ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸಿದರೆ ಅತ್ಯಾಚಾರ ಯತ್ನ ಆರೋಪಕ್ಕೂ ಪತಿ ಗುರಿಯಾಗಬೇಕಾಗುತ್ತದೆ ಎಂದು ಹಿರಿಯ ವಕೀಲೆ ಮತ್ತು ಅಮಿಕಸ್ ಕ್ಯೂರಿ ರೆಬಾಕಾ ಜಾನ್ ಅವರು ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದರು.
ಸಮ್ಮತಿ ರಹಿತವಾಗಿ ಪತ್ನಿಯ ಜೊತೆ ಲೈಂಗಿಕ ಸಂಬಂಧ ಹೊಂದಿದ್ದರೂ ಪತಿಗೆ ವಿನಾಯಿತಿ ಕಲ್ಪಿಸುವ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 375ರ ವಿನಾಯಿತಿ 2 ಅನ್ನು ಪ್ರಶ್ನಿಸಿರುವ, ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವುದಕ್ಕೆ ಆಗ್ರಹಿಸಿರುವ ಮನವಿಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ರಾಜೀವ್ ಶೆಖ್ದೇರ್ ಮತ್ತು ಸಿ ಹರಿ ಶಂಕರ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ಐಪಿಸಿಯ ಸೆಕ್ಷನ್ 375ರಲ್ಲಿ ವಿನಾಯಿತಿ 2 ಅನ್ನು ರದ್ದುಪಡಿಸಿದರೆ ಐಪಿಸಿಯ 376ಬಿ ಮತ್ತು ಸಿಆರ್‌ಪಿಸಿ ಸೆಕ್ಷನ್ 198ಬಿ ಸಹ ರದ್ದಾಗಬೇಕಾಗುತ್ತದೆ ಎಂದು ರೆಬಾಕಾ ಜಾನ್ ವಾದಿಸಿದರು.
ಪ್ರತ್ಯೇಕವಾಗಿದ್ದಾಗ ಪತ್ನಿಯ ಜೊತೆ ಲೈಂಗಿಕ ಸಂಭೋಗ ನಡೆಸಿದರೆ ಐಪಿಸಿ ಸೆಕ್ಷನ್ 376ಬಿ ಅಡಿ ಶಿಕ್ಷೆ ವಿಧಿಸಲಾಗುತ್ತದೆ. ಸಿಆರ್‌ಪಿಸಿ ಸೆಕ್ಷನ್ 198ಬಿ ಪ್ರಕ್ರಿಯಾತ್ಮಾಕ ನಿಬಂಧನೆಯಾಗಿದ್ದು, ಮೇಲ್ನೋಟಕ್ಕೆ ನೈಜ ಸಂಗತಿಗಳು ತೃಪ್ತಿತರದಿದ್ದರೆ ಯಾವುದೇ ನ್ಯಾಯಾಲಯವು ಸೆಕ್ಷನ್ 376ಬಿ ಅಡಿ ಪ್ರಕರಣವನ್ನು ಪರಿಗಣಿಸಬಾರದು ಎಂದು ಹೇಳುತ್ತದೆ.
ಲೈಂಗಿಕ ಸಂಬಂಧದ ಹಕ್ಕು ಪತಿಗೆ ಇರುವುದಿಲ್ಲ. ಆದರೆ, ಅದರ ನಿರೀಕ್ಷೆಯಂತೂ ಖಚಿತವಾಗಿಯೂ ಇರುತ್ತದೆ. ಹಾಗೆಂದು, ನಿರೀಕ್ಷೆಯು ಬಲವಂತದ ಲೈಂಗಿಕ ಸಂಬಂಧವಾಗಿ ಮಾರ್ಪಡಲಾಗದು ಎಂದು ರೆಬೆಕಾ ಜಾನ್ ನ್ಯಾಯಾಲಯಕ್ಕೆ ವಿವರಿಸಿದರು.
"ಇಡೀ ವಾದವು ಪತಿಗೆ ಲೈಂಗಿಕ ಸಂಬಂಧದ ಹಕ್ಕಿದೆ ಎನ್ನುವುದನ್ನು ಆಧರಿಸಿದೆ. ಆದರೆ, ನನ್ನ ಅಭಿಪ್ರಾಯವು ಅಂತಹ ಹಕ್ಕು ಇಲ್ಲ ಎನ್ನುವುದಾಗಿದೆ. ಎರಡೂ ಕಡೆಗಳಿಂದ ನಿರೀಕ್ಷೆ (ಲೈಂಗಿಕತೆಯ) ಇರಬಹುದು. ಆದರೆ, ಆ ನಿರೀಕ್ಷೆಯು ಬಲವಂತದ ಲೈಂಗಿಕ ಸಂಬಂಧಕ್ಕೆ ಕಾರಣವಾಗಕೂಡದು. ತಮ್ಮ ನಿರೀಕ್ಷೆಗಳ ಹಿನ್ನೆಲೆಯಲ್ಲಿ ಅವರು ಚರ್ಚಿಸಬಹುದು. ಒಂದೊಮ್ಮೆ ಪತ್ನಿಯು ಲೈಂಗಿಕ ಸಂಬಂಧದಿಂದ ದೂರಸರಿದರೆ ಅಗ ಅದನ್ನು ಪರಿಹರಿಸಿಕೊಳ್ಳಲು ಇರುವ ಹಾದಿಯೆಂದರೆ ಅದು ಮಾತುಕತೆ. ನಾನು ಇದನ್ನು ಕ್ಷುಲ್ಲಕವಾಗಿಸುತ್ತಿಲ್ಲ. ಪತ್ನಿಯ ನಿರಾಕರಣೆಯ ಹೊರತಾಗಿಯೂ ಪತಿಯು ಬಲವಂತದ ಹಕ್ಕನ್ನು ಬಳಸುವ ವಿಚಾರ ಇಲ್ಲಿದೆ. ಪತಿಯು ಸರಿ ಇರಬಹುದು, ಪತ್ನಿಯ ನಡೆ ಅಸಮಂಜಸವಾಗಿರಬಹುದು. ಆದರೆ, ಹಾಗೆಂದು ಯಾವುದೇ ಹಕ್ಕು ಇಲ್ಲಿ ಇಲ್ಲ. ಇಲ್ಲಿ ನಿರೀಕ್ಷೆ ಇರಬಹುದು, ಅದರೆ ನಿರೀಕ್ಷೆಯು ಪತ್ನಿಯೊಂದಿಗೆ ಬಲವಂತದ ಲೈಂಗಿಕ ಸಂಪರ್ಕ ಹೊಂದಲು ಅನುವು ಮಾಡಕೂಡದು. ಇದುವೇ ನನ್ನ ಪೂರ್ಣ ಉತ್ತರ," ಎಂದು ರೆಬೆಕಾ ನ್ಯಾಯಾಲಯಕ್ಕೆ ಅಮಿಕಸ್ ಆಗಿ ತಮ್ಮ ಸಲಹೆ ನೀಡಿದರು.
ವಿಚಾರಣೆಯ ಪೂರ್ಣ ವಿವರಗಳನ್ನು ಓದಲು ಬಾರ್ ಅಂಡ್ ಬೆಂಚ್ ಆಂಗ್ಲ ತಾಣದ ಲಿಂಕ್ ಗಮನಿಸಿ