High Court of Karnataka 
ಸುದ್ದಿಗಳು

ವೈದ್ಯಕೀಯ ವಿಜ್ಞಾನ ಸಂಸ್ಥೆ ಅಧೀಕ್ಷಕರನ್ನು ಅದೇ ಸಂಸ್ಥೆಯ ಮತ್ತೊಂದು ವಿಭಾಗದ ಮುಖ್ಯಸ್ಥರಾಗಿ ನೇಮಿಸಲಾಗದು: ಹೈಕೋರ್ಟ್

ತಿಮ್ಮಪ್ಪ ಅವರನ್ನು ಇನ್‌ಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗದ ಪ್ರಭಾರ ಮುಖ್ಯಸ್ಥರಾಗಿ ನೇಮಕ ಆದೇಶವನ್ನು ಹೈಕೋರ್ಟ್‌ ರದ್ದುಪಡಿಸಿದೆ.

Bar & Bench

ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಅಧೀಕ್ಷಕರಾಗಿದ್ದ ಟಿ ಡಿ ತಿಮ್ಮಪ್ಪ ಅವರನ್ನು ಅದೇ ಸಂಸ್ಥೆಯ ಇನ್‌ಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗದ ಪ್ರಭಾರ ಮುಖ್ಯಸ್ಥರಾಗಿ (ಎಚ್‌ಒಡಿ) ನೇಮಕ ಮಾಡಿದ್ದ ಆದೇಶವನ್ನು ಕರ್ನಾಟಕ ಹೈಕೋರ್ಟ್‌ ರದ್ದುಪಡಿಸಿದೆ. ಸ್ವಾಯತ್ತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರನ್ನು ಅದೇ ಸಂಸ್ಥೆಗೆ ಸೇರಿದ ಆಸ್ಪತ್ರೆಯ ಒಂದು ವಿಭಾಗದ ಮುಖ್ಯಸ್ಥರನ್ನಾಗಿ ಹೆಚ್ಚುವರಿ ಹೊಣೆ ನೀಡುವಂತಿಲ್ಲ ಎಂದು ಆದೇಶಿಸಿದೆ.

ತಿಮ್ಮಪ್ಪ ಅವರನ್ನು ಇನ್‌ಎನ್‌ಟಿ (ಕಿವಿ, ಮೂಗು ಮತ್ತು ಗಂಟಲು) ವಿಭಾಗದ ಪ್ರಭಾರ ಮುಖ್ಯಸ್ಥರಾಗಿ ನೇಮಕ ಮಾಡಿದ ಕ್ರಮ ಪ್ರಶ್ನಿಸಿ ಡಾ.ಎಸ್‌ ಶ್ರೀಧರ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್ ಶಂಕರ್‌ ಮಗದುಮ್‌ ಅವರ ಅವರ ನೇತೃತ್ವದ ಏಕಸದಸ್ಯ ಪೀಠ ಪುರಸ್ಕರಿಸಿದೆ.

ರಾಷ್ಟ್ರೀಯ ವೈದ್ಯಕೀಯ ಆಯೋಗ ಅಧಿನಿಯಮಗಳ ನಿಯಮ 3.7ರ ಪ್ರಕಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರನ್ನು ಸಂಸ್ಥೆಯ ಮತ್ತೊಂದು ವಿಭಾಗದ ಮುಖ್ಯಸ್ಥರಾಗಿ ಹೆಚ್ಚುವರಿ ಹೊಣೆಗಾರಿಕೆಗಳನ್ನು ನಿರ್ವಹಿಸುವಂತಿಲ್ಲ. ಅದರಂತೆ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ವೈದ್ಯಕೀಯ ಅಧೀಕ್ಷಕರಾಗಿರುವ ತಿಮ್ಮಪ್ಪ ಅವರನ್ನು ಇನ್‌ಎಟಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿರುವುದು ಎನ್‌ಎಂಸಿ ನಿಯಮಗಳ ಉಲ್ಲಂಘನೆ ಮತ್ತು ಕಾನೂನುಬಾಹಿರ ಕ್ರಮ ಎಂದು ಪೀಠ ತಿಳಿಸಿದೆ.

ವೈದ್ಯಕೀಯ ಅಧೀಕ್ಷಕರಾಗಿ ಆಸ್ಪತ್ರೆಯ ಆಡಳಿತಾತ್ಮಕ ಕೆಲಸದ ಜೊತೆಗೆ ಬಜೆಟ್, ಸಿಬ್ಬಂದಿ, ಸೌಕರ್ಯ ಸೇರಿ ಒಟ್ಟಾರೆ ಆಸ್ಪತ್ರೆಯ ಕೆಲಸ ಕಾರ್ಯಗಳ ಮೇಲ್ವಿಚಾರಣೆ ನಡೆಸಬೇಕಾಗುತ್ತದೆ. ಅಂತಹವರಿಗೆ ಇಎನ್‌ಟಿ ವಿಭಾಗದ ಹೆಚ್ಚುವರಿ ಹೊಣೆ ವಹಿಸಿದರೆ ಸರ್ಜರಿ, ವೈದ್ಯಕೀಯ ಚಿಕಿತ್ಸೆ ಸೇರಿ ಹಲವು ಜವಾಬ್ದಾರಿ ನಿರ್ವಹಿಸಬೇಕಾಗುತ್ತದೆ. ಎರಡೂ ಹುದ್ದೆ ಒಬ್ಬರೇ ಸಮರ್ಪಕವಾಗಿ ನಿರ್ವಹಿಸಲಾಗದು. ಹೀಗಾಗಿ, ತಿಮ್ಮಪ್ಪ ಅವರನ್ನು ಇಎನ್‌ಟಿ ವಿಭಾಗದ ಮುಖ್ಯಸ್ಥರಾಗಿ ನೇಮಿಸಿ 2024ರ ಜನವರಿ 31ರಂದು ಸಂಸ್ಥೆಯ ನಿರ್ದೇಶಕರು ಹೊರಡಿಸಿದ ಜ್ಞಾಪಕ ಪತ್ರ (ಮೆಮೊರಂಡಮ್‌) ರದ್ದುಪಡಿಸುತ್ತಿರುವುದಾಗಿ ಪೀಠ ಆದೇಶದಲ್ಲಿ ಹೇಳಿದೆ.

ಪರಿಣಿತ ಹಾಗೂ ಸೂಕ್ತ ಅನುಭವ ಹೊಂದಿರುವ ಅರ್ಹರನ್ನು ಸಂಸ್ಥೆಯ ಇನ್‌ಎಟಿ ಮುಖ್ಯಸ್ಥರಾಗಿ ನೇಮಕ ಮಾಡುವ ಮೂಲಕ ಎನ್‌ಎಂಸಿ ನಿಯಮಗಳ ಉಲ್ಲಂಘನೆಯನ್ನು ಕೂಡಲೇ ಪರಿಹರಿಸಬೇಕು. ಆಡಳಿತಾತ್ಮಕ ಮತ್ತು ಕ್ಲಿನಿಕಲ್ ಪಾತ್ರಗಳನ್ನು ಪ್ರತ್ಯೇಕವಾಗಿ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರಿಗೆ ಹೈಕೋರ್ಟ್‌ ಸೂಚಿಸಿದೆ.