Arvind Kejriwal, Supreme Court and ED 
ಸುದ್ದಿಗಳು

[ಲೋಕಸಭೆ ಚುನಾವಣೆ] ಕೇಜ್ರಿವಾಲ್‌ಗೆ ಮಧ್ಯಂತರ ಜಾಮೀನು ಮಂಜೂರು ಮಾಡಲು ನಾವು ಪರಿಗಣಿಸಬಹುದು: ಸುಪ್ರೀಂ ಕೋರ್ಟ್‌

Bar & Bench

ಲೋಕಸಭಾ ಚುನಾವಣೆ ಚಾಲ್ತಿಯಲ್ಲಿರುವುದರಿಂದ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವ ಸುಳಿವನ್ನು ಶುಕ್ರವಾರ ಸುಪ್ರೀಂ ಕೋರ್ಟ್‌ ನೀಡಿದೆ.

ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಬಂಧಿಸಿರುವುದನ್ನು ಪ್ರಶ್ನಿಸಿ ಕೇಜ್ರಿವಾಲ್‌ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಸಂಜೀವ್‌ ಖನ್ನಾ ಮತ್ತು ದೀಪಂಕರ್‌ ದತ್ತ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

Justice Sanjiv Khanna and Justice Dipankar Datta with Supreme Court

“ಪ್ರಕರಣ ಇತ್ಯರ್ಥಕ್ಕೆ ಹೆಚ್ಚು ಸಮಯ ಬೇಕಾಗಬಹುದು. ಚುನಾವಣೆಯ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಹೆಚ್ಚು ಸಮಯ ಬೇಕಾದರೆ ನಾವು ಮಧ್ಯಂತರ ಜಾಮೀನು ಪ್ರಶ್ನೆ ಪರಿಗಣಿಸಬಹುದು. ಈ ವಿಚಾರದಲ್ಲಿ ಸ್ಪಷ್ಟತೆ ಇರಲಿ… ಉಭಯ ಪಕ್ಷಕಾರರು ಈ ವಿಚಾರವನ್ನು ಪರಿಗಣಿಸಬೇಕು” ಎಂದು ಪೀಠವು ಮೌಖಿಕವಾಗಿ ಹೇಳಿದೆ.

ನ್ಯಾ. ಖನ್ನಾ ಅವರು ವಿಚಾರಣೆ ವೇಳೆ, “ಜಾಮೀನು ವಿಚಾರದಲ್ಲಿ ಸೂಚನೆ ಪಡೆಯಿರಿ. ಹಾಗೆಂದು ನಾವೇನು ಹೇಳುತ್ತಿಲ್ಲ (ಜಾಮೀನು ನೀಡಲಾಗುತ್ತದೆಯೇ, ಇಲ್ಲವೇ ಎಂದು). ಚುನಾವಣೆಯ ಹಿನ್ನೆಲೆಯಲ್ಲಿ ಮಧ್ಯಂತರ ಜಾಮೀನು ಮಂಜೂರು ಮಾಡುವುದನ್ನು ನಾವು ಪರಿಗಣಿಸಲು ಬಯಸುತ್ತೇವೆ. ಡಾ. ಸಿಂಘ್ವಿ (ಕೇಜ್ರಿವಾಲ್‌ ವಕೀಲ) ನಮ್ಮ ಮಾತನ್ನು ಆಲಿಸದೇ ನೀವು ಆರಂಭಿಸಬೇಡಿ- ನಾವು ಜಾಮೀನು ನೀಡಬಹುದು ಅಥವಾ ನೀಡದೇ ಇರಬಹುದು. ನಾವು ನಿಮ್ಮನ್ನು ಆಲಿಸುತ್ತೇವೆ. ನಾವು ನಿಮಗೆ ಮುಕ್ತವಾಗಿರಲಿದ್ದೇವೆ. ಉಭಯ ಪಕ್ಷಕಾರರು ಅಚ್ಚರಿ ಹೊಂದಬಾರದು ಎಂದು ನಾವು ಮೊದಲೇ ಹೇಳುತ್ತಿದ್ದೇವೆ. ಎರಡನೆಯದಾಗಿ… ನೀವು (ಕೇಜ್ರಿವಾಲ್‌) ಹೊಂದಿರುವ ಸ್ಥಾನಮಾನದ ಹಿನ್ನೆಲೆಯಲ್ಲಿ ನೀವು ಯಾವುದಾದರೂ ಕಡತಗಳಿಗೆ ಸಹಿ ಹಾಕಬೇಕಿದೆಯೇ? ನಾವು ಮುಕ್ತವಾಗಿದ್ದೇವೆ. ಹಾಗೆಂದು, ಏನೇನೊ ಕಲ್ಪಿಸಿಕೊಳ್ಳಬೇಡಿ… ಈ ವಿಚಾರದಲ್ಲಿ ಹೆಚ್ಚಾಗಿ ಏನೂ ಅರ್ಥೈಸಬೇಡಿ” ಎಂದರು.

ಅಂತಿಮವಾಗಿ ಪೀಠವು ವಿಚಾರಣೆಯನ್ನು ಮೇ 7ಕ್ಕೆ ಮುಂದೂಡಿತು.