Karnataka HC 
ಸುದ್ದಿಗಳು

ವಿಚ್ಛೇದಿತರ ನಡುವೆ ವಿವಾಹ: ರಕ್ಷಣಾ ಇಲಾಖೆ ಅಧಿಕಾರಿ ವಿರುದ್ಧದ ಅತ್ಯಾಚಾರ ಪ್ರಕರಣಕ್ಕೆ ಹೈಕೋರ್ಟ್‌ ತಡೆ

ನಿವೃತ್ತಿಗೆ ಒಂದು ವರ್ಷವಿದೆ. ಇದೆಲ್ಲಾ ಬೇಕಿತ್ತಾ? ನಿವೃತ್ತಿ ಅಂಚಿನಲ್ಲಿದ್ದಾಗ ಮಾಡಿದರೆ ಎಲ್ಲಾ ಹೋಗುತ್ತೆ. 59 ವರ್ಷ & 32 ವರ್ಷ ಒಪ್ಪಿತ! ಬರೆಯೋಕೆ ಬೇಜಾರಾಗುತ್ತೆ ಎಂದು ಮೌಖಿಕವಾಗಿ ಹೇಳಿದ ನ್ಯಾಯಾಲಯ.

Bar & Bench

ಶಾದಿ. ಕಾಂನಲ್ಲಿ ಪರಿಚಯವಾಗಿ ವಿಚ್ಛೇದಿತ ಮಹಿಳೆಯನ್ನು ವರಿಸಿ, ಸಮ್ಮತಿಯ ಲೈಂಗಿಕ ಸಂಬಂಧ ಹೊಂದಿದ್ದರೂ ಅತ್ಯಾಚಾರ ಆರೋಪಕ್ಕೆ ಗುರಿಯಾಗಿದ್ದ ನಿವೃತ್ತಿ ಅಂಚಿನಲ್ಲಿರುವ ರಕ್ಷಣಾ ಇಲಾಖೆಯ ವಿಚ್ಛೇದಿತ ಅಧಿಕಾರಿಯೊಬ್ಬರ ವಿರುದ್ಧದ ಪ್ರಕರಣಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ತಡೆ ನೀಡಿದೆ.

ಮಹಾರಾಷ್ಟ್ರದ ಮುಂಬೈ ನಿವಾಸಿಯಾದ ರಕ್ಷಣಾ ಇಲಾಖೆಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿರುವ ಅಶೋಕ್‌ ಕುಮಾರ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ನಡೆಸಿತು.

ಅರ್ಜಿದಾರರ ಪರ ವಕೀಲ ಎನ್‌ ಶ್ರೀನಿವಾಸ್‌ ಅವರು “ಅರ್ಜಿದಾರ ಮತ್ತು ದೂರುದಾರೆ ವಿಚ್ಛೇದಿತರಾಗಿದ್ದು, ಎರಡನೇ ಮದುವೆಯಾಗಿದ್ದಾರೆ. ಮದುವೆಯಾಗಿ ಎರಡು ದಿನಗಳ ಬಳಿಕ ಅರ್ಜಿದಾರರು ವೃತ್ತಿ ನಿಮಿತ್ತ ಮುಂಬೈಗೆ ಹೊರಟು ಹೋಗಿದ್ದಾರೆ. ಅರ್ಜಿದಾರರು ಮುಂಬೈಗೆ ಹೋಗುವಾಗ ತಾನು ಗರ್ಭಧರಿಸಿದ್ದೆ ಎಂಬುದು ದೂರುದಾರೆಯ ಆರೋಪವಾಗಿದೆ. ಆತ ಕರೆಗೆ ಪ್ರತಿಕ್ರಿಯಿಸುತ್ತಿಲ್ಲ ಎಂಬುದು ಆಕೆಯ ದೂರು. ಗರ್ಭಪಾತ ಮಾಡಿಸಿಕೊಳ್ಳಲು ಎನ್ನುತ್ತಿದ್ದಾರೆ ಎಂಬುದು ಆರೋಪವಾಗಿದೆ. ಮದುವೆಯ ಬಳಿಕ ಅರ್ಜಿದಾರರಿಂದ ಎಲ್ಲಾ ಹಣವನ್ನು ದೂರುದಾರೆ ಕಿತ್ತುಕೊಂಡಿದ್ದಾರೆ” ಎಂದರು.

ಇದಕ್ಕೆ ಪೀಠವು “ಅರ್ಜಿದಾರರಿಗೆ 59 ವರ್ಷವಾಗಿದೆ, ದೂರುದಾರೆಗೆ 32 ವರ್ಷವಾಗಿದೆ. ಮದುವೆಯ ಭರವಸೆ? 59 ವರ್ಷದಲ್ಲಿ ಏನು ಮಾಡ್ತಾ ಇದ್ರೀ? ನಿವೃತ್ತಿಗೆ ಒಂದು ವರ್ಷವಿದೆ. ಇದೆಲ್ಲಾ ಬೇಕಿತ್ತಾ? ನಿವೃತ್ತಿಯ ಅಂಚಿನಲ್ಲಿದ್ದಾಗ ಮಾಡಿದರೆ ನಿವೃತ್ತಿ ಸಂಬಂಧಿತ ಎಲ್ಲ ಅನುಕೂಲಗಳು ಹೋಗುತ್ತವೆ. ನಿವೃತ್ತಿಯ ಲಾಭ ಏನೂ ಇರುವುದಿಲ್ಲ. ನೈಜ ಕುಟುಂಬಕ್ಕೆ ಹಾನಿಯಾಗುತ್ತದೆ. 59 ವರ್ಷ ಮತ್ತು 32 ವರ್ಷ ಒಪ್ಪಿತ, ಬರೆಯೋಕೆ ಬೇಜಾರಾಗುತ್ತದೆ” ಎಂದಿತು.

ಅಂತಿಮವಾಗಿ “ಅರ್ಜಿದಾರರು ಭಾರತ ಸರ್ಕಾರದ ರಕ್ಷಣಾ ಇಲಾಖೆಯಲ್ಲಿ ಮುಖ್ಯ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿರುವ ಅರ್ಜಿದಾರರು ಮತ್ತು ದೂರುದಾರೆಯು ಶಾದಿ.ಕಾಂನಲ್ಲಿ ಪರಿಚಿತರಾಗಿದ್ದರು. ಆನಂತರ ಸ್ನೇಹಿತರಾಗಿ, ಬಳಿಕ ಅದು ಸಂಬಂಧಕ್ಕೆ ತಿರುಗಿದ್ದು, ಆನಂತರ ಅದು ದೈಹಿಕ ಸಂಬಂಧಕ್ಕೂ ವಿಸ್ತರಿಸಿತ್ತು. ತಾನು ಗರ್ಭ ಧರಿಸಿದ ಬಳಿಕ ಅರ್ಜಿದಾರ ಮುಂಬೈಗೆ ಪರಾರಿಯಾಗಿದ್ದಾರೆ ಎಂದು ದೂರುದಾರೆ ದೂರಿದ್ದರಿಂದ ಪ್ರಕರಣ ದಾಖಲಾಗಿದೆ. ಇಬ್ಬರ ನಡುವಿನ ಲೈಂಗಿಕ ಸಂಬಂಧವು ಒಪ್ಪಿತವಾಗಿರುವುದರಿಂದ ಅರ್ಜಿದಾರರ ವಿರುದ್ಧ ಐಪಿಸಿ ಸೆಕ್ಷನ್‌ 376 ಮತ್ತು 506 ಅಡಿ ಪ್ರಕ್ರಿಯೆ ಮುಂದುವರಿಸಲು ಅನುಮತಿಸುವುದು ಧ್ರುವರಾಮ್‌ ಮೊದಲಿಯಾರ್‌ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ತೀರ್ಪಿಗೆ ವಿರುದ್ಧವಾಗಲಿದೆ. ಹೀಗಾಗಿ, ಪ್ರಕರಣಕ್ಕೆ ತಡೆ ನೀಡಲಾಗಿದೆ” ಎಂದು ನ್ಯಾಯಾಲಯ ಆದೇಶಿಸಿದೆ.