ಪಂಜಾಬ್ ರಾಷ್ಟ್ರೀಯ ಬ್ಯಾಂಕ್‌ಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿ ಮೆಹುಲ್ ಚೋಕ್ಸಿ ತಮ್ಮನ್ನು “ಘೋಷಿತ ಆರ್ಥಿಕ ಅಪರಾಧಿ” ಎಂದು ಪರಿಗಣಿಸಲು ಜಾರಿ ನಿರ್ದೇಶನಾಲಯವು ಚಾಲನೆ ನೀಡಿರುವ ಪ್ರಕ್ರಿಯೆಗೆ ತಡೆ ಕೋರಿ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ (ಮೆಹುಲ್ ಚೋಕ್ಸಿ ವರ್ಸಸ್ ಮಹಾರಾಷ್ಟ್ರ ಸರ್ಕಾರ ಮತ್ತಿತರರು).
ಪಂಜಾಬ್ ರಾಷ್ಟ್ರೀಯ ಬ್ಯಾಂಕ್‌ಗೆ ಸುಮಾರು ರೂ. 14,500 ಕೋಟಿ ವಂಚನೆ ಮಾಡಿರುವ ಪ್ರಕರಣದಲ್ಲಿ ಚೋಕ್ಸಿ ಆರೋಪಿಯಾಗಿದ್ದು ದೇಶದಿಂದ ಪರಾರಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯವು ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿಗಳ ಕಾಯಿದೆಯ ಸೆಕ್ಷನ್ 4 ಮತ್ತು 12ರ ಅಡಿ ಚೋಕ್ಸಿಯನ್ನು “ಘೋಷಿತ ಆರ್ಥಿಕ ಅಪರಾಧಿ” ಎಂದು ಪರಿಗಣಿಸಲು ಕೋರುವ ಮೂಲಕ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ವಿಶೇಷ ನ್ಯಾಯಾಲಯದ ಮೊರೆ ಹೋಗಿದೆ.
ಈ ನಡುವೆ ಚೋಕ್ಸಿಗೆ ಪೂರ್ವ ಕೆರಿಬಿಯನ್ ಸುಪ್ರೀಂ ಕೋರ್ಟ್ ಇದೇ ವರ್ಷ ಜುಲೈನಲ್ಲಿ ವೈದ್ಯಕೀಯ ಜಾಮೀನು ನೀಡಿದ್ದು ನರಸಂಬಂಧಿ ಚಿಕಿತ್ಸೆಗಾಗಿ ಆಂಟಿಗುವಾ ಹಾಗೂ ಬಾರ್ಬುಡಾಗೆ ತೆರಳಲು ಅನಮತಿಸಿದೆ.
ಚೋಕ್ಸಿ ಪರ ವಕೀಲರಾದ ವಿಜಯ್ ಅಗರ್‌ವಾಲ್ ಮತ್ತು ಆಯುಷ್ ಜಿಂದಾಲ್ ಅವರು ಗುರುವಾರ ಬಾಂಬೆ ಹೈಕೋರ್ಟ್ ಮುಂದೆ ಹಾಜರಾಗಿ ಡೊಮಿನಿಕಾದ ಹೈಕೋರ್ಟ್ ಚೋಕ್ಸಿಯ ಪ್ರಯಾಣಕ್ಕೆ ನಿರ್ಬಂಧವನ್ನು ಹೇರಿದೆ. ಹಾಗಾಗಿ ಅವರು ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ಘೋಷಿತ ಆರ್ಥಿಕ ಅಪರಾಧಿ ಎಂದು ಪರಿಗಣಿಸುವ ಪ್ರಕ್ರಿಯೆಯನ್ನು ತಡೆಹಿಡಿಯಬೇಕು ಎಂದು ಮನವಿ ಮಾಡಿದ್ದಾರೆ.
ಮೇಲಿನ ವಾಸ್ತವಾಂಶದ ಹಿನ್ನೆಲೆಯಲ್ಲಿ, ಭಾರತದಲ್ಲಿ ಕ್ರಿಮಿನಲ್ ಪ್ರಾಸಿಕ್ಯೂಷನ್ ಎದುರಿಸುವ ಭೀತಿಯಿಂದಾಗಿ ಚೋಕ್ಸಿ ಹಿಂತಿರುಗಲು ನಿರಾಕರಿಸುತ್ತಿದ್ದಾರೆ ಎಂದು ಹೇಳಲಾಗದು ಎಂದು ಸಮರ್ಥಿಸಿದ್ದಾರೆ. ಅಲ್ಲದೆ, ತಮ್ಮ ವಿರುದ್ಧ ಎಫ್‌ಐಆರ್ ದಾಖಲಾಗುವ ಮುನ್ನವೇ ಚೋಕ್ಸಿ ದೇಶವನ್ನು ತೊರೆದಿರುವುದರಿಂದ ಅವರನ್ನು “ತಲೆಮರೆಸಿಕೊಂಡಿರುವ ಆರೋಪಿ” ಎನ್ನಲಾಗದು ಎಂದು ವಾದಿಸಿದ್ದಾರೆ.
ಚೋಕ್ಸಿ ಮನವಿಯನ್ನು ವಿರೋಧಿಸಿರುವ ಜಾರಿ ನಿರ್ದೇಶನಾಲಯದ ವಕೀಲ ಹಿತೇನ್ ವೆನೆಗಾಂವ್‌ಕರ್ ಅವರು ತಮಗೆ ವಿಸ್ತೃತ ಪ್ರತಿಕ್ರಿಯೆ ಸಲ್ಲಿಸಲು ನ್ಯಾಯಾಲಯದ ಕಾಲಾವಕಾಶ ಕೋರಿದರು. ಇದಕ್ಕೆ ಸಮ್ಮತಿಸಿದ ನ್ಯಾ. ಸಂದೀಪ್ ಕೆ ಶಿಂಧೆ ಅವರಿದ್ದ ಪೀಠವು ಪ್ರಕರಣದ ವಿಚಾರಣೆಯನ್ನು ಡಿ. 21, 2021ಕ್ಕೆ ಮುಂದೂಡಿತು.