ಸುದ್ದಿಗಳು

[ಅನುಕಂಪದ ನೇಮಕಾತಿ] ವಿವಾಹಿತ ಮಗಳು ಮೃತ ತಾಯಿಯ ಮೇಲೆ 'ಅವಲಂಬಿತೆ' ಎನ್ನಲಾಗದು: ಸುಪ್ರೀಂ ಕೋರ್ಟ್

ವಿವಾಹಿತ ಮಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಿದರೆ, ಅದು ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿಯ ಧ್ಯೇಯೋದ್ದೇಶಕ್ಕೆ ವಿರುದ್ಧವಾಗುತ್ತದೆ ಎಂದ ಪೀಠ.

Bar & Bench

ಅನುಕಂಪದ ನೇಮಕಾತಿಗಾಗಿ ತಾನು ತಾಯಿಯ ಮೇಲೆ ಅವಲಂಬಿತೆ ಎಂಬುದಾಗಿ ವಿವಾಹಿತ ಮಗಳು ಹೇಳುವಂತಿಲ್ಲ. ಹೀಗಾಗಿ ಅಂತಹವರು ಅನುಕಂಪ ಆಧಾರಿತ ನೇಮಕಾತಿಗೆ ಅರ್ಹರಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿದೆ [ಮಹಾರಾಷ್ಟ್ರ ಸರ್ಕಾರ ಮತ್ತಿತರರು ಹಾಗೂ ಶ್ರೀಮತಿ ಮಾಧುರಿ ಮಾರುತಿ ವಿಧಾತೆ ನಡುವಣ ಪ್ರಕರಣ].

ಅನುಕಂಪದ ಆಧಾರದ ಮೇಲೆ ಪ್ರತಿವಾದಿ ಮಾಧುರಿ ಮಾರುತಿ ವಿಧಾತೆ  ಅವರನ್ನು ನೇಮಕ ಮಾಡುವಂತೆ ಮಹಾರಾಷ್ಟ್ರ ಆಡಳಿತಾತ್ಮಕ ನ್ಯಾಯಮಂಡಳಿ ನೀಡಿದ್ದ ಆದೇಶ  ದೃಢಪಡಿಸಿದ್ದ ಬಾಂಬೆ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಮಹಾರಾಷ್ಟ್ರ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಕೃಷ್ಣ ಮುರಾರಿ ಅವರಿದ್ದ ವಿಭಾಗೀಯ ಪೀಠ ಈ ವಿಚಾರ ಸ್ಪಷ್ಟಪಡಿಸಿದೆ.

ಕರ್ನಾಟಕದ ಖಜಾನಾ ನಿರ್ದೇಶಕರು ಇನ್ನಿತರರು ಮತ್ತು ವಿ ಸೌಮ್ಯಶ್ರೀ ನಡುವಣ ಪ್ರಕರಣ (2021)  ಮತ್ತು ಎನ್‌ ಸಿ ಸಂತೋಷ್‌ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ (2020) ಗಳಲ್ಲಿ ತಾನು ನೀಡಿದ್ದ ತೀರ್ಪನ್ನು ಅವಲಂಬಿಸಿ  ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

“…ಮೃತ ಉದ್ಯೋಗಿಯ ಮೇಲೆ ಅರ್ಥಾತ್‌ ತಾಯಿಯ ಮೇಲೆ ಪ್ರತಿವಾದಿಯು 'ಅವಲಂಬಿತಳು' ಎಂದು ಎಂದು ಹೇಳಲಾಗದು; ಒಂದು ವೇಳೆ ಹಾಗಿದ್ದರೂ ಸಹ ಉದ್ಯೋಗಿ ಮರಣವನ್ನಪ್ಪಿ ಹಲವು ವರ್ಷಗಳ ಬಳಿಕ ಪ್ರತಿವಾದಿ ಅನುಕಂಪಾಧಾರಿತ ನೇಮಕಕ್ಕೆ ಅರ್ಹರಾಗುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ. ಹೀಗಾಗಿ ಸರ್ಕಾರ ಸಲ್ಲಿಸಿದ್ದ ಮನವಿಯನ್ನು ಅದು ಪುರಸ್ಕರಿಸಿತು.

ವಿವಾಹಿತ ಮಗಳನ್ನು ಅನುಕಂಪದ ಆಧಾರದ ಮೇಲೆ ನೇಮಿಸಿದರೆ, ಅದು ಅನುಕಂಪದ ಆಧಾರದ ಮೇಲೆ ನಡೆಯುವ ನೇಮಕಾತಿಯ ಧ್ಯೇಯೋದ್ದೇಶಕ್ಕೆ ವಿರುದ್ಧವಾಗುತ್ತದೆ ಎಂದು ಪೀಠ ಹೇಳಿದೆ.

ಹಿನ್ನೆಲೆ

ಮಹಾರಾಷ್ಟ್ರ ಸರ್ಕಾರದಲ್ಲಿ ಗುಮಾಸ್ತ ಹುದ್ದೆಯಲ್ಲಿ ಮಾಧುರಿ ಅವರ ತಂದೆ ಸೇವೆ ಸಲ್ಲಿಸುತ್ತಿದ್ದರು. ಅವರ ಮರಣಾನಂತರ ಮಾಧುರಿ ಅವರ ತಾಯಿಗೆ ಅನುಕಂಪ ಆಧಾರಿತ ನೌಕರಿ ನೀಡಲಾಗಿತ್ತು. ಅವರು ಕೂಡ ಸೇವೆಯಲ್ಲಿದ್ದಾಗಲೇ ಸಾವನ್ನಪ್ಪಿದ್ದರು. ನಂತರ ಮಾಧುರಿ ಅವರ ಅಕ್ಕ ಅನುಕಂಪದ ಆಧಾರದ ಮೇಲೆ ನೇಮಕಾತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅವರು ವಿವಾಹಿತರಾಗಿದ್ದರಿಂದ ಆಕೆಯ ಅರ್ಜಿಯನ್ನು ತಿರಸ್ಕರಿಸಲಾಗಿತ್ತು.

ಮಹಾರಾಷ್ಟ್ರ ಸರ್ಕಾರ ಫೆಬ್ರವರಿ 26, 2013 ರಂದು ಹೊರಡಿಸಿದ್ದ ಸುತ್ತೋಲೆಯೊಂದನ್ನು ಆಧರಿಸಿ ಮೃತ ಉದ್ಯೋಗಿಯ ಕಿರಿಯ ವಿವಾಹಿತ ಮಗಳು ಮಾಧುರಿ ಅರ್ಜಿ ಸಲ್ಲಿಸಿದರು. ಆದರೆ ಕೆಲ ತಿಂಗಳಲ್ಲಿ ಆಕೆ ಸಲ್ಲಿಸಿದ್ದ ಅರ್ಜಿ ತಿರಸ್ಕೃತವಾಯಿತು. ಎರಡು ವರ್ಷಗಳ ಬಳಿಕ ಮಾಧುರಿ ನ್ಯಾಯಮಂಡಳಿ ಮೊರೆ ಹೋದರು. ಅಲ್ಲಿ ಅವರ ನೇಮಕಾತಿಗೆ ಹಸಿರು ನಿಶಾನೆ ದೊರೆಯಿತು. ಇದನ್ನು ರಾಜ್ಯ ಸರ್ಕಾರ ಹೈಕೋರ್ಟ್‌ನಲ್ಲಿ ಪ್ರಶ್ನಿಸಿತ್ತು. ಹೈಕೋರ್ಟ್‌ ನ್ಯಾಯಮಂಡಳಿ ಆದೇಶ ಎತ್ತಿ ಹಿಡಿದಿದ್ದರಿಂದ ಸರ್ಕಾರ ಸುಪ್ರೀಂ ಕೋರ್ಟ್‌ ಕದ ತಟ್ಟುವಂತಾಗಿತ್ತು.