CJI NV Ramana, TV
CJI NV Ramana, TV 
ಸುದ್ದಿಗಳು

ಮಾಧ್ಯಮ ವಿಚಾರಣೆಯಿಂದ ನ್ಯಾಯಾಧೀಶರ ಕೆಲಸ ಕಷ್ಟಕರವಾಗುತ್ತಿದೆ: ಸಿಜೆಐ ರಮಣ ಕಳವಳ

Bar & Bench

ಮಾಧ್ಯಮಗಳು ಕಾಂಗರೂ ನ್ಯಾಯಾಲಯಗಳನ್ನು ನಡೆಸುತ್ತಿದ್ದು ನ್ಯಾಯಾಲಯದಲ್ಲಿರುವ ಪ್ರಕರಣಗಳ ಮಾಧ್ಯಮ ವಿಚಾರಣೆಯಿಂದಾಗಿ ನ್ಯಾಯಾಧೀಶರ ಕೆಲಸ ಕಷ್ಟಕರವಾಗುತ್ತಿದೆ. ಇದರಿಂದ ನ್ಯಾಯ ವಿತರಣಾ ವ್ಯವಸ್ಥೆ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್‌ ವಿ ರಮಣ ಅಸಮಾಧಾನ ವ್ಯಕ್ತಪಡಿಸಿದರು.

ಅಜೆಂಡಾ ಆಧಾರಿತ ಚರ್ಚೆಗಳ ಮೂಲಕ ಮಾಧ್ಯಮಗಳು ತಮ್ಮ ಜವಾಬ್ದಾರಿ ಮರೆಯುತ್ತಿದ್ದು ಇದರಿಂದಾಗಿ ಪ್ರಜಾಪ್ರಭುತ್ವ ಎರಡು ಹೆಜ್ಜೆ ಹಿಂದಕ್ಕೆ ಹೋದಂತಾಗಿದೆ” ಎಂದು ಹೇಳಿದರು.

ರಾಂಚಿಯ ರಾಷ್ಟ್ರೀಯ ಕಾನೂನು ಅಧ್ಯಯನ ಮತ್ತು ಸಂಶೋಧನಾ ವಿಶ್ವವಿದ್ಯಾಲಯ ಶನಿವಾರ ಆಯೋಜಿಸಿದ್ದ 'ಜಸ್ಟೀಸ್ ಎಸ್ ಬಿ ಸಿನ್ಹಾ ಸ್ಮಾರಕ ಉಪನ್ಯಾಸ' ಕಾರ್ಯಕ್ರಮ ಉದ್ಘಾಟಿಸಿ 'ನ್ಯಾಯಾಧೀಶರ ಜೀವನʼ ಎಂಬ ವಿಷಯದ ಕುರಿತು ಅವರು ಮಾತನಾಡಿದರು.

"ಇತ್ತೀಚೆಗೆ, ಮಾಧ್ಯಮಗಳು ಕಾಂಗರೂ ನ್ಯಾಯಾಲಯ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದು ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೆ ಕೂಡ ಪ್ರಕರಣಗಳ ಬಗ್ಗೆ ತೀರ್ಪು ನೀಡಲು ಕಷ್ಟವಾಗುತ್ತಿದೆ. ವಿಚಾರಣೆ ನಡೆಯುತ್ತಿರುವ ಪ್ರಕರಣಗಳ ಬಗ್ಗೆ ರೂಪಿಸುತ್ತಿರುವ ತಪ್ಪು ಮಾಹಿತಿಯಿಂದ ಕೂಡಿದ ಮತ್ತು ಅಜೆಂಡಾ ಆಧಾರಿತ ಚರ್ಚೆಗಳು ಪ್ರಜಾಪ್ರಭುತ್ವದ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾಗಿದೆ. ಪಕ್ಷಪಾತದ ದೃಷ್ಟಿಕೋನಗಳನ್ನು ಮಾಧ್ಯಮಗಳು ಪ್ರಚಾರ ಮಾಡುತ್ತಿರುವುದು ಜನರ ಮೇಲೆ ಪರಿಣಾಮ ಬೀರುತ್ತಾ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುತ್ತಿದೆ. ಇದರಿಂದ ವ್ಯವಸ್ಥೆಗೆ ಹಾನಿಯಾಗುತ್ತಿದೆ. ಈ ಕ್ರಿಯೆಯಲ್ಲಿ, ನ್ಯಾಯ ವಿತರಣೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ " ಎಂದು ಅವರು ಹೇಳಿದರು.

ಈ ನಿಟ್ಟಿನಲ್ಲಿ ಸಂಪೂರ್ಣ ಜವಾಬ್ದಾರಿರಹಿತವಾಗಿ ವರ್ತಿಸುತ್ತಿರುವ ಇಲೆಕ್ಟ್ರಾನಿಕ್‌ ಮಾಧ್ಯಮಗಳನ್ನು ಅವರು ಟೀಕಿಸಿದರು. "ಮುದ್ರಣ ಮಾಧ್ಯಮಗಳಿಗೆ ಈಗಲೂ ಒಂದು ಮಟ್ಟದ ಹೊಣೆಗಾರಿಕೆ ಇದೆ. ಆದರೆ, ಎಲೆಕ್ಟ್ರಾನಿಕ್ ಮಾಧ್ಯಮಗಳ ಉತ್ತರದಾಯಿತ್ವ ಶೂನ್ಯವಾಗಿದೆ. ಏಕೆಂದರೆ ಅವರು ನೀಡುವ ಸುದ್ದಿಗಳು ಕೆಲವೇ ಹೊತ್ತಿನಲ್ಲಿ ಕಣ್ಮರೆಯಾಗುತ್ತವೆ. ಇನ್ನೂ ಕೆಟ್ಟದ್ದೆಂದರೆ ಸಾಮಾಜಿಕ ಮಾಧ್ಯಮಗಳು” ಎಂದು ಅವರು ಬೇಸರ ವ್ಯಕ್ತಪಡಿಸಿದರು.

“ಮಾಧ್ಯಮಗಳಲ್ಲಿ ಅದರಲ್ಲಿಯೂ ಸಾಮಾಜಿಕ ಮಾಧ್ಯಮಗಳಲ್ಲಿ ನ್ಯಾಯಾಧೀಶರ ವಿರುದ್ಧ ನಡೆಯುತ್ತಿರುವ ಸಂಘಟಿತ ಅಪಪ್ರಚಾರಗಳಿಂದಾಗಿ ನ್ಯಾಯ ನೀಡುವುದು ಸುಲಭದ ಹೊಣೆಯಲ್ಲ ಮತ್ತು ಇದು ದಿನದಿಂದ ದಿನಕ್ಕೆ ಹೆಚ್ಚು ಸವಾಲಾಗಿ ಪರಿಣಮಿಸುತ್ತಿದೆ” ಎಂದರು.

ಮಾಧ್ಯಮಗಳು ಕಾಂಗರೂ ನ್ಯಾಯಾಲಯ ನಡೆಸುತ್ತಿರುವುದನ್ನು ನಾವು ನೋಡುತ್ತಿದ್ದು ಕೆಲವೊಮ್ಮೆ ಅನುಭವಿ ನ್ಯಾಯಾಧೀಶರಿಗೆ ಕೂಡ ಪ್ರಕರಣಗಳ ಬಗ್ಗೆ ತೀರ್ಪು ನೀಡಲು ಕಷ್ಟವಾಗುತ್ತಿದೆ.
ಸಿಜೆಐ ರಮಣ

ಮಾಧ್ಯಮಗಳು ನಡೆಸುತ್ತಿರುವ ವಿಚಾರಣೆಗಳು ಪ್ರಕರಣ ನಿರ್ಧರಿಸುವುದಕ್ಕೆ ಮಾರ್ಗದರ್ಶಿಯಾಗಲು ಸಾಧ್ಯವಿಲ್ಲ ಎಂದ ಅವರು ತಿಳಿಸಿದರು. ಅಲ್ಲದೆ ಮಾಧ್ಯಮಗಳು ಎಲ್ಲೆ ಮೀರುತ್ತಿರುವುದರಿಂದ ಮತ್ತು ಅದರಿಂದ ಉಂಟಾಗುತ್ತಿರುವ ಸಾಮಾಜಿಕ ಅಶಾಂತಿ ಹಿನ್ನೆಲೆಯಲ್ಲಿ ಕಟ್ಟುನಿಟ್ಟಿನ ಮಾಧ್ಯಮ ನಿಯಂತ್ರಣ ಮತ್ತು ಉತ್ತರದಾಯಿತ್ವದ ಬಗ್ಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ವಿವರಿಸಿದರು. ಮಾಧ್ಯಮಗಳು, ವಿಶೇಷವಾಗಿ ಎಲೆಕ್ಟ್ರಾನಿಕ್ ಮತ್ತು ಸಾಮಾಜಿಕ ಮಾಧ್ಯಮಗಳು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕು ಎಂದು ಅವರು ಒತ್ತಾಯಿಸಿದರು.

ಇತ್ತೀಚೆಗೆ ಬಿಜೆಪಿ ಮಾಜಿ ವಕ್ತಾರೆ ನೂಪುರ್‌ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಅವರ ವಿರುದ್ಧ ನೀಡಿದ್ದ ಹೇಳಕೆಗಳ ಕುರಿತ ವಿಚಾರಣೆ ನಡೆಸುತ್ತಿದ್ದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಜೆ ಬಿ ಪರ್ದಿವಾಲಾ ಅವರನ್ನು ಅವಹೇಳನ ಮಾಡಲಾಗಿತ್ತು. ಬಳಿಕ ನ್ಯಾಯಾಧೀಶರ ಮೇಲೆ ಸಾಮಾಜಿಕ ಮಾಧ್ಯಮಗಳು ನಡೆಸುತ್ತಿರುವ ದಾಳಿ ಹಾಗೂ ಮಾಧ್ಯಮ ವಿಚಾರಣೆಯ ಬಗ್ಗೆ ಕಾರ್ಯಕ್ರಮವೊಂದರಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದ ನ್ಯಾ. ಪರ್ದಿವಾಲಾ ಅವರು ಅವಗಳನ್ನು ನಿಯಂತ್ರಿಸುವ ಅಗತ್ಯವಿದೆ ಎಂದಿದ್ದರು.

ಕಾಂಗರೂ ನ್ಯಾಯಾಲಯ: ಸೂಕ್ತ ಪುರಾವೆಗಳು ಇಲ್ಲದೆ ಅಪರಾಧವೊಂದರಲ್ಲಿ ತಪ್ಪಿತಸ್ಥರು ಎಂದು ಗುಂಪೊಂದು ನಿರ್ಧರಿಸುವ ಅನಧಿಕೃತ ನ್ಯಾಯಾಲಯನ್ನು ಕಾಂಗರೂ ನ್ಯಾಯಾಲಯ ಎನ್ನುತ್ತಾರೆ. ಮೂಲವೊಂದರ ಪ್ರಕಾರ ಕಾಂಗರೂ ನ್ಯಾಯಾಲಯದ ಪರಿಕಲ್ಪನೆ ಹತ್ತೊಂಬತ್ತನೇ ಶತಮಾನಕ್ಕೆ ಸೇರಿದ್ದು. ಅಮೆರಿಕದಲ್ಲಿ ಆಗೆಲ್ಲಾ ಊರೂರು ತಿರುಗಿ ತೀರ್ಪು ನೀಡುತ್ತಿದ್ದ ಸಂಚಾರಿ ನ್ಯಾಯಾಧೀಶರಿದ್ದರು. ಅವರು ಎಷ್ಟು ತೀರ್ಪು ನೀಡುತ್ತಾರೋ ಅಷ್ಟು ಹಣ ಅವರಿಗೆ ದೊರೆಯುತ್ತಿತ್ತು. ಹೀಗಾಗಿ ಸ್ಥಳದಿಂದ ಸ್ಥಳಕ್ಕೆ ʼಜಿಗಿದುʼ ಹೇಗೋ ಒಟ್ಟು ಪ್ರಕರಣ ಇತ್ಯರ್ಥಪಡಿಸಿ ಸಂಪಾದಿಸುತ್ತಿದ್ದರು. ಆ ಜಿಗಿಯುವಿಕೆಯಿಂದಾಗಿ ಕಾಂಗರೂ ನ್ಯಾಯಾಧೀಶರು/ ನ್ಯಾಯಾಲಯ ಎಂಬ ಪರಿಕಲ್ಪನೆ ಬಂದಿತು.