Justice Siddaiah Rachaiah, Karnataka High Court 
ಸುದ್ದಿಗಳು

ಸಹೋದ್ಯೋಗಿ ಜೊತೆ ವಿವಾಹ: ಮತ್ತೊಂದು ಮದುವೆ ಸಿದ್ಧತೆ ನಡೆಸಿದ್ದ ಕಾನ್‌ಸ್ಟೆಬಲ್‌ಗೆ ನಿರೀಕ್ಷಣಾ ಜಾಮೀನು ನಿರಾಕರಣೆ

ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆಗೆ ಭಗವಂತರಾಯ ಕೋಣೆಯೊಂದರಲ್ಲಿ ಸಾಯಿಬಾಬ ಫೋಟೋ ಮುಂದೆ ಗುಪ್ತವಾಗಿ ತಾಳಿ ಕಟ್ಟಿ ಪತಿಯಂತೆಯೇ ಒಟ್ಟಿಗೇ ಆಕೆಯೊಂದಿಗೆ ವಾಸ ಮಾಡಿದ್ದಾರೆ ಎಂದಿರುವ ಹೈಕೋರ್ಟ್‌.

Bar & Bench

ತಮ್ಮ ಠಾಣೆಯಲ್ಲೇ ಸೇವೆ ಸಲ್ಲಿಸುತ್ತಿದ್ದ ಸಹೋದ್ಯೋಗಿ ಮಹಿಳಾ ಪೊಲೀಸ್‌ ಕಾನ್‌ಸ್ಟೆಬಲ್‌ ಜೊತೆ ಗಾಂಧರ್ವ ಪದ್ಧತಿಯಲ್ಲಿ ವಿವಾಹ ಮಾಡಿಕೊಂಡು ಅದನ್ನು ಬಹಿರಂಗಗೊಳಿಸದೆ ಮತ್ತೊಬ್ಬ ಹುಡುಗಿಯ ಜೊತೆ ನಿಶ್ಚಿತಾರ್ಥ ಪೂರೈಸಿ ಮದುವೆಗೆ ತಯಾರಾಗಿದ್ದ ಪೊಲೀಸ್‌ ಕಾನ್‌ಸ್ಟೆಬಲ್‌ಗೆ ನಿರೀಕ್ಷಣಾ ಜಾಮೀನು ನೀಡಲು ಕರ್ನಾಟಕ ಹೈಕೋರ್ಟ್‌ ಈಚೆಗೆ ನಿರಾಕರಿಸಿದೆ.

ಕುಣಿಗಲ್‌ ತಾಲ್ಲೂಕಿನ ಅಮೃತೂರು ಪೊಲೀಸ್ ಠಾಣೆಯಲ್ಲಿ ಕಾನ್‌ಸ್ಟೆಬಲ್‌ ಆಗಿ ಸೇವೆ ಸಲ್ಲಿಸುತ್ತಿದ್ದ ಭಗವಂತರಾಯ ಬಸಂತರಾಯ ಬಿರಾದಾರ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್ ರಾಚಯ್ಯ ಅವರ ಏಕಸದಸ್ಯ ಪೀಠ ವಜಾಗೊಳಿಸಿದೆ.

“ಪರಿಶಿಷ್ಟ ಜಾತಿಗೆ ಸೇರಿದ ಸಂತ್ರಸ್ತೆಗೆ ಭಗವಂತರಾಯ ಕೋಣೆಯೊಂದರಲ್ಲಿ ಸಾಯಿಬಾಬ ಫೋಟೋ ಮುಂದೆ ಗುಪ್ತವಾಗಿ ತಾಳಿ ಕಟ್ಟಿ ಪತಿಯಂತೆಯೇ ಒಟ್ಟಿಗೇ ಆಕೆಯೊಂದಿಗೆ ವಾಸ ಮಾಡಿದ್ದಾರೆ. ದೈಹಿಕ ಸಂಪರ್ಕ ಏರ್ಪಡಿಸಿಕೊಂಡಿದ್ದಾರೆ. ಆಕೆ ತಾಳಿ ಕಟ್ಟಿಕೊಳ್ಳದಂತೆ ನಿರ್ಬಂಧಿಸಿದ್ದಾರೆ. ಸಾರ್ವಜನಿಕವಾಗಿ ಪತ್ನಿ ಎಂದು ಘೋಷಿಸದೆ ಮತ್ತೊಂದು ಹುಡುಗಿಯೊಂದಿಗೆ ನಿಶ್ಚಿತಾರ್ಥ ಮಾಡಿಕೊಂದು ಮದುವೆಗೆ ಸಿದ್ಧವಾಗಿ ವಂಚನೆ ಎಸಗಿರುವುದು ಕಂಡುಬಂದಿದೆ” ಎಂಬ ಅಭಿಪ್ರಾಯದೊಂದಿಗೆ ಪೀಠ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಪ್ರಕರಣ ಹಿನ್ನೆಲೆ: ಭಗವಂತರಾಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ–2023ರ  ಸೆಕ್ಷನ್‌ 318(2), 352, 115 (2), 351(2), 54, 74 ಮತ್ತು 3(5) ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯಿದೆ–1989ರ ಸೆಕ್ಷನ್‌ 3(1),(ಆರ್‌)(ಎಸ್‌), 3(1),(ಡಬ್ಲ್ಯು)(i) ಮತ್ತು 3(2)(ವಿಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ತಮ್ಮ ವಿರುದ್ಧ ಅಮೃತೂರು ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್‌ ರದ್ದುಗೊಳಿಸುವಂತೆ ಕೋರಿ ಭಗವಂತರಾಯ ತುಮಕೂರು ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಇದನ್ನು ತಿರಸ್ಕರಿಸಲಾಗಿತ್ತು.

Bagvantha Ray Basavantha Ray Biradar Vs State of Karnataka.pdf
Preview