ಸುದ್ದಿಗಳು

ಮಧ್ಯಸ್ಥಿಕೆ ಕಾಯಿದೆ- 2023ಕ್ಕೆ ರಾಷ್ಟ್ರಪತಿಗಳ ಅಂಕಿತ

Bar & Bench

ಮಧ್ಯಸ್ಥಿಕೆ ಕಾಯಿದೆ- 2023ಕ್ಕೆ ರಾಷ್ಟ್ರಪತಿಗಳ ಅಂಕಿತ ದೊರೆತಿದ್ದು ಸೆ15 ರಂದು ಭಾರತದ ಗೆಜೆಟ್‌ನಲ್ಲಿ ಈ ಸಂಬಂಧ ಅಧಿಸೂಚನೆ ಪ್ರಕಟವಾಗಿದೆ.

ಸುಶೀಲ್ ಕುಮಾರ್ ಮೋದಿ ನೇತೃತ್ವದ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ, ಕಾನೂನು ಮತ್ತು ನ್ಯಾಯದ ಸಂಸದೀಯ ಸ್ಥಾಯಿ ಸಮಿತಿಗೆ ಉಲ್ಲೇಖಿಸುವ ಮೊದಲು ಮಧ್ಯಸ್ಥಿಕೆ ಮಸೂದೆಯನ್ನು ಡಿಸೆಂಬರ್ 20, 2021ರಂದು ಮಂಡಿಸಲಾಗಿತ್ತು. ಸಮಿತಿ ತನ್ನ ವರದಿಯನ್ನು ಜುಲೈ 13, 2022 ರಂದು ರಾಜ್ಯಸಭಾ ಅಧ್ಯಕ್ಷರಿಗೆ ಸಲ್ಲಿಸಿತು.

ಇದನ್ನು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕ್ರಮವಾಗಿ ಆಗಸ್ಟ್ 1 ಮತ್ತು ಆಗಸ್ಟ್ 7ರಂದು ಅಂಗೀಕರಿಸಲಾಯಿತು.ಯಾವುದೇ ನ್ಯಾಯಾಲಯ ಅಥವಾ ನ್ಯಾಯಾಧಿಕರಣವನ್ನು ಆಶ್ರಯಿಸುವ ಮೊದಲು ಮಧ್ಯಸ್ಥಿಕೆಯ ಮೂಲಕ ಸಿವಿಲ್‌ ಅಥವಾ ವಾಣಿಜ್ಯ ವಿವಾದಗಳನ್ನು ಪರಿಹಸಿಕೊಳ್ಳಲು ವ್ಯಕ್ತಿಗಳು ಯತ್ನಿಸಬೇಕು ಎನ್ನುತ್ತದೆ ಕಾಯಿದೆ.

ಎರಡು ಮಧ್ಯಸ್ಥಿಕೆ ಅವಧಿಗಳ ನಂತರ, ಪ್ರಕ್ರಿಯೆಯಿಂದ ಹಿಂದೆ ಸರಿಯಲು ಪಕ್ಷಕಾರರಿಗೆ ಅನುಮತಿಸಲಾಗುತ್ತದೆ. ಮಧ್ಯಸ್ಥಿಕೆ ಪ್ರಕ್ರಿಯೆಯು 180 ದಿನಗಳಲ್ಲಿ ಪೂರ್ಣಗೊಳ್ಳಬೇಕು, ಪಕ್ಷಕಾರರು ಒಪ್ಪಿದರೆ ಅದನ್ನು ಇನ್ನೂ 180 ದಿನಗಳವರೆಗೆ ವಿಸ್ತರಿಸುವ ಸಾಧ್ಯತೆಯಿದೆ.

ಮಧ್ಯಸ್ಥಿಕೆಯ ಸಾಂಪ್ರದಾಯಿಕ ಸ್ವಯಂಪ್ರೇರಿತ ಸ್ವಭಾವಕ್ಕೆ ವಿರುದ್ಧವಾಗಿ ವ್ಯಾಜ್ಯಪೂರ್ವ ಮಧ್ಯಸ್ಥಿಕೆಯಲ್ಲಿ ಭಾಗವಹಿಸುವಿಕೆಯನ್ನು ಕಡ್ಡಾಯಗೊಳಿಸುವುದಕ್ಕಾಗಿ ಕಾಯಿದೆಗೆ ಟೀಕೆಗಳು ಎದುರಾಗಿದ್ದವು. ಅಲ್ಲದೆ ಮಧ್ಯಸ್ಥಿಕೆ ಮಂಡಳಿಗೆ ಭಾರತೀಯ ವಕೀಲರ ಪರಿಷತ್‌ ರೀತಿಯ ಸಂಸ್ಥೆಗಳಂತೆ ಅನುಭವಿ ವೃತ್ತಿಪರರ ಸಂಖ್ಯೆ ಸಾಕಷ್ಟು ಇಲ್ಲ ಎಂಬ ಆತಂಕವೂ ವ್ಯಕ್ತವಾಗಿತ್ತು. 

ತನ್ನ ನಿಯಮಾವಳಿಗಳನ್ನು ರೂಪಿಸಲು ಕೇಂದ್ರ ಸರ್ಕಾರದಿಂದ ಮಂಡಳಿ ಪೂರ್ವಾನುಮತಿ ಪಡೆಯಬೇಕು. ಮಧ್ಯಸ್ಥಿಕೆ ವೇಳೆ ಪಕ್ಷಕಾರನಾಗಿ ಸರ್ಕಾರದ ಸಂಭಾವ್ಯ ಭಾಗವಹಿಸುವಿಕೆಯ ಬಗ್ಗೆಯೂ ಪ್ರಶ್ನೆಗಳಿದ್ದವು. ಅಲ್ಲದೆ ಭಾರತದ ಹೊರಗೆ ನಡೆಸಿದ ಅಂತರರಾಷ್ಟ್ರೀಯ ಮಧ್ಯಸ್ಥಿಕೆ ಇತ್ಯರ್ಥ ಒಪ್ಪಂದಗಳನ್ನು ಜಾರಿಗೊಳಿಸಲು ಅವಕಾಶ ಕಲ್ಪಿಸುವುದಿಲ್ಲ ಎಂದು ಕೂಡ ಹೇಳಲಾಗಿತ್ತು.