KSBC 
ಸುದ್ದಿಗಳು

ವಕೀಲರಿಗೆ ವೈದ್ಯಕೀಯ ವಿಮಾ ಯೋಜನೆ: ವೆಬ್‌ಲಿಂಕ್‌ ಮೂಲಕ ವೈಯಕ್ತಿಕ ವಿವರ ಸಲ್ಲಿಸಲು ಕೆಎಸ್‌ಬಿಸಿ ಸೂಚನೆ

ಕೇಂದ್ರ ಸರ್ಕಾರ ಹಾಗೂ ವಕೀಲರ ಪರಿಷತ್ ವತಿಯಿಂದ ವೈದ್ಯಕೀಯ ವಿಮೆ ರೂಪಿಸಿ ಜಾರಿಗೆ ತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಕೀಲರು ಕೂಡಲೇ ತಮ್ಮ ವೈಯಕ್ತಿಕ ಮಾಹಿತಿಯನ್ನು ಆಯಾ ವಕೀಲರ ಸಂಘಗಳಿಗೆ ಸಲ್ಲಿಸಲು ಸೂಚಿಸಲಾಗಿತ್ತು.

Bar & Bench

ವೈದ್ಯಕೀಯ ವಿಮಾ ಯೋಜನೆಯ ಸೌಲಭ್ಯ ಪಡೆಯಲು ಬಯಸುವ ವಕೀಲರ ವೈಯಕ್ತಿಕ ವಿವರಗಳನ್ನು ವೆಬ್‌ಲಿಂಕ್ ಮೂಲಕ ಸಲ್ಲಿಸುವಂತೆ ರಾಜ್ಯದ ವಿವಿಧ ಜಿಲ್ಲೆಗಳ ವಕೀಲರ ಸಂಘಗಳಿಗೆ ಸೂಚಿಸಿರುವ ಕರ್ನಾಟಕ ರಾಜ್ಯ ವಕೀಲರ ಪರಿಷತ್ (ಕೆಎಸ್‌ಬಿಸಿ), ವಿವರಗಳ ಸಲ್ಲಿಕೆಗೆ ಕಾಲಾವಕಾಶವನ್ನೂ ವಿಸ್ತರಣೆ ಮಾಡಿದೆ.

ಕೇಂದ್ರ ಸರ್ಕಾರ ಹಾಗೂ ವಕೀಲರ ಪರಿಷತ್ ವತಿಯಿಂದ ವಕೀಲರಿಗಾಗಿ ವೈದ್ಯಕೀಯ ವಿಮೆ ರೂಪಿಸಿ ಜಾರಿಗೆ ತರಲಾಗುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯದ ಎಲ್ಲ ವಕೀಲರು ಕೂಡಲೇ ತಮ್ಮ ವೈಯಕ್ತಿಕ ಮಾಹಿತಿಯನ್ನು ಆಯಾ ವಕೀಲರ ಸಂಘದ ಅಧ್ಯಕ್ಷರು/ಕಾರ್ಯದರ್ಶಿಗೆ ಸಲ್ಲಿಸಬೇಕು ಎಂದು ಕೆಎಸ್‌ಬಿಸಿ ಅಧ್ಯಕ್ಷ ಎಚ್ ಎಲ್ ವಿಶಾಲ ರಘು ಈ ಹಿಂದೆ ಪ್ರಕಟಣೆ ಹೊರಡಿಸಿದ್ದರು.

ಆದರೆ, ಕೆಲ ವಕೀಲರ ಸಂಘಗಳು ಕಾರಣಾಂತರದಿಂದ ವೈದ್ಯಕೀಯ ವಿಮೆ ಯೋಜನೆಗೆ ಅಗತ್ಯವಿರುವ ನಿಗದಿತ ನಮೂನೆಯಲ್ಲಿ ವಕೀಲರ ವಿವರಗಳನ್ನು ಈವರೆಗೂ ಪರಿಷತ್‌ಗೆ ಸಲ್ಲಿಸಿರಲಿಲ್ಲ. ಜತೆಗೆ, ವಿವರಗಳ ಸಲ್ಲಿಕೆಗೆ ದಿನಾಂಕ ವಿಸ್ತರಿಸುವಂತೆ ಸಂಘಗಳ ಅಧ್ಯಕ್ಷರು ಮನವಿ ಮಾಡಿದ್ದರು.

ಈ ಹಿನ್ನೆಲೆಯಲ್ಲಿ ವಕೀಲರ ಪರಿಷತ್‌ನ ವೆಬ್‌ಸೈಟ್ ಮೂಲಕ ವಿವರಗಳನ್ನು ಅಪ್ಲೋಡ್ ಮಾಡಲು ಅವಕಾಶ ಕಲ್ಪಿಸಿರುವ ಕೆಎಸ್‌ಬಿಸಿಯು ಈವರೆಗೂ ವಕೀಲರ ವಿವರಗಳನ್ನು ಸಲ್ಲಿಸದ ಸಂಘಗಳು http://ksbc.org.in/medicalinsurance.php. ಲಿಂಕ್ ಮೂಲಕ ಮಾಹಿತಿ ಸಲ್ಲಿಸಬೇಕು ಎಂದು ಸೂಚಿಸಿದೆ. ಜತೆಗೆ, ಈ ಲಿಂಕ್ ಜೂನ್‌ 10ರವರೆಗೆ ತೆರೆದಿರಲಿದ್ದು, ಲಿಂಕ್ ಮುಖಾಂತರವೇ ಮಾಹಿತಿ ಸಲ್ಲಿಸಬೇಕು. ಯಾವುದೇ ಅರ್ಜಿಗಳನ್ನು ಪರಿಷತ್ ಕಚೇರಿಗೆ ಕಳುಹಿಸಬಾರದು ಎಂದು ಕೆಎಸ್‌ಬಿಸಿ ಅಧ್ಯಕ್ಷ ವಿಶಾಲ ರಘು ತಿಳಿಸಿದ್ದಾರೆ.