ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಅವರಿಗೆ ಸಂಬಂಧಿಸಿದ ಬಹುತೇಕ ವರದಿಗಳು ಸಂಪೂರ್ಣ ಮಾನಹಾನಿಕರವಾಗಿದ್ದರೂ ಕೂಡ ಮಾಧ್ಯಮಗಳ ಬಾಯಿ ಮುಚ್ಚಿಸಲು ಸಾಧ್ಯವಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಂಗಳವಾರ ಹೇಳಿದೆ [ರುಜಿರಾ ಬ್ಯಾನರ್ಜಿ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಆರೋಗ್ಯಕರ ಪ್ರಜಾಪ್ರಭುತ್ವದಲ್ಲಿ ಹೀಗೆ ಮಾಧ್ಯಮಗಳನ್ನು ನಿರ್ಬಂಧಿಸುವ ಆದೇಶ ಜಾರಿಗೆ ತರುವಂತೆ ನಿರೀಕ್ಷಿಸಬಾರದು ಎಂದು ನ್ಯಾ. ಸಬ್ಯಸಾಚಿ ಭಟ್ಟಾಚಾರ್ಯ ಹೇಳಿದ್ದಾರೆ.
“ನಾವು ಹಾಗೊಮ್ಮೆ ಆದೇಶ ನೀಡಿದರೂ ನೀವದನ್ನು ಹೇಗೆ ಜಾರಿಗೆ ತರುತ್ತೀರಿ? ಅದು ಖಂಡಿತವಾಗಿಯೂ ಪ್ರಜಾಪ್ರಭುತ್ವ ನಿರೀಕ್ಷಿಸಿರದ ಅರ್ಥದಲ್ಲಿ ನಿರ್ಬಂಧಕ ಆದೇಶವಾಗುತ್ತದೆ. ಮಾಧ್ಯಮಗಳಿಗೆ ಖಂಡಿತವಾಗಿಯೂ ಅಭಿವ್ಯಕ್ತಿಯ ಹಕ್ಕಿದ್ದು ಅವು ಜನರಿಗೆ ಮಾಹಿತಿ ನೀಡುತ್ತವೆ. ಮುಕ್ತ ನ್ಯಾಯ ಎಂದರೆ ಜನರಿಗೆ ಲಭ್ಯವಾಗುವ ನ್ಯಾಯ” ಎಂದು ಪೀಠ ನುಡಿಯಿತು.
ಅಂತಹ ಸುದ್ದಿಗಳು ಸಂಪೂರ್ಣ ಮಾನಹಾನಿಕರ ಎಂದು ಕಂಡುಬಂದಲ್ಲಿ ತಪ್ಪುದಾರಿಗೆಳೆಯುವ ವರದಿಗಳ ವಿರುದ್ಧ ಮಾನಹಾನಿಕರ ಮೊಕದ್ದಮೆ ದಾಖಲಿಸಬಹುದು ಎಂದು ಇದೇ ವೇಳೆ ನ್ಯಾಯಮೂರ್ತಿಗಳು ಹೇಳಿದರು.
ಶಾಲಾ ನೇಮಕಾತಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ತಮ್ಮ ವಿರುದ್ಧ ವರದಿ ಮಾಡದಂತೆ ಕೆಲ ಮಾಧ್ಯಮ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಬೇಕು ಎಂದು ಅಭಿಷೇಕ್ ಬ್ಯಾನರ್ಜಿ ಮತ್ತು ಅವರ ಪತ್ನಿ ರುಜಿರಾ ಬ್ಯಾನರ್ಜಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯ ಈ ಅವಲೋಕನ ಮಾಡಿತು. ಬುಧವಾರ ಪೀಠ ಮತ್ತೆ ಪ್ರಕರಣದ ವಿಚಾರಣೆ ನಡೆಸಲಿದೆ.