ ಗುಂಡಿಗಳನ್ನು ದೈಹಿಕವಾಗಿ ಸ್ವಚ್ಛಗೊಳಿಸುವ ಪರಿಸ್ಥಿತಿ ಉದ್ಭವಿಸಿದರೆ ಅಗ ಕಾಯಿದೆಯಡಿಯ ಮೂರನೇ ನಿಯಮದಲ್ಲಿ ತಿಳಿಸಲಾಗಿರುವಂತೆ ಸೂಕ್ತ ಪ್ರಕ್ರಿಯೆಯನ್ನು ಅನುಸರಿಸಬೇಕು. ಮೇಲಿನ ಘಟನೆಗಳಲ್ಲಿ ಜೀವ ತೆತ್ತ ಪೌರಕಾರ್ಮಿಕರು ಅನಿಲ ಮುಖಗವಸುಗಳನ್ನಾಗಲಿ, ಇತರೆ ಪರಿಕರಗಳನ್ನಾಗಲಿ ಶೌಚ ಸ್ವಚ್ಛಗೊಳಿಸುವ ವೇಳೆ ಹೊಂದಿರಲಿಲ್ಲ ಎನ್ನುವುದು ತಿಳಿದು ಬರುತ್ತದೆ. ಹಾಗಾಗಿ, ಇನ್ನು ಮುಂದೆ ದೈಹಿಕವಾಗಿ ಶೌಚಗುಂಡಿಗಳನ್ನು ಸ್ವಚ್ಛಗೊಳಿಸವ ವೇಳೆ ನಿಯಮಾವಳಿಗಳಡಿ ಹೇಳಿರುವ ಅನುಸಾರವೇ ಕೈಗೊಳ್ಳಬೇಕಿರುವ ಬಗ್ಗೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಖಾತರಿಪಡಿಸಿಕೊಳ್ಳಬೇಕು,” ಎಂದು ಸೂಚಿಸಿತು.

ಅಲ್ಲದೆ ನ್ಯಾಯಾಲಯವು ಕಲಬುರ್ಗಿಯಲ್ಲಿ ಜನವರಿಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ನಿಯಮಾವಳಿಗಳಡಿ ಸೂಚಿಸಿರುವ ರೀತಿ ಸೂಕ್ತ ಪುನರ್ವಸತಿಯನ್ನು ಕಲ್ಪಿಸುವಲ್ಲಿ, ವಸತಿ ನಿವೇಶನ, ಆರ್ಥಿಕ ಸವಲತ್ತು ಕಲ್ಪಿಸುವಲ್ಲಿ ವಿಫಲವಾಗಿರುವ ಬಗ್ಗೆ ಸರ್ಕಾರವು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರಿಸಿತು. “ಹತ್ತು ಲಕ್ಷ ರೂ ಪರಿಹಾರ ಹಾಗೂ ದಿನಗೂಲಿ ಆಧಾರದಲ್ಲಿ ಅನುಕಂಪದ ಕೆಲಸ ನೀಡುವುದರ ಆಚೆಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ,” ಎಂದು ಪೀಠವು ದಾಖಲಿಸಿತು.

ಶೌಚ ಗುಂಡಿಗಳ ಸ್ಚಚ್ಛತೆ ಕಾನೂನಿನ ನಿಯಮಾವಳಿಗಡಿ ನಡೆದುಕೊಳ್ಳುವುದನ್ನು ಖಾತರಿಪಡಿಸಿಕೊಳ್ಳುವಂತೆ ಅಧಿಕಾರಿಗಳು, ಸ್ಥಳೀಯ ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸುವುದು ಜಿಲ್ಲಾ ದಂಡಾಧಿಕಾರಿಯವ ಕರ್ತವ್ಯವಾಗಿದೆ ಎಂದು ಹೇಳಿದ ಪೀಠವು ಒಂದೊಮ್ಮೆ ಇದಕ್ಕೆ ಅನುಗುಣವಾಗಿ ನಡೆದುಕೊಳ್ಳದೆ ಹೋದರೆ ನ್ಯಾಯಾಂಗ ನಿಂದನೆಯನ್ನು ಜಿಲ್ಲಾ ದಂಡಾಧಿಕಾರಿಗಳು ಎದುರಿಸಬೇಕಾಗುತ್ತದೆ ಎಂದು ಎಂದು ಎಚ್ಚರಿಸಿತು.

ಪ್ರಕರಣದ ಮುಂದಿನ ವಿಚಾರಣೆಯು ಅಕ್ಟೋಬರ್‌ 3ರಂದು ನಡೆಯಲಿದೆ.