ಸುದ್ದಿಗಳು

ಮೆಹಮೂದ್ ಪ್ರಾಚಾ ಕಂಪ್ಯೂಟರ್ ವಶ, ಮೇಲ್ವಿಚಾರಣೆಗಾಗಿ ಅಡ್ವೊಕೇಟ್ ಕಮಿಷನರ್ ನೇಮಕ ಮಾಡಿದ ದೆಹಲಿ ನ್ಯಾಯಾಲಯ

ಈ ವರ್ಷದ ಆರಂಭದಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಲು ಸಾಕ್ಷಿಗೆ ಹೇಳಿಕೊಟ್ಟಿದ್ದ ಆರೋಪದಡಿ ದೆಹಲಿ ಪೊಲೀಸರು ಪ್ರಾಚಾ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದರು.

Bar & Bench

ದೆಹಲಿ ಪೊಲೀಸರು ನಡೆಸುತ್ತಿರುವ ದಾಳಿಗಳ ನಡುವೆ ವಕೀಲ ಮೆಹಮೂದ್‌ ಪ್ರಾಚಾ ಅವರಿಂದ ವಶಪಡಿಸಿಕೊಳ್ಳಲಾದ ಕಂಪ್ಯೂಟರ್‌ ಮೇಲ್ವಿಚಾರಣೆ ಮತ್ತು ಅದರಲ್ಲಿರುವ ದತ್ತಾಂಶ ಹಾಳುಗೆಡವದಂತೆ ನೋಡಿಕೊಳ್ಳಲು ದೆಹಲಿ ಸೆಷನ್ಸ್‌ ನ್ಯಾಯಾಲಯ ಶನಿವಾರ ಅಡ್ವೊಕೇಟ್‌ ಕಮಿಷನರ್‌ ನೇಮಕ ಮಾಡಿದೆ.

ದಾಳಿಗಳನ್ನು ತಡೆಯಲು ನ್ಯಾಯಾಲಯ ನಿರಾಕರಿಸಿದ ಒಂದು ದಿನದ ಬಳಿಕ ಈ ಆದೇಶ ಹೊರಬಿದ್ದಿದೆ. ದಾಳಿಗಳು ವಕೀಲ- ಕಕ್ಷಿದಾರರ ಸವಲತ್ತುಗಳ ಉಲ್ಲಂಘನೆಯಾಗಿದೆ ಎಂದು ಪ್ರಾಚಾ ವಾದಿಸಿದ್ದರು.

ನ್ಯಾಯಧೀಶ ಧರ್ಮೇಂದರ್‌ ರಾಣಾ ಅವರು ನೀಡಿರುವ ಆದೇಶದಂತೆ ವಕೀಲ ಅವ್ನೀತ್‌ ಕೌರ್‌ ಅವರನ್ನು ಅಡ್ವೊಕೇಟ್‌ ಕಮಿಷನರ್‌ ಆಗಿ ನೇಮಿಸಲಾಗಿದ್ದು ಅವರಿಗೆ ಪ್ರಾಚಾ ಅವರು 25 ಸಾವಿರ ರೂ ವೇತನ ಪಾವತಿಸಬೇಕಿದೆ. ಅಡ್ವೊಕೇಟ್‌ ಕಮಿಷನರ್‌ ಅವರೊಡನೆ ತನಿಖಾಧಿಕಾರಿ ಸಹಕರಿಸಬೇಕು ಮತ್ತು ಆದೇಶ ಹೊರಬಿದ್ದ ದಿನವೇ (ಶನಿವಾರ) ಪ್ರಾಚಾ ಅವರ ಕಚೇರಿಗೆ ಭೇಟಿ ನೀಡಬೇಕೆಂದು ನ್ಯಾಯಾಲಯ ಸೂಚಿಸಿದೆ.

ಪ್ರಾಚಾ ಅವರ ಡೆಲ್ ಕಂಪ್ಯೂಟರ್ ಅನ್ನು ಐಒ ಮುದ್ರೆಯೊಂದಿಗೆ ವಶಪಡಿಸಿಕೊಳ್ಳಲು ನಿರ್ದೇಶಿಸಲಾಯಿತು. ರಾಜ್ಯ ಸರ್ಕಾರದ ವೆಚ್ಚದಲ್ಲಿ ವಶಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಬೇಕೆಂದು ನ್ಯಾಯಾಧೀಶರು ಆದೇಶಿಸಿದರು. ಇದಲ್ಲದೆ, "ಪ್ರಚಾ ಅವರಿಗೆ ಕಂಪ್ಯೂಟರ್ ಹಾಳು ಮಾಡದಂತೆ ನಿರ್ದೇಶಿಸಲಾಗಿದೆ" ಎಂದು ನ್ಯಾಯಾಲಯ ತಿಳಿಸಿದೆ.

ದತ್ತಾಂಶ ನಾಶವಾಗಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ವಕೀಲ ಸಮುದಾಯ ಈ ನೇಮಕಾತಿ ಮಾಡುವಂತೆ ಜಂಟಿ ಪ್ರಸ್ತಾವನೆ ಸಲ್ಲಿಸಿತ್ತು. ಈ ವರ್ಷದ ಆರಂಭದಲ್ಲಿ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಸುಳ್ಳು ಪ್ರಕರಣ ದಾಖಲಿಸಲು ಸಾಕ್ಷಿಗೆ ಹೇಳಿಕೊಟ್ಟಿದ್ದ ಆರೋಪದಡಿ ದೆಹಲಿ ಪೊಲೀಸರು ಪ್ರಾಚಾ ಅವರ ಕಚೇರಿ ಮೇಲೆ ದಾಳಿ ನಡೆಸಿದ್ದರು.

ಬಳಿಕ ಪ್ರಾಚಾ ಅವರು ತನ್ನ ಲ್ಯಾಪ್ಟಾಪ್ / ಹಾರ್ಡ್ ಡಿಸ್ಕ್‌ನಲ್ಲಿರುವ ತನ್ನ ಇತರ ಕಕ್ಷೀದಾರರೊಂದಿಗೆ ವಿಶೇಷಾಧಿಕಾರ ಪಡೆದ ವಿಷಯಗಳನ್ನು ಸಾಕ್ಷಿ ಕಾಯಿದೆ ಸೆಕ್ಷನ್ 126 ರ ಪ್ರಕಾರ ರಕ್ಷಿಸಲು ನಿರ್ದೇಶನ ನೀಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದರು. ಪ್ರಚಾ ಅವರ ಆಕ್ಷೇಪಣೆಗಳು ಆಧಾರರಹಿತ ಎಂದು ತಿಳಿಸಿ ಪಟಿಯಾಲಾ ಹೌಸ್‌ ನ್ಯಾಯಾಲಯ ಕಳೆದ ಶುಕ್ರವಾರ ಮಧ್ಯಪ್ರವೇಶಿಸಲು ನಿರಾಕರಿಸಿತ್ತು. ಕಾನೂನಿನ ಪ್ರಕಾರ ಸರ್ಚ್ ವಾರಂಟ್ ನೀಡಬಹುದು ಎಂದು ಆಗ ಅದು ತಿಳಿಸಿತ್ತು. ಆದೇಶದ ವಿರುದ್ಧ ಅದೇ ದಿನ ಸೆಷನ್ಸ್‌ ನ್ಯಾಯಾಲಯಕ್ಕೆ ಪ್ರಾಚಾ ಪರಿಶೀಲನಾ ಅರ್ಜಿ ಸಲ್ಲಿಸಿದ್ದರು,.

ಸರ್ಚ್‌ ವಾರೆಂಟ್‌ಗಳನ್ನು ತಡೆಯದಿದ್ದರೆ ಪರಿಶೀಲನಾ ಅರ್ಜಿಯ ಉದ್ದೇಶ ವ್ಯರ್ಥವಾಗಲಿದೆ ಎಂದು ಪ್ರಾಚಾ ವಾದಿಸಿದ್ದರು. ಅಡ್ವೊಕೇಟ್‌ ಕಮಿಷನರ್‌ ಅವರ ಮೇಲ್ವಿಚಾರಣೆಯಲ್ಲಿ ಪ್ರಾಚಾ ಅವರ ಕಂಪ್ಯೂಟರ್‌ ವಶಪಡಿಸಿಕೊಳ್ಳಲು ಆದೇಶಿಸಿದ ನ್ಯಾಯಾಲಯ ಪ್ರಕರಣದ ವಿಚಾರಣೆಯನ್ನು ಏಪ್ರಿಲ್‌ 28ಕ್ಕೆ ಮುಂದೂಡಿತು.