ವಿವಿಧ ರಾಜ್ಯ ಸರ್ಕಾರಿ ಉದ್ಯೋಗಗಳಿಗೆ 2019 ರಲ್ಲಿ ಅರ್ಜಿ ಸಲ್ಲಿಸಿದ್ದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗದ ಅಭ್ಯರ್ಥಿಗಳನ್ನು ಆರ್ಥಿಕವಾಗಿ ದುರ್ಬಲ (ಇಡಬ್ಲ್ಯೂಎಸ್) ವರ್ಗಕ್ಕೆ ಪರಿಗಣಿಸಬಹುದು ಎಂದು ಬಾಂಬೆ ಹೈಕೋರ್ಟ್ ಶುಕ್ರವಾರ ತೀರ್ಪು ನೀಡಿದೆ [ಅಕ್ಷಯ್ ಚೌಧರಿ ಮತ್ತು ಮಹಾರಾಷ್ಟ್ರ ಸರ್ಕಾರ ಇನ್ನಿತರರು ಹಾಗೂ ಸಂಬಂಧಿತ ಪ್ರಕರಣಗಳು].
ಎಸ್ಇಬಿಸಿ ಅಭ್ಯರ್ಥಿಗಳಿಗೆ ಇಡಬ್ಲ್ಯೂಎಸ್ ವಿಭಾಗದ ಅಡಿಯಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವ ರಾಜ್ಯ ಸರ್ಕಾರದ ನಿಲುವನ್ನು ನಿರಾಕರಿಸಿ ಮಹಾರಾಷ್ಟ್ರ ಆಡಳಿತ ನ್ಯಾಯಮಂಡಳಿ (ಎಂಎಟಿ) ಫೆಬ್ರವರಿ 2023ರಲ್ಲಿ ನೀಡಿದ್ದ ಆದೇಶವನ್ನು ನ್ಯಾಯಮೂರ್ತಿಗಳಾದ ನಿತಿನ್ ಜಾಮ್ದಾರ್ ಮತ್ತು ಮಂಜುಷಾ ದೇಶಪಾಂಡೆ ಅವರಿದ್ದ ವಿಭಾಗೀಯ ಪೀಠ ರದ್ದುಗೊಳಿಸಿತು.
"ಈ ಆದೇಶ ಸ್ಥಾಪಿತ ಕಾನೂನು ತತ್ವಗಳಿಂದ ವಿಮುಖವಾಗಿದ್ದು ಇದು ಹಲವು ಸ್ತರದ ಪರಿಣಾಮಗಳಿಗೆ ಕಾರಣವಾಗುತ್ತದೆ . ಜೊತೆಗೆ ಗಣನೀಯ ಸಂಖ್ಯೆಯ ಅಭ್ಯರ್ಥಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ" ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ರಾಜ್ಯದ ತೆರಿಗೆ, ಅರಣ್ಯ ಹಾಗೂ ಎಂಜಿನಿಯರಿಂಗ್ ಸೇವಾ ಇಲಾಖೆಗಳಲ್ಲಿನ ಹುದ್ದೆಗಳಿಗೆ ಸಂಬಂಧಿಸಿದಂತೆ ಎಂಎಟಿ ನೀಡಿದ್ದ ಆದೇಶ ಪ್ರಶ್ನಿಸಿ ನೂರಕ್ಕೂ ಹೆಚ್ಚು ಮರಾಠಾ ಅಭ್ಯರ್ಥಿಗಳು ಹಾಗೂ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಈ ತೀರ್ಪು ನೀಡಲಾಗಿದೆ.
ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸಿದ್ದ ಮತ್ತು ರಾಜ್ಯದ ಒಟ್ಟು ಮೀಸಲಾತಿ ಶೇಕಡಾ 50ಕ್ಕಿಂತ ಮೀರಬಾರದು ಎಂದು 1992ರ ಇಂದ್ರಾ ಸಾಹ್ನಿ (ಮಂಡಲ್) ತೀರ್ಪಿನಲ್ಲಿ ನ್ಯಾಯಾಲಯ ನಿಗದಿಪಡಿಸಿದ್ದ ಮಾನದಂಡವನ್ನು ಮೀರಿದ್ದ ಮಹಾರಾಷ್ಟ್ರ ರಾಜ್ಯ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಮೀಸಲಾತಿ (ಎಸ್ಇಬಿಸಿ) ಕಾಯಿದೆ- 2018ರ (ಎಸ್ಇಬಿಸಿ ಕಾಯಿದೆ) ನಿಯಮಾವಳಿಗಳನ್ನು ಸುಪ್ರೀಂ ಕೋರ್ಟ್ 2021ರ ಮೇ ತಿಂಗಳಲ್ಲಿ ರದ್ದುಗೊಳಿಸಿತ್ತು.
ಮರಾಠಾ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ನಂತರ, ರಾಜ್ಯ ಸರ್ಕಾರ ಎಸ್ಇಬಿಸಿ ವರ್ಗದ ಅಭ್ಯರ್ಥಿಗಳಿಗೆ ಇಡಬ್ಲ್ಯೂಎಸ್ ಮೀಸಲಾತಿ ಸೌಲಭ್ಯ ಒದಗಿಸಿತ್ತು.
ಪ್ರಸ್ತುತ ನಡೆಯುತ್ತಿರುವ ನೇಮಕಾತಿ ಪ್ರಕ್ರಿಯೆಯಲ್ಲಿ ಇಡಬ್ಲ್ಯೂಎಸ್ ವರ್ಗದ ಅಡಿಯಲ್ಲಿ ಸಾರ್ವಜನಿಕ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಎಸ್ಇಬಿಸಿ ವರ್ಗದ ಅಭ್ಯರ್ಥಿಗಳಿಗೆ ಅವಕಾಶ ನೀಡುವ ನಿರ್ಣಯಗಳನ್ನು ಮಹಾರಾಷ್ಟ್ರ ಸರ್ಕಾರ ಅಂಗೀಕರಿಸಿದೆ.
ಸರ್ಕಾರದ ನಿರ್ಣಯಗಳನ್ನು ಈಗಾಗಲೇ ಇಡಬ್ಲ್ಯೂಎಸ್ ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ಎಂಎಟಿ ಮುಂದೆ ಪ್ರಶ್ನಿಸಿದ್ದರು.
ಎಂಎಟಿ ಈ ಸವಾಲನ್ನು ಎತ್ತಿಹಿಡಿದು ಎಸ್ಇಬಿಸಿ (ಮರಾಠಾ) ವರ್ಗದ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಗಳನ್ನು ಅನರ್ಹಗೊಳಿಸಿತ್ತು. ಇದರಿಂದ ಅಸಮಾಧಾನಗೊಂಡ ಅನರ್ಹ ಅಭ್ಯರ್ಥಿಗಳು ಹೈಕೋರ್ಟ್ ಮೊರೆ ಹೋಗಿದ್ದರು.
[ತೀರ್ಪಿನ ಪ್ರತಿಯನ್ನು ಇಲ್ಲಿ ಓದಿ]