Bombay High Court

 
ಸುದ್ದಿಗಳು

ಐಪಿಎಲ್‌ ಪ್ರಸಾರ ಹಕ್ಕು ರದ್ದತಿ: ಬಿಸಿಸಿಐ ನಿರ್ಣಯ ಎತ್ತಿ ಹಿಡಿದಿದ್ದ ಮಧ್ಯಸ್ಥಿಕೆ ತೀರ್ಪು ಬದಿಗೆ ಸರಿಸಿದ ಹೈಕೋರ್ಟ್‌

ಭಾರತದ ಉಪಖಂಡದ ಹೊರಗಿನ ಪ್ರದೇಶಗಳಲ್ಲಿ ಐಪಿಎಲ್‌ ಪ್ರಸಾರಕ್ಕಾಗಿ ವರ್ಲ್ಡ್ ಸ್ಪೋರ್ಟ್ ಗ್ರೂಪ್‌ಗೆ ಬಿಸಿಸಿಐ ನೀಡಿದ್ದ ಮಾಧ್ಯಮ ಹಕ್ಕುಗಳ ರದ್ದತಿಯನ್ನು ಎತ್ತಿ ಹಿಡಿದ್ದ ಮಧ್ಯಸ್ಥಿಕೆ ನಿರ್ಣಯವನ್ನು ನ್ಯಾ. ಕೊಲಾಬಾವಲ್ಲ ಪೀಠವು ಬದಿಗೆ ಸರಿಸಿದೆ.

Bar & Bench

ಭಾರತದ ಉಪಖಂಡದ ಹೊರಗಿನ ಪ್ರದೇಶಗಳಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (ಐಪಿಎಲ್) ಪ್ರಸಾರಕ್ಕಾಗಿ ವರ್ಲ್ಡ್ ಸ್ಪೋರ್ಟ್ ಗ್ರೂಪ್‌ಗೆ (ಡಬ್ಲುಎಸ್‌ಜಿಐ) ನೀಡಿದ್ದ ಮಾಧ್ಯಮ ಹಕ್ಕುಗಳನ್ನು ರದ್ದುಪಡಿಸಿದ್ದ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ನಿರ್ಧಾರವನ್ನು ಎತ್ತಿ ಹಿಡಿದಿದ್ದ ಮಧ್ಯಸ್ಥಿಕೆ ಮಂಡಳಿ ನಿರ್ಣಯವನ್ನು ಗುರುವಾರ ಬಾಂಬೆ ಹೈಕೋರ್ಟ್‌ ಬದಿಗೆ ಸರಿಸಿದೆ (ವರ್ಲ್ಡ್‌ ಸ್ಪೋರ್ಟ್‌ ಗ್ರೂಪ್‌ (ಇಂಡಿಯಾ) ಪ್ರೈ. ಲಿ ವರ್ಸಸ್‌ ಬಿಸಿಸಿಐ).

ಮಧ್ಯಸ್ಥಿಕೆ ನಿರ್ಣಯ ಮಾಡುವಾಗ ಮೂಲಭೂತವಾದ ವಿಚಾರವನ್ನು ಪರಿಗಣಿಸಲು ವಿಫಲವಾದರೆ ಅದು ಪ್ರಶ್ನಾರ್ಹ. ಏಕೆಂದರೆ ಅದು ಅಕ್ರಮ ಏಕಸ್ವಾಮ್ಯವಾಗಿದ್ದು, ಇದೊಂದೇ ಕಾರಣದ ಆಧಾರದಲ್ಲಿ ಬದಿಗೆ ಸರಿಸಲು ಅರ್ಹವಾಗಿದೆ ಎಂದು ನ್ಯಾಯಮೂರ್ತಿ ಕೊಲಾಬಾವಲ್ಲಾ ಅವರಿದ್ದ ಏಕಸದಸ್ಯ ಪೀಠ ಹೇಳಿದೆ.

“…ಏಕಕಾಲದಲ್ಲಿ ಅನುಮೋದಿಸಲು ಮತ್ತು ನಿರಾಕರಿಸಲು ಪಕ್ಷಕಾರರಿಗೆ ಅನುಮತಿಸಲಾಗುವುದಿಲ್ಲ ಎಂಬುದು ನ್ಯಾಯಸಮ್ಮತ ಕಾನೂನು. ಪಕ್ಷಕಾರರು ಒಪ್ಪಂದದಲ್ಲಿನ ಯಾವುದೇ ಸಾಧನದ ಲಾಭ ಪಡೆದ ನಂತರ ಅವರು ಆ ದಾಖಲೆಯಲ್ಲಿ ಉಲ್ಲೇಖಿಸಿರುವ ಎಲ್ಲವನ್ನೂ ಒಪ್ಪಿಕೊಳ್ಳಬೇಕು” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಸುಗಮ ಶುಲ್ಕಕ್ಕೆ (ಫೆಸಿಲಿಟೇಶನ್‌ ಫೀ) ಬಿಸಿಸಿಐ ಹೇಗೆ ಅರ್ಹ ಎಂಬುದನ್ನು ವಿವರಿಸಲು ಮಧ್ಯಸ್ಥ ಮಂಡಳಿಯ ಬಹುಮತ ನಿರ್ಣಯಗಳು ವಿಫಲವಾಗಿವೆ. ಅಲ್ಪಮತ ನಿರ್ಣಯವನ್ನು ಪರಿಶೀಲಿಸಿದಾಗ ಅಪಾರ ಪ್ರಮಾಣದ ಪ್ರಮುಖ ಸಾಕ್ಷ್ಯಗಳು ಬಹುಮತ ನಿರ್ಣಯದಲ್ಲಿ ಗೈರಾಗಿರುವುದು ತಮ್ಮ ಅರಿವಿಗೆ ಬಂದಿದೆ ಎಂದು ಪೀಠವು ಹೇಳಿದೆ.

“ಬಹುಮತದ ನಿರ್ಣಯ ಪಾಸು ಮಾಡಿದ ಮಧ್ಯಸ್ಥಿಕೆದಾರರನ್ನು ಅಪಾರವಾಗಿ ಗೌರವಿಸುತ್ತಲೇ ಅದು (ನಿರ್ಣಯ) ಊರ್ಜಿತವಾಗಲು ಅವಕಾಶ ಮಾಡಿಕೊಡಲಾಗದು” ಎಂದು ಪೀಠವು ಹೇಳಿದೆ.

ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳಾದ ಸುಜಾತಾ ಮನೋಹರ್‌ ಮತ್ತು ಮುಕುಂದಕಮ್‌ ಶರ್ಮಾ ಅವರು ಬಹುಮತದ ತೀರ್ಪು ಪ್ರಕಟಿಸಿದ್ದು, 2020ರ ಜುಲೈ 20ರಂದು ಭಿನ್ನಮತದ ನಿರ್ಣಯವನ್ನು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾ. ಎಸ್‌ ಎಸ್‌ ನಿಜ್ಜರ್‌ ಹೊರಡಿಸಿದ್ದರು.

ವಿವಾದದ ಹಿನ್ನೆಲೆ

ಡಬ್ಲುಎಸ್‌ಜಿಐ ಕಂಪೆನಿಗಳು ವಂಚನೆಯಲ್ಲಿ ತೊಡಗಿವೆ ಎಂದು ಎಲ್ಲಾ ಮಾಧ್ಯಮ ಪ್ರಸಾರ ಹಕ್ಕುಗಳನ್ನು ವಜಾ ಮಾಡಿದ್ದ ಬಿಸಿಸಿಐ ನಿರ್ಧಾರವನ್ನು ಮಧ್ಯಸ್ಥಿಕೆ ನ್ಯಾಯಾಧಿಕರಣದಲ್ಲಿ ಡಬ್ಲುಎಸ್‌ಜಿಐ ಪ್ರಶ್ನಿಸಿತ್ತು. ಮೂವರು ಸದಸ್ಯರ ನ್ಯಾಯಾಧಿಕರಣದ ಪೈಕಿ ಇಬ್ಬರು ಸದಸ್ಯರು ಬಿಸಿಸಿಐ ನಿರ್ಧಾರವನ್ನು ಎತ್ತಿ ಹಿಡಿದಿದ್ದರು. ಈ ಬಹುಮತದ ನಿರ್ಣಯವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

“2009ರಲ್ಲಿ ಒಪ್ಪಂದ ಮಾಡಿಕೊಂಡಿದ್ದರಿಂದ ಬಿಸಿಸಿಐಗೆ ಸುಮಾರು ₹1,791 ಲಾಭವಾಗಿದೆ. ಬಿಸಿಸಿಐಗೆ ಆಗಿರುವ ಅಪಾರವಾದ ಈ ಲಾಭವನ್ನು ಪರಿಗಣಿಸದೆ ಮತ್ತು ಆ ಲಾಭವನ್ನು ಬಿಸಿಸಿಐ ಹಾಗೇ ಉಳಿಸಿಕೊಂಡಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದೆ ಇರುವುದು ಮಧ್ಯಸ್ಥಿಕೆ ನ್ಯಾಯಮಂಡಳಿಯ ಮೂಲಭೂತ ದೋಷವಾಗಿದೆ” ಎಂದು ಡಬ್ಲುಎಸ್‌ಜಿಐ ವಾದಿಸಿತ್ತು.