<div class="paragraphs"><p>Karnataka HC, CM Basavaraj Bommai and KPCC President D K Shivakumar</p></div>

Karnataka HC, CM Basavaraj Bommai and KPCC President D K Shivakumar

 
ಸುದ್ದಿಗಳು

ಮೇಕೆದಾಟು ಪಾದಯಾತ್ರೆ: ಸರ್ಕಾರವು ಕ್ರಮಕೈಗೊಳ್ಳಲು ಸಂಪೂರ್ಣ ಅಸಮರ್ಥವಾಗಿದೆಯೇ ಎಂದು ಪ್ರಶ್ನಿಸಿದ ಹೈಕೋರ್ಟ್

Siddesh M S

ಮೇಕೆದಾಟು ಯೋಜನೆಗಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ವತಿಯಿಂದ ರಾಮನಗರದ ಸಂಗಮದಿಂದ ಮೇಕೆದಾಟುವಿಗೆ ಕೈಗೊಂಡಿರುವ ಪಾದಯಾತ್ರೆ ತಡೆಯಲು ಮೀನಮೇಷ ಎಣಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಬುಧವಾರ ಚಾಟಿ ಬೀಸಿತು. “ರಾಜ್ಯ ಸರ್ಕಾರವು ಕ್ರಮಕೈಗೊಳ್ಳಲು ಸಂಪೂರ್ಣವಾಗಿ ಅಸಮರ್ಥವಾಗಿದೆಯೇ? ರಾಮನಗರ ಜಿಲ್ಲಾಧಿಕಾರಿಯನ್ನು ವಜಾ ಮಾಡಲು ನ್ಯಾಯಿಕ ಆದೇಶ ಹೊರಡಿಸಬೇಕೆ?” ಎಂದು ಮುಖ್ಯ ನ್ಯಾಯಮೂರ್ತಿ ನೇತೃತ್ವದ ಪೀಠವು ಸರ್ಕಾರವನ್ನು ಕಟುವಾಗಿ ಪ್ರಶ್ನಿಸಿತು.

ಕೋವಿಡ್‌ನ ಹೊಸ ತಳಿಯಾದ ಒಮಿಕ್ರಾನ್‌ ವ್ಯಾಪಕಗೊಳ್ಳುತ್ತಿರುವ ಸಂದರ್ಭದಲ್ಲಿಯೇ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕೆಪಿಸಿಸಿ ನಡೆಸುತ್ತಿರುವ ಪಾದಯಾತ್ರೆಯನ್ನು ನಿರ್ಬಂಧಿಸಬೇಕು ಎಂದು ಕೋರಿ ಬೆಂಗಳೂರಿನ ತಿಂಡ್ಲು ನಿವಾಸಿ ಎ ವಿ ನಾಗೇಂದ್ರ ಪ್ರಸಾದ್ ಸಲ್ಲಿಸಿದ್ದ ಮನವಿಯನ್ನು ತುರ್ತಾಗಿ ವಿಚಾರಣೆಗೆ ಪರಿಗಣಿಸಬೇಕು ಎಂಬ ವಕೀಲ ಶ್ರೀಧರ್‌ ಪ್ರಭು ಅವರ ಕೋರಿಕೆ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿತು.

“ಮೇಕೆದಾಟು ಯೋಜನೆಗೆ ಆಗ್ರಹಿಸಿ “ನಮ್ಮ ನೀರು, ನಮ್ಮ ಹಕ್ಕು” ಘೋಷಣೆ ಅಡಿ ಆರನೇ ಪ್ರತಿವಾದಿಯಾದ ಕೆಪಿಸಿಸಿ ನಡೆಸುತ್ತಿರುವ ಪಾದಯಾತ್ರೆಗೆ ರಾಜ್ಯ ಸರ್ಕಾರವು ಅನುಮತಿ ನೀಡಿಲ್ಲ. ಈ ಸಂಬಂಧ ಕೆಪಿಸಿಸಿಗೆ ನೋಟಿಸ್‌ ಜಾರಿ ಮಾಡಿದ್ದು, ಸ್ಥಳೀಯ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಿದ್ದರೂ ಪಾದಯಾತ್ರೆಯನ್ನು ಹೇಗೆ ನಡೆಸಲಾಗುತ್ತಿದೆ. ರಾಜ್ಯ ಸರ್ಕಾರ ಏನು ಮಾಡುತ್ತಿದೆ. ನ್ಯಾಯಾಲಯ ನಿರ್ದೇಶನ ನೀಡಿದ ಬಳಿಕ ನೀವು ಕ್ರಮಕೈಗೊಳ್ಳುತ್ತಿರಾ?” ಎಂದು ರಾಜ್ಯ ಸರ್ಕಾರವನ್ನು ಪೀಠವು ತರಾಟೆಗೆ ತೆಗೆದುಕೊಂಡಿತು.

“ಕೋವಿಡ್‌ ಸಾಂಕ್ರಾಮಿಕದ ಈ ಸಂದರ್ಭದಲ್ಲಿ ವಿಶೇಷವಾಗಿ ಕೆಪಿಸಿಸಿಗೆ ಪಾದಯಾತ್ರೆ ನಡೆಸಲು ರಾಜ್ಯ ಸರ್ಕಾರವು ಹೇಗೆ ಮತ್ತು ಏಕೆ ಅನುಮತಿ ನೀಡಿದೆ. ಪಾದಯಾತ್ರೆ ನಡೆಸುವವರ ವಿರುದ್ಧ ಸೂಕ್ತ ಕ್ರಮವನ್ನು ಏಕೆ ಜರುಗಿಸಿಲ್ಲ. ಆರನೇ ಪ್ರತಿವಾದಿಯಾದ ಕೆಪಿಸಿಸಿಯು ಪಾದಯಾತ್ರೆ ನಡೆಸಲು ಅಗತ್ಯ ಅನುಮತಿ ಪಡೆದಿದೆಯೇ? ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪ್ರಮಾಣಿತ ಕಾರ್ಯಸೂಚಿಯನ್ನು (ಎಸ್‌ಒಪಿ) ಜಾರಿಗೊಳಿಸುವ ಕುರಿತು ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ. ಒಂದೊಮ್ಮೆ ಎಸ್‌ಒಪಿ ಉಲ್ಲಂಘನೆಯಾದರೆ ಯಾವ ಕ್ರಮಕೈಗೊಳ್ಳಬಹುದು ಎಂದು ಹೇಳಲು ಬಯಸುತ್ತೀರಾ? ಎಂಬುದರ ಕುರಿತು ವಿವರಣೆ ಸಲ್ಲಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಮತ್ತು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ರಾಮನಗರ ಜಿಲ್ಲಾಧಿಕಾರಿ, ಬಿಬಿಎಂಪಿ ಆಯುಕ್ತರು ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರಿಗೆ ನೋಟಿಸ್‌ ಜಾರಿ ಮಾಡಿದ್ದು, ಶುಕ್ರವಾರದ (ಜ.14) ಪಟ್ಟಿಯಲ್ಲಿ ಮೊದಲ ಪ್ರಕರಣವನ್ನಾಗಿ ಪಟ್ಟಿ ಮಾಡಬೇಕು” ಎಂದು ಹೇಳಿದ ಪೀಠವು ವಿಚಾರಣೆ ಮುಂದೂಡಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಅರವಿಂದ್‌ ಕಾಮತ್‌ ಅವರು “ಕೋವಿಡ್‌ ನಿರ್ಬಂಧದ ನಡುವೆಯೂ ಮೇಕೆದಾಟು ಯೋಜನೆಗೆ ಆಗ್ರಹಿಸಿ ಕಾಂಗ್ರೆಸ್‌ ಜನವರಿ 9ರಂದು ಪಾದಯಾತ್ರೆ ಆರಂಭಿಸಿದ್ದು ಜನವರಿ 19ರವರೆಗೆ ಮುಂದುವರಿಯಲಿದೆ. ಇದರಲ್ಲಿ ಸಣ್ಣಪುಟ್ಟ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳ ಜನರು ಭಾಗವಹಿಸಿ ಮರಳುತ್ತಿದ್ದಾರೆ. ಇದರಿಂದ ಸಾಂಕ್ರಾಮಿಕವು ವ್ಯಾಪಕವಾಗಿ ಹರಡುವ ಸಾಧ್ಯತೆ ಇದೆ. ರಾಜ್ಯದಲ್ಲಿ ಸದ್ಯ 70 ಸಾವಿರ ಸಕ್ರಿಯ ಪ್ರಕರಣಗಳಿದ್ದು, ಒಮಿಕ್ರಾನ್‌ ಹೊಸ ಕೋವಿಡ್‌ ತಳಿಯಿಂದ ರಾಜ್ಯವು ತತ್ತರಿಸಿದೆ. ತಕ್ಷಣ ಪಾದಯಾತ್ರೆಯನ್ನು ನಿರ್ಬಂಧಿಸದಿದ್ದರೆ ಸಾರ್ವಜನಿಕರು ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತವು ಕೆಪಿಸಿಸಿಗೆ ನೀಡಿರುವ ನೋಟಿಸ್‌ ಅನ್ನು ಉಲ್ಲಂಘಿಸಿ ಪಾದಯಾತ್ರೆ ನಡೆಸಲಾಗುತ್ತಿದೆ” ಎಂದು ಪೀಠದ ಗಮನಸೆಳೆದರು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಸುಬ್ರಹ್ಮಣ್ಯ ಅವರು “ರಾಜ್ಯ ಸರ್ಕಾರವು ಎಲ್ಲಾ ರೀತಿಯ ಸಭೆ, ಸಮಾರಂಭ, ಸಮಾವೇಶ, ಪಾದಯಾತ್ರೆ, ಹಬ್ಬ-ಹರಿದಿನ, ಸಮಾವೇಶಗಳನ್ನು ನಿರ್ಬಂಧಿಸಿ ಜನವರಿ 4ರಂದು ಆದೇಶ ಹೊರಡಿಸಿದೆ. ರಾಮನಗರವೂ ಪ್ರವಾಸಿ ತಾಣವಾಗಿದ್ದು, ಅದನ್ನೂ ಒಳಗೊಂಡು ಎಲ್ಲಾ ಪ್ರವಾಸಿ ತಾಣಗಳ ಭೇಟಿಗೂ ನಿರ್ಬಂಧ ವಿಧಿಸಿ ಜನವರಿ 5ರಂದು ಆದೇಶ ಮಾಡಲಾಗಿದೆ. ಜನವರಿ 6ರಂದು ಕೆಪಿಸಿಸಿಗೆ ರಾಮನಗರ ಜಿಲ್ಲಾಧಿಕಾರಿ ಅವರು ನೋಟಿಸ್‌ ಜಾರಿ ಮಾಡಿದ್ದಾರೆ. ಪಾದಯಾತ್ರೆ ಸಾಗುವ ಉದ್ದಕ್ಕೂ ಕೆಪಿಸಿಸಿ ಮತ್ತು ಅದರಲ್ಲಿ ಭಾಗವಹಿಸುವವರ ವಿರುದ್ಧ ಸ್ಥಳೀಯ ಠಾಣೆಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ” ಎಂದರು.

ಕೆಪಿಸಿಸಿ ಪ್ರತಿನಿಧಿಸಿದ್ದ ವಕೀಲ ಅರ್ನವ್‌ ಬಾಗಲವಾಡಿ ಅವರು “ಹಿರಿಯ ವಕೀಲ ಎ ಎಸ್‌ ಪೊನ್ನಣ್ಣ ಅವರು ವಿಚಾರಣೆಯಲ್ಲಿ ಭಾಗಿಯಾಗಲಿದ್ದಾರೆ. ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.

ವಕೀಲ ಶ್ರೀಧರ್‌ ಪ್ರಭು ಅವರು “ರಾಜಕೀಯ ಪಕ್ಷಗಳ ನಡುವೆ ಅನ್ಯೋನ್ಯತೆ ಇದೆ. ನ್ಯಾಯಾಲಯ ಮಧ್ಯಂತರ ಆದೇಶ ಹೊರಡಿಸಬೇಕು” ಎಂದು ಕೋರಿದರು.

ವಕೀಲ ಎಸ್‌ ರಾಜಶೇಖರ್‌ ಅವರು “ಕೋವಿಡ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಾಜ್ಯ ಸರ್ಕಾರವು ಕಾರ್ಯಕ್ರಮ ನಡೆಸುತ್ತಿರುವುದನ್ನು ಆಕ್ಷೇಪಿಸಿ ಮನವಿ ಸಲ್ಲಿಸಲಾಗಿದೆ. ಅದನ್ನೂ ಈ ಪ್ರಕರಣದ ಜೊತೆ ಸೇರಿಸಿ ವಿಚಾರಣೆ ನಡೆಸಬೇಕು” ಎಂದು ಕೋರಿದರು. ಇದಕ್ಕೆ ನ್ಯಾಯಾಲಯವು ಸಮ್ಮತಿಸಿತು.