ವಾಣಿಜ್ಯ ನ್ಯಾಯಾಲಯಗಳ ಕಾಯಿದೆ ಅಡಿ ಭಾರತದ ವಾಣಿಜ್ಯ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದ್ದು, ತಜ್ಞ ನ್ಯಾಯಮೂರ್ತಿಗಳ ಕೊರತೆ ಮತ್ತು ವ್ಯಾಪ್ತಿಯೇತರ ಪ್ರಕರಣಗಳ ವಿಚಾರಣೆ ನಡೆಸುವ ಒತ್ತಡದಿಂದ ಬಳಲುತ್ತಿದೆ ಎಂದು ನ್ಯಾ. ಕೋಟೀಶ್ವರ್ ಸಿಂಗ್ ಹೇಳಿದ್ದಾರೆ.
ಬಹುತೇಕ ನ್ಯಾಯಮೂರ್ತಿಗಳು 'ಸಾಮಾನ್ಯ ವಿಷಯಗಳ ನಿಪುಣರಾಗಿದ್ದು', ವಾಣಿಜ್ಯ ಕಾನೂನು ವಿಭಾಗದಲ್ಲಿ ತಜ್ಞರಾಗಿಲ್ಲ. ಹೀಗಾಗಿ, ವಾಣಿಜ್ಯ ಪ್ರಕರಣಗಳನ್ನು ನಡೆಸಲು ಅವರು ಸಜ್ಜುಗೊಂಡಿಲ್ಲ. ಈ ಕಾರಣದಿಂದ, ವಾಣಿಜ್ಯ ವಿವಾದಗಳ ಕುರಿತು ನ್ಯಾಯಮೂರ್ತಿಗಳಿಗೆ ತರಬೇತಿ ನೀಡಬೇಕಿದೆ ಎಂದು ಅಭಿಪ್ರಾಯಪಟ್ಟರು.
ಭಾರತೀಯ ಮಧ್ಯಸ್ಥಿಕೆ ವಕೀಲರ ಸಂಘದ ಮಹಿಳಾ ವಿಭಾಗದ ವತಿಯಿಂದ ʼಪಿಎಸ್‌ಯು ಗೊಂದಲ: ಭಾರತದ ವಾಣಿಜ್ಯ ವಿವಾದ ಕ್ಷೇತ್ರದ ಮರು ನಿರ್ಮಾಣʼ ವಿಷಯದ ಕುರಿತು ಹಿರಿಯ ವಕೀಲೆ ಮಾಧವಿ ದಿವಾನ್ ಮತ್ತು ಪಾಯಲ್ ಚಾವ್ಲಾ ಅವರ ಜೊತೆ ಚರ್ಚೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಚರ್ಚೆಯ ವೇಳೆ ನ್ಯಾ. ಕೋಟೀಶ್ವರ್ ಸಿಂಗ್ ಅವರು, "ವಾಣಿಜ್ಯ ವಿವಾದಗಳಲ್ಲಿ ನ್ಯಾಯಮೂರ್ತಿಗಳಿಗೆ ತರಬೇತಿ ನೀಡುವುದು ಈಗ ಅತಿಮುಖ್ಯವಾಗಿದೆ. ವಾಣಿಜ್ಯ ನ್ಯಾಯಾಲಯಗಳಿಗೆ ನೇಮಿಸುವ ನ್ಯಾಯಮೂರ್ತಿಗಳನ್ನು ಗುರುತಿಸಿ ಅವರಿಗೆ ತರಬೇತಿ ನೀಡಬೇಕು. ಭಾರತದ ನ್ಯಾಯಾಂಗ ಎದುರಿಸುತ್ತಿರುವ ಸವಾಲುಗಳಲ್ಲಿ ಮಧ್ಯಸ್ಥಿಕೆ ಕ್ಷೇತ್ರವೂ ಒಂದು. ಮಧ್ಯಸ್ಥಿಕೆ ಮತ್ತು ಲೋಕ ಅದಾಲತ್‌ಗಳ ಮೂಲಕ ನಾವು ಪ್ರಕರಣಗಳ ಬಾಕಿಯನ್ನು ಕಡಿತಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಇದು ಸರಿಯಾದ ಪರಿಹಾರವಲ್ಲ. ಇದರ ಜೊತೆಗೆ ಉತ್ತಮ ಸೌಕರ್ಯ ಕಲ್ಪಿಸಬೇಕು. ಕೇಂದ್ರ ಬಜೆಟ್‌ನಲ್ಲಿ ನ್ಯಾಯಾಂಗಕ್ಕೆ ಮೀಸಲಿಟ್ಟಿರುವ ಅನುದಾನ ಏನೇನೂ ಅಲ್ಲ” ಎಂದ ಹೇಳಿದ್ದಾರೆ.
ಮಧ್ಯಸ್ಥಿಕೆಯಲ್ಲಿ ನಂಬಿಕೆ ಸೃಷ್ಟಿಸಲು ಹಾಗೂ ಮಧ್ಯಸ್ಥಿಕೆದಾರರ ಹೊಣೆಗಾರಿಕೆ ಹೆಚ್ಚಿಸಲು ಮಧ್ಯಸ್ಥಿಕೆ ಆದೇಶಗಳನ್ನು ಸಾರ್ವಜನಿಕಗೊಳಿಸಬೇಕು. ಮಧ್ಯಸ್ಥಿಕೆದಾರರನ್ನು ಸಂಸ್ಥೆಯೊಂದು ನೇಮಕ ಮಾಡಬೇಕು. ಈ ಮೂಲಕ ಪಕ್ಷಪಾತಿತನ ದೂರ ಮಾಡಬೇಕು ಎಂದು ನ್ಯಾ. ಸಿಂಗ್ ಹೇಳಿದ್ದಾರೆ.