pregnant woman
pregnant woman 
ಸುದ್ದಿಗಳು

ಮದುವೆಯಲ್ಲಿ ಬಿರುಕು, ಪತಿ-ಪತ್ನಿ ನಡುವೆ ಹಳಸಿದ ಸಂಬಂಧ ಗರ್ಭಪಾತಕ್ಕೆ ಅನುಮತಿಸಲು ಕಾರಣವಾಗದು: ಛತ್ತೀಸ್‌ಗಢ ಹೈಕೋರ್ಟ್

Bar & Bench

ಮದುವೆಯಲ್ಲಿ ಬಿರುಕು ಅಥವಾ ಪತಿ-ಪತ್ನಿಯ ನಡುವಿನ ಹಳಸಿದ ಸಂಬಂಧದ ಆಧಾರದಲ್ಲಿ ವೈದ್ಯಕೀಯ ಗರ್ಭಪಾತ ಕಾಯಿದೆ ಅಡಿ ಗರ್ಭಪಾತಕ್ಕೆ ಅನುಮತಿಸಲಾಗದು ಎಂದು ಚತ್ತೀಸಗಢ ಹೈಕೋರ್ಟ್ ಈಚೆಗೆ ಹೇಳಿದೆ [ಎಕ್ಸ್‌ವೈಜಡ್‌ ವರ್ಸಸ್‌ ಚತ್ತೀಸಗಢ ರಾಜ್ಯ].

ವೈದ್ಯಕೀಯ ಗರ್ಭಪಾತಕ್ಕೆ ಅನುಮತಿ ಕೋರಿದ್ದ 29 ವರ್ಷದ ಮಹಿಳೆಯ ಮನವಿಯನ್ನು ತಿರಸ್ಕರಿಸಿದ ನ್ಯಾಯಮೂರ್ತಿ ಪಿ ಸಾಮ್‌ ಕೋಶಿ ಅವರ ನೇತೃತ್ವದ ಏಕಸದಸ್ಯ ಪೀಠವು ಭಾರತದಲ್ಲಿ ಗರ್ಭಪಾತವನ್ನು ಅಪರಾಧ ಎಂದು ಪರಿಗಣಿಸಲಾಗಿದೆ ಎಂದಿದೆ.

“ಅರ್ಜಿದಾರರ ಸಂಬಂಧವು ಪತಿಯೊಂದಿಗೆ ಹದಗೆಟ್ಟಿದ್ದರೆ ಅಥವಾ ಕೆಲವು ಕಾರಣಗಳಿಂದ ವೈವಾಹಿಕ ಜೀವನ ಹಳಿತಪ್ಪಿದರೆ, ಕಾಯಿದೆ 1971ರ ಸೆಕ್ಷನ್ 3ರ ಅಡಿಯಲ್ಲಿ ಅದು (ವೈದ್ಯಕೀಯ ಗರ್ಭಪಾತಕ್ಕೆ) ಅನುಮತಿಸಲು ಆಧಾರವಾಗದು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಅರ್ಜಿದಾರ ಮಹಿಳೆ ತನ್ನ ಮೇಲೆ ಎಸಗಿದ ಯಾವುದೇ ಲೈಂಗಿಕ ಅಪರಾಧದ ಕಾರಣದಿಂದ ಅಥವಾ ಅವಳ ಒಪ್ಪಿಗೆ ಮತ್ತು ಅರಿವಿಲ್ಲದೆಯಾಗಲಿ ಗರ್ಭಧರಿಸಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರೆಯು ವಿವಾಹಿತೆಯಾಗಿದ್ದು, ಪತಿಯಲ್ಲದೇ ಬೇರೆಯವರಿಂದ ಗರ್ಭಧರಿಸಿರುವುದಾಗಿ ಆಕೆ ಹೇಳಿಲ್ಲ. ದಂಪತಿಯು ನವೆಂಬರ್‌ 2022ರಲ್ಲಿ ವಿವಾಹವಾಗಿದ್ದು, ಸಂಬಂಧದಲ್ಲಿ ಬಿರುಕು ಉಂಟಾಗಿರುವುದರಿಂದ ಪತ್ನಿಯು ಗರ್ಭಪಾತಕ್ಕೆ ಅನುಮತಿ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದರು.

ಇಂಥ ಕಾರಣಗಳಿಗಾಗಿ ಅರ್ಜಿ ಪುರಿಸ್ಕರಿಸುತ್ತಾ ಹೋದರೆ ವೈದ್ಯಕೀಯ ಗರ್ಭಪಾತ ಕಾಯಿದೆ ಆಶಯಕ್ಕೆ ಸೋಲಾಗುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಭಾರತದಲ್ಲಿ ಗರ್ಭಪಾತ ಅಪರಾಧ ಎಂದು ಪರಿಗಣಿಸಲಾಗಿದೆ. ಗರ್ಭಿಣಿಯು ಗರ್ಭಪಾತ ಮಾಡಿಸಿಕೊಳ್ಳುವುದು ತೀರ ಅಗತ್ಯ ಎಂಬುದನ್ನು ಹೊರತುಪಡಿಸಿ ವೈದ್ಯರು ಗರ್ಭಪಾತ ಮಾಡದಂತೆ ನಿರ್ಬಂಧಿಸಲಾಗಿದೆ. ಅರ್ಹತೆ ಹೊಂದಿರುವ ವೈದ್ಯರು ಗರ್ಭಣಿಯ ತಪಾಸಣೆ ನಡೆಸಿದ ಬಳಿಕ, ಗರ್ಭಿಣಿಯ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಅಪಾಯವಿದೆ ಎಂಬ ಸಂದರ್ಭದಲ್ಲಿ ಮಾತ್ರ ಗರ್ಭಪಾತಕ್ಕೆ ಸಲಹೆ ಮಾಡಬಹುದು” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಇದಲ್ಲದೆ, ಮಗು ಜನಿಸಿದ ಬಳಿಕ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತದೆ ಎಂಬಂತಹ ಸಂದರ್ಭದಲ್ಲಿಯೂ ಗರ್ಭಪಾತಕ್ಕೆ ಅವಕಾಶವಿದೆ ಎಂದಿರುವ ನ್ಯಾಯಾಲಯವು ಅರ್ಜಿ ವಜಾ ಮಾಡಿದೆ.