ಹೆಣ್ಣುಮಕ್ಕಳು ಅವರು ಮದುವೆಯಾಗಿರಲಿ ಅಥವಾ ಇಲ್ಲದಿರಲಿ ಅವರು ತಮ್ಮ ತವರು ಮನೆಯ ಭಾಗವಾಗಿ ಉಳಿಯುತ್ತಾರೆ ಎಂದು ಆಂಧ್ರಪ್ರದೇಶ ಹೈಕೋರ್ಟ್ ಈಚೆಗೆ ತಿಳಿಸಿದೆ.
ಮಗಳು ಮದುವೆಯಾಗಿರುವುದು ಆಕೆ ತನ್ನ ಪೋಷಕರ ಕುಟುಂಬದ ಸದಸ್ಯಳು ಎಂಬ ಸ್ಥಾನಮಾನವನ್ನು ಕೊನೆಗೊಳಿಸುವುದಿಲ್ಲ ಎಂದು ನ್ಯಾಯಮೂರ್ತಿ ಕೆ ಮನ್ಮಧ ರಾವ್ ಒತ್ತಿ ಹೇಳಿದರು.
“ಪುತ್ರರು ಮತ್ತು ಹೆಣ್ಣು ಮಕ್ಕಳು ಅವಿವಾಹಿತರಾಗಿರಲಿ ಅಥವಾ ವಿವಾಹಿತರಾಗಿರಲಿ, ಅವರು ಜೀವಮಾನವಿಡೀ ಅವರ ಹೆತ್ತವರ ಕುಟುಂಬದ ಭಾಗವಾಗಿದ್ದಾರೆ. ಮಗಳು ಮದುವೆಯಾದ ಮಾತ್ರಕ್ಕೆ, ಅವಳು ತನ್ನ ಹೆತ್ತವರ ಕುಟುಂಬದ ಸದಸ್ಯರಲ್ಲ ಎಂದು ಹೇಳುವುದು ದೌರ್ಜನ್ಯವಾದೀತು. ತನ್ನ ಮದುವೆಯ ಕಾರಣಕ್ಕೆ, ಹೆತ್ತವರ ಕುಟುಂಬದ ಸದಸ್ಯಳಾಗಿರುವ ಮಗಳ ಸ್ಥಾನಮಾನ ಕೊನೆಯಾಗದು" ಎಂದು ನ್ಯಾಯಾಲಯ ಅಕ್ಟೋಬರ್ 18ರ ತೀರ್ಪಿನಲ್ಲಿ ಹೇಳಿದೆ.
ಅನುಕಂಪದ ಆಧಾರದ ನೇಮಕಾತಿ ವೇಳೆ ಗಂಡುಮಕ್ಕಳು ಹಾಗೂ ಮಗಳು ವಿವಾಹವಾಗಿದ್ದಾರೆ ಎಂಬುದನ್ನು ಆಧರಿಸಿ ಹೆಣ್ಣುಮಕ್ಕಳನ್ನು ಸರ್ಕಾರದ 1999ರ ನೀತಿ ತರತಮದಿಂದ ಕಾಣುತ್ತದೆ ಎಂದು ನ್ಯಾಯಾಲಯ ಹೇಳಿದೆ.
ಮಗಳು ಮದುವೆಯಾದ ಮಾತ್ರಕ್ಕೆ, ಅವಳು ತನ್ನ ಹೆತ್ತವರ ಕುಟುಂಬದ ಸದಸ್ಯರಲ್ಲ ಎಂದು ಹೇಳುವುದು ದೌರ್ಜನ್ಯವಾಗುತ್ತದೆ.ಆಂಧ್ರ ಪ್ರದೇಶ ಹೈಕೋರ್ಟ್
2013ರಲ್ಲಿ ಸಾವನ್ನಪ್ಪಿದ್ದ; ದೇವಸ್ಥಾನದಲ್ಲಿ ಸ್ವಚ್ಛತಾ ಸಿಬ್ಬಂದಿ ಆಗಿ ಸೇವೆ ಸಲ್ಲಿಸಿದ್ದ ವ್ಯಕ್ತಿಯ ವಿವಾಹಿತ ಮಗಳಿಗೆ ಅನುಕಂಪದ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳದೇ ಇರುವುದನ್ನು ಪ್ರಶ್ನಿಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿತ್ತು
ರಾಜ್ಯ ಸರ್ಕಾರ 1999ರಲ್ಲಿ ಹೊರಡಿಸಿದ ಆದೇಶದ ಪ್ರಕಾರ, ಮರಣ ಹೊಂದಿದ ಸರ್ಕಾರಿ ನೌಕರನ ವಿವಾಹಿತ ಮಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಬಹುದಾದರೂ ಉದ್ಯೋಗಿಯ ಪತ್ನಿ ಅಥವಾ ಉಳಿದ ಮಕ್ಕಳು ಅದಕ್ಕೆ ಆಕ್ಷೇಪ ವ್ಯಕ್ತಪಡಿಸುವಂತಿಲ್ಲ ಮತ್ತು ಮದುವೆಯಾದ ಮಗಳು ಉದ್ಯೋಗಿಯ ಮೇಲೆ ಅವಲಂಬಿತಳಾಗಿರಬೇಕು ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.
ಆದರೆ, ವಿವಾಹಿತ ಮಗನಿಗೆ ಅನುಕಂಪದ ನೇಮಕಾತಿಗೆ ಅರ್ಹತೆ ಪಡೆಯಲು ಅಂತಹ ಯಾವುದೇ ಷರತ್ತುಗಳಿಲ್ಲ ಎಂದು ನ್ಯಾಯಾಲಯದ ಈ ವಿಧಾನ ತಾರತಮ್ಯದಿಂದ ಕೂಡಿದೆ ಎಂದಿತು. ಈ ವಿಧಾನವನ್ನು ತಾರತಮ್ಯ ಎಂದು ಕೋರ್ಟ್ ಟೀಕಿಸಿದೆ.
ಪ್ರಕರಣದಲ್ಲಿ ಅರ್ಜಿದಾರರಿಗೆ (ವಿವಾಹಿತ ಮಗಳು) ಅನುಕಂಪ ಆಧಾರದ ನೇಮಕಾತಿ ನಿರಾಕರಿಸುವುದು ಕಾನೂನುಬಾಹಿರ ಮತ್ತು ಅನಿಯಂತ್ರಿತವಾಗಿದೆ ಎಂದು ನ್ಯಾಯಾಲಯ ತೀರ್ಮಾನಿಸಿದೆ. ಆದ್ದರಿಂದ, ರಿಟ್ ಅರ್ಜಿಯನ್ನು ಪುರಸ್ಕರಿಸಿದ ಅದು ಅರ್ಜಿದಾರರನ್ನು ಸ್ವಚ್ಛತೆ ಅಥವಾ ಯಾವುದೇ ಸೂಕ್ತ ಹುದ್ದೆಗೆ ತನ್ನ ತಂದೆ ನಿಧನರಾದ ದಿನಾಂಕದಿಂದ ಜಾರಿಗೆ ಬರುವಂತೆ ಎಲ್ಲಾ ಸೇವಾ ಸೌಲಭ್ಯಗಳೊಂದಿಗೆ ನೇಮಿಸುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಆದೇಶಿಸಿತು.
"ಆದರೂ, ಅರ್ಜಿದಾರರಿಗೆ ವಿತ್ತೀಯ ಪ್ರಯೋಜನ ಪಡೆಯಲು ಅರ್ಹತೆ ಇಲ್ಲ, ಏಕೆಂದರೆ ಆಕೆ 'ಕೆಲಸವಿಲ್ಲ - ವೇತನವಿಲ್ಲ' ಎಂಬ ತತ್ವದ ಮೇಲೆ ಹುದ್ದೆಗೆ ನೇಮಕವಾಗಿಲ್ಲ" ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.