Karnataka HC and Justice Suraj Govindaraj 
ಸುದ್ದಿಗಳು

ಮೀಸಲು ನಿಗದಿಗೊಳಿಸಿದ ಗ್ರಾಪಂ ಅಧ್ಯಕ್ಷ ಸ್ಥಾನಕ್ಕೆ ಆ ಜಾತಿಗೆ ಸೇರಿದ ಸಾಮಾನ್ಯ ಸದಸ್ಯರು ಸ್ಪರ್ಧಿಸಬಹುದು: ಹೈಕೋರ್ಟ್‌

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ ಸೆಕ್ಷನ್ 5ರ ಅಡಿ ಸಾಮಾನ್ಯ ವರ್ಗದಲ್ಲಿ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿ ಮೀಸಲು ವರ್ಗದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಕ್ಕೆ ಅಡ್ಡಿ ಇಲ್ಲ ಎಂದಿರುವ ನ್ಯಾಯಾಲಯ.

Siddesh M S, Bar & Bench

ಸಾಮಾನ್ಯ ವರ್ಗದಿಂದ ಗ್ರಾಮ ಪಂಚಾಯಿತಿ ಸದಸ್ಯರಾಗಿ ಆಯ್ಕೆಯಾದ ವ್ಯಕ್ತಿ ಸರ್ಕಾರ ಮೀಸಲು ನಿಗದಿಪಡಿಸಿದ ಜಾತಿಗೆ ಸೇರಿದ್ದಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಅಡಿಯಲ್ಲಿ ಸ್ಪರ್ಧೆ ಮಾಡಬಹುದು ಎಂದು ಕರ್ನಾಟಕ ಹೈಕೋರ್ಟ್ ಈಚೆಗೆ ಆದೇಶಿಸಿದೆ.

ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಕುನ್ನಲ ಗ್ರಾಮ ಪಂಚಾಯಿತಿ ಸದಸ್ಯೆ ಚೈತ್ರಾ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರ ನೇತೃತ್ವದ ಏಕಸದಸ್ಯ ಪೀಠ ಭಾಗಶಃ ಪುರಸ್ಕರಿಸಿದೆ. ಅರ್ಜಿದಾರರ ಕೋರಿಕೆಗಳಲ್ಲಿ ಒಂದಾದ ಜಾತಿ ಪ್ರಮಾಣ ಪತ್ರದ ಸಿಂಧುತ್ವವನ್ನು ಜಾತಿ ಪರಿಶೀಲನಾ ಸಮಿತಿ ನಿರ್ಧರಿಸಬೇಕೆ ವಿನಾ ಜಿಲ್ಲಾಧಿಕಾರಿಯಲ್ಲ ಎಂಬುದನ್ನು ನ್ಯಾಯಾಲಯ ಎತ್ತಿ ಹಿಡಿದಿದೆ.

ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯಿದೆ 1993ರ ಸೆಕ್ಷನ್ 5ರ ಅಡಿಯಲ್ಲಿ ಮೀಸಲು ನೀಡುವುದಕ್ಕೆ ಅವಕಾಶವಿದೆ. ಈ ಕಾಯಿದೆಯ ಸೆಕ್ಷನ್ 44 ವಿಭಿನ್ನವಾಗಿದೆ. ಸೆಕ್ಷನ್ 5ರ ಅಡಿಯಲ್ಲಿ ಸಾಮಾನ್ಯ ವರ್ಗದಲ್ಲಿ ಸದಸ್ಯ ಸ್ಥಾನಕ್ಕೆ ಸ್ಪರ್ಧೆ ಮಾಡಿ ಸೆಕ್ಷನ್ 44ರ ಅಡಿಯಲ್ಲಿ ಮೀಸಲು ವರ್ಗದಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವುದಕ್ಕೆ ಅಡ್ಡಿಯಾಗುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಗ್ರಾಮ ಸ್ವರಾಜ್‌ ಮತ್ತು ಪಂಚಾಯಿತ್‌ ರಾಜ್ ಕಾಯಿದೆ ಸೆಕ್ಷನ್ 5ರ ಅಡಿ ಸದಸ್ಯರ ಆಯ್ಕೆಗೆ ಒದಗಿಸಲಾದ ಮೀಸಲಾತಿಯು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವವರಿಗೆ ಪರಿಗಣನೆಗೆ ಬರುವುದಿಲ್ಲ. ಅಲ್ಲದೇ, ಸೆಕ್ಷನ್ 44ರ ಅಡಿಯಲ್ಲಿ ಉಲ್ಲೇಖಿಸಿರುವಂತೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಿಟ್ಟ ಹುದ್ದೆಗಳಿಗೆ ಅರ್ಹರು ಇಲ್ಲದಿದ್ದಲ್ಲಿ ಜನಸಂಖ್ಯಾ ಆಧಾರದಲ್ಲಿ ಮೀಸಲು ಹುದ್ದೆಗಳನ್ನು ಇತರೆ ಜನಾಂಗದವರಿಗೆ ನೀಡಬಹುದಾಗಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅದೇ ರೀತಿಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿಗೆ ಸಂಬಂಧಿಸಿದಂತೆ ಜನಸಂಖ್ಯೆಗೆ ಅನುಗುಣವಾಗಿ ಅಧ್ಯಕ್ಷ ಉಪಾಧ್ಯಕ್ಷ ಹುದ್ದೆಗಳ ಭರ್ತಿ ಮಾಡಬಹುದಾಗಿದೆ. ಆದ್ದರಿಂದ, ಸಾಮಾನ್ಯ ವರ್ಗದಿಂದ ಸದಸ್ಯರಾದರು ಮೀಸಲು ವರ್ಗದಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಿಲ್ಲಬಹುದಾಗಿದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪ್ರತಿವಾದಿ ಆಶಾಮಣಿಯವರಿಗೆ ತಹಶೀಲ್ದಾರ್ ಅವರು ನೀಡಿರುವ ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳಲು ಜಾತಿ ಪರಿಶೀಲನಾ ಸಮಿತಿಗೆ ವಹಿಸಿದ್ದು, ಮುಂದಿನ 45 ದಿನಗಳಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪೀಠ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಪ್ರಕರಣದ ಹಿನ್ನೆಲೆ: ಕುನ್ನಲ ಗ್ರಾಮ ಪಂಚಾಯತ್‌ಗೆ ಹಿಂದುಳಿದ ವರ್ಗ- ಬಿ (ಮಹಿಳೆ)ಗೆ ಮೀಸಲು ನಿಗದಿಪಡಿಸಲಾಗಿತ್ತು. ಈ ಹುದ್ದೆಗೆ ಹಿಂದುಳಿದ ವರ್ಗ ಕೆಟಗಿರಿ- ಬಿ ಗೆ ಸೇರಿದ್ದ ಅರ್ಜಿದಾರರು ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಾಗಿದ್ದರು. ಆದರೆ, ಸಾಮಾನ್ಯ ವರ್ಗದಿಂದ ಸದಸ್ಯರಾಗಿ ಆಯ್ಕೆಯಾಗಿದ್ದ ಹಿಂದುಳಿದ ವರ್ಗಗಳಿಗೆ ಸೇರಿದ ಕೆ ಎಂ ಆಶಾಮಣಿ ಅವರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ಆಶಾಮಣಿ ಸಾಮಾನ್ಯ ವರ್ಗದಿಂದ ಸದಸ್ಯರಾಗಿದ್ದು, ಅಧ್ಯಕ್ಷ ಸ್ಥಾನಕ್ಕೆ ಮೀಸಲು ಸೌಲಭ್ಯವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ. ಇದಕ್ಕೆ ಅವಕಾಶ ನೀಡದಂತೆ ನಿರ್ದೇಶನ ನೀಡಬೇಕು ಎಂದು ಕೋರಿ ಚೈತ್ರಾ ಉಪವಿಭಾಗಾಧಿಕಾರಿಗೆ ಮನವಿ ಮಾಡಿದ್ದರು. ಇದನ್ನು ಉಪವಿಭಾಗಾಧಿಕಾರಿ ಪುರಸ್ಕರಿಸಿದ್ದರು. ಇದನ್ನು 6ನೇ ಪ್ರತಿವಾದಿ ಆಶಾಮಣಿ ಅವರು ಜಿಲ್ಲಾ ದಂಡಾಧಿಕಾರಿ ಅವರಲ್ಲಿ ಪ್ರಶ್ನಿಸಿದ್ದರು. ಉಪವಿಭಾಗಾಧಿಕಾರಿ ಆದೇಶಕ್ಕೆ ತಡೆ ನೀಡಿದ್ದ ಜಿಲ್ಲಾಧಿಕಾರಿಯು ಆಶಾಮಣಿ ಅವರಿಗೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅವಕಾಶ ಕಲ್ಪಿಸಿದ್ದರು. ಜಿಲ್ಲಾ ದಂಡಾಧಿಕಾರಿ ಕ್ರಮ ಪ್ರಶ್ನಿಸಿ ಚೈತ್ರಾ ಹೈಕೋರ್ಟ್ ಮೆಟ್ಟಿಲೇರಿದ್ದರು.

Chaitra Vs State of Karnataka.pdf
Preview