A1
A1
ಸುದ್ದಿಗಳು

ಶೀಘ್ರವೇ ಜಾರಿಯಾಗಲಿದೆ ಮಧ್ಯಸ್ಥಿಕೆ ಕಾಯಿದೆ; ಸದ್ಯ ಸ್ಥಾಯಿ ಸಮಿತಿಯ ಮುಂದಿದೆ ಮಸೂದೆ: ಸಚಿವ ಕಿರೆನ್ ರಿಜಿಜು

Bar & Bench

ಸಂಸತ್ತಿನಲ್ಲಿ ಮಂಡಿಸಲು ಉದ್ದೇಶಿಸಿರುವ ಮಧ್ಯಸ್ಥಿಕೆ ಮಸೂದೆಯನ್ನು ಪ್ರಸ್ತುತ ಸಂಸದೀಯ ಸ್ಥಾಯಿ ಸಮಿತಿಯು ಪರಿಶೀಲಿಸುತ್ತಿದ್ದು, ಅಗತ್ಯ ಬದಲಾವಣೆ ಮತ್ತು ತಿದ್ದುಪಡಿ ಸೇರಿಸಿದ ನಂತರ ಶೀಘ್ರದಲ್ಲೇ ಅಂಗೀಕರಿಸಲಾಗುವುದು ಎಂದು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಶನಿವಾರ ಹೇಳಿದ್ದಾರೆ.

ಗುಜರಾತ್‌ನ ನರ್ಮದಾ ಜಿಲ್ಲೆಯ ಏಕತಾ ನಗರದಲ್ಲಿ ಇಂದಿನಿಂದ ಎರಡು ದಿನಗಳ ಕಾಲ ನಡೆಯಲಿರುವ “ಮಧ್ಯಸ್ಥಿಕೆ ಮತ್ತು ಮಾಹಿತಿ ತಂತ್ರಜ್ಞಾನ” ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

"ನಮ್ಮ ಸರ್ಕಾರ ಈ ವಿಷಯದ ಬಗ್ಗೆ ಸಂಪೂರ್ಣ ಗಮನ ನೀಡುತ್ತಿದ್ದು ಸಂಸತ್ತಿನಲ್ಲಿ ಮಂಡಿಸಲಿರುವ ಮಧ್ಯಸ್ಥಿಕೆ ಮಸೂದೆಯು ಉತ್ತಮ ರೂಪ ಪಡೆಯುತ್ತಿದೆ ಎಂದು ಘೋಷಿಸಲು ನಾನು ಸಂತೋಷಪಡುತ್ತೇನೆ. ನಾವು ಎಲ್ಲಾ ಭಾಗೀದಾರರು ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಿಂದ ಸಲಹೆ ಪಡೆದುಕೊಂಡಿದ್ದೇವೆ. ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿಗಳ ಸಲಹೆಗಳನ್ನು ಕೂಡ ಪಡೆದುಕೊಂಡಿದ್ದೇವೆ. ಮಧ್ಯಸ್ಥಿಕೆ ಮಸೂದೆ ಈಗ ಕಾನೂನು ಮತ್ತು ನ್ಯಾಯ ಸಂಸದೀಯ ಸ್ಥಾಯಿ ಸಮಿತಿಯ ಮುಂದಿದ್ದು, ಅದು ನಮ್ಮ ಬಳಿಗೆ ಬಂದ ತಕ್ಷಣ, ಅಗತ್ಯವಿರುವ ಎಲ್ಲಾ ತಿದ್ದುಪಡಿಗಳೊಂದಿಗೆ ಅದನ್ನು ಅಂಗೀಕರಿಸಲಾಗುವುದು,” ಎಂದು ಅವರು ಹೇಳಿದರು.

ಇದೇ ವೇಳೆ "ಕಾರ್ಯಾಂಗದಿಂದ ನ್ಯಾಯಾಂಗ ಏನನ್ನು ನಿರೀಕ್ಷಿಸುತ್ತದೆಯೋ ಅದನ್ನು ನಾವು ಈಡೇರಿಸುತ್ತೇವೆ" ಎಂದು ಅವರು ಭರವಸೆ ನೀಡಿದರು. ಪ್ರಧಾನಿ ಮೋದಿ ನೇತೃತ್ವದ ನಮ್ಮ ಸರ್ಕಾರ ಪ್ರಕರಣಗಳ ತ್ವರಿತ ಪರಿಹಾರಕ್ಕೆ ಗಮನಹರಿಸಿದೆ ಎಂದರು.

CJI N V Ramana

ಕೃಷ್ಣ ಸಂಧಾನದ ಪ್ರಸ್ತಾಪ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ವ್ಯಾಜ್ಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸಿದರು. “ಸಂಧಾನದಲ್ಲಿ (ಮಹಾಭಾರತದ) ಶ್ರೀಕೃಷ್ಣ ಯಶಸ್ವಿಯಾಗಿದ್ದರೆ ಎಷ್ಟೊಂದು ಜೀವಗಳು ಉಳಿಯುತ್ತಿದ್ದವು” ಎಂದು ಅವರು ತಿಳಿಸಿದರು.

ಮಧ್ಯಸ್ಥಿಕೆಯಂತಹ ಪರ್ಯಾಯ ವ್ಯಾಜ್ಯ ಪರಿಹಾರ ತಂತ್ರಗಳಿಂದ ನ್ಯಾಯಾಂಗ ಸಂಪನ್ಮೂಲ ಉಳಿಯುತ್ತದೆ. ಮಧ್ಯಸ್ಥಿಕೆ ಅಂತಾರಾಷ್ಟ್ರೀಯ ವಾಣಿಜ್ಯ ಕ್ಷೇತ್ರಕ್ಕೂ ಕಾಲಿಡುತ್ತಿದ್ದು ದಾವೆಯ ಪೂರ್ವ ಹಂತದಲ್ಲಿ ಖಾಸಗಿ ಮಧ್ಯಸ್ಥಿಕೆ ನಡೆಸುವುದು ರೂಢಿಗೆ ಬರುತ್ತಿದೆ ಎಂದು ಅವರು ಹೇಳಿದರು.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಕಾರ್ಯಕ್ರಮ ಉದ್ಘಾಟಿಸಿದರು.