Meghalaya High Court
Meghalaya High Court 
ಸುದ್ದಿಗಳು

ಹದಿನಾರರ ಹರೆಯದ ಯುವತಿಯು ಲೈಂಗಿಕ ಕ್ರಿಯೆ ಕುರಿತು ನಿರ್ಧರಿಸಬಲ್ಲಳು ಎಂದ ಮೇಘಾಲಯ ಹೈಕೋರ್ಟ್‌; ಪೋಕ್ಸೋ ಪ್ರಕರಣ ರದ್ದು

Bar & Bench

ಲೈಂಗಿಕ ಕ್ರಿಯೆ ಕುರಿತಾದ ಪ್ರಜ್ಞಾಪೂರ್ವಕ ನಿರ್ಧಾರ ಕೈಗೊಳ್ಳಲು ಹದಿನಾರು ವರ್ಷದ ಹದಿಹರೆಯದ ಯುವತಿಯು ಸಮರ್ಥಳು ಎಂದು ಪರಿಗಣಿಸಬಹುದಾಗಿದೆ ಎಂದು ಮೇಘಾಲಯ ಹೈಕೋರ್ಟ್‌ ಇತ್ತೀಚೆಗೆ ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ವಿರುದ್ಧ ದಾಖಲಿಸಲಾಗಿದ್ದ ಪೊಕ್ಸೋ ಕಾಯಿದೆ (ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ) ಪ್ರಕರಣವನ್ನು ಅದು ರದ್ದುಪಡಿಸಿದೆ [ಜಾನ್‌ ಫ್ರ್ಯಾಂಕ್ಲಿನ್‌ ಶಿಲ್ಲಾ ವರ್ಸಸ್‌ ಮೇಘಾಲಯ ಸರ್ಕಾರ ಮತ್ತು ಇನ್ನೊಬ್ಬರು].

ಪ್ರಕರಣದ ಕುರಿತು ತೀರ್ಪು ನೀಡಿದ ನ್ಯಾ. ಡಬ್ಯ್ಲು ಡೈಂಗ್‌ಡೊ ಅವರು, ಆ ವಯೋಮಾನದ ಅಪ್ರಾಪ್ತೆಯರ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯನ್ನು ಗಮನಿಸಿದರೆ, ಅವರಿಗೆ ಲೈಂಗಿಕ ಕ್ರಿಯೆ ಕುರಿತಾದ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವಿರುತ್ತದೆ ಎಂದು ತರ್ಕಿಸಲು ಸಾಧ್ಯವಿದೆ ಎಂದರು.

ನ್ಯಾಯಮೂರ್ತಿಗಳು ತಮ್ಮ ಅದೇಶದಲ್ಲಿ, "ಹದಿಹರೆಯದ ವಯೋಮಾನದವರ (ಹದಿನಾರು ವರ್ಷದ ಅಪ್ರಾಪ್ತೆಯನ್ನು ಉದ್ದೇಶಿಸಿ) ದೈಹಿಕ ಮತ್ತು ಮಾನಸಿಕ ಸಾಮರ್ಥ್ಯವನ್ನು ಪರಿಗಣಿಸಿರುವ ಈ ನ್ಯಾಯಾಲಯವು ಆ ವಯಸ್ಸಿನವರು ನೈಜ ಲೈಂಗಿಕ ಕ್ರಿಯೆಯಿಂದ ತಮ್ಮ ಮೇಲೆ ಉಂಟಾಗುವ ಪರಿಣಾಮಗಳ ಕುರಿತಾಗಿ ಪ್ರಜ್ಞಾಪೂರ್ವಕ ನಿರ್ಧಾರವನ್ನು ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ ಎಂದು ತಾರ್ಕಿಕವಾಗಿ ಪರಿಗಣಿಸುತ್ತದೆ," ಎಂದಿದ್ದಾರೆ.

ಈ ಹಿನ್ನೆಲೆಯಲ್ಲಿ, ಪೋಕ್ಸೋ ಕಾಯಿದೆಯ ಸೆಕ್ಷನ್‌ 3 ಮತ್ತು 4ರ ಅಡಿ ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಲು ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್ 482ರ ಅಡಿ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಿತು.

ಹಿನ್ನೆಲೆ: ಪ್ರಕರಣದಲ್ಲಿನ ಆರೋಪಿಯು ವಿವಿಧ ಮನೆಗಳಲ್ಲಿ ಗೃಹಕೃತ್ಯಗಳ ನಿರ್ವಹಣೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರಿಗೆ ಅಪ್ತಾಪ್ತ ಯುವತಿಯ ಪರಿಚಯವಾಗಿತ್ತು. ಮುಂದೆ ಇದು ಇಬ್ಬರ ನಡುವೆ ಪ್ರೇಮಾಂಕುರಕ್ಕೆ ಕಾರಣವಾಯಿತು. ಇಬ್ಬರ ನಡುವೆ ಒಮ್ಮೆ ಸಮ್ಮತಿಯ ಲೈಂಗಿಕ ಸಂಪರ್ಕವೂ ಉಂಟಾಯಿತು.

ಈ ಬಗ್ಗೆ ತಿಳಿದ ಅಪ್ರಾಪ್ತೆಯ ತಾಯಿಯು ಮಗಳ ಪ್ರಿಯಕರನ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 363 ಮತ್ತು ಪೋಕ್ಸೋ ಕಾಯಿದೆ ಅಡಿ ಎಫ್‌ಐಆರ್‌ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿದ್ದ ಆರೋಪಿಯು ಪ್ರಕರಣವನ್ನು ರದ್ದುಪಡಿಸಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ತಮ್ಮಿಬ್ಬರ ನಡುವೆ ಸಮ್ಮತಿಯ ಲೈಂಗಿಕ ಕ್ರಿಯೆಯು ನಡೆದಿದ್ದು, ಬಲಾತ್ಕಾರದ ಪ್ರಶ್ನೆ ಉದ್ಭವಿಸಿಲ್ಲ. ಈ ಕುರಿತು ಯುವತಿಯು ಸಹ ಅಪರಾಧ ಪ್ರಕ್ರಿಯಾ ಸಂಹಿತೆಯ ಸೆಕ್ಷನ್‌ 164ರ ಅಡಿ ನೀಡಿರುವ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾಳೆ ಎಂದು ಅರೋಪಿಯು ವಾದಿಸಿದ್ದರು.

ಪ್ರಕರಣದಲ್ಲಿನ ಹೇಳಿಕೆಗಳು ಹಾಗೂ ಇಂತಹ ಪ್ರಕರಣಗಳಿಗೆ ಸಂಬಂಧಿಸಿದ ನ್ಯಾಯಾಲಯಗಳ ಪೂರ್ವ ನಿದರ್ಶನಗಳನ್ನು ಗಮನಿಸಿದ ನ್ಯಾಯಾಲಯವು ಯುವತಿಯು ಹದಿನಾರು ವರ್ಷದ ಅಪ್ರಾಪ್ತೆಯಾಗಿದ್ದರೂ ಸಹ ಅರ್ಜಿದಾರನ ವಾದವನ್ನು ಬೆಂಬಲಿಸುವಂತಹ ಅಕೆಯ ಹೇಳಿಕೆಯು ಪ್ರಕರಣದಲ್ಲಿ ಸಂಗತವಾಗಿದೆ ಎಂಬ ನಿರ್ಧಾರಕ್ಕೆ ಬಂದಿತು.

ಮದ್ರಾಸ್‌ ಹೈಕೋರ್ಟ್‌ನ ವಿಜಯಲಕ್ಷ್ಮಿ ಮತ್ತು ಇನ್ನೊಬ್ಬರು ವರ್ಸಸ್‌ ಪೊಲೀಸ್‌ ಇನ್ಸ್‌ಪೆಕ್ಟರ್‌, ಮಹಿಳಾ ಪೊಲೀಸ್‌ ಠಾಣೆ, ರಾಜ್ಯ ಸರ್ಕಾರ ನಡುವಿನ ಪ್ರಕರಣದ ತೀರ್ಪನ್ನು ಆಧರಿಸಿದ ನ್ಯಾಯಾಲಯವು ಆರೋಪಿಯ ವಿರುದ್ಧದ ಪ್ರಕರಣವನ್ನು ಅಂತಿಮವಾಗಿ ರದ್ದುಪಡಿಸಿತು.